
ಬಿಗ್ ಬಾಸ್ 12 ಮಹಾ ವಿನ್ನರ್ ಗಿಲ್ಲಿ! ಮಂಡ್ಯದ ಹೈದನಿಗೆ ಹೆಚ್‌ಡಿಕೆ ಶುಭಾಶಯ
ಬಿಗ್ ಬಾಸ್ ಕನ್ನಡ ಸೀಸನ್ 12ರ ಟ್ರೋಫಿ ಗೆದ್ದು ಗಿಲ್ಲಿ ನಟರಾಜ್ ಇತಿಹಾಸ ಬರೆದಿದ್ದಾರೆ. ರಕ್ಷಿತಾ ಶೆಟ್ಟಿ ಅವರನ್ನು ಹಿಂದಿಕ್ಕಿ 50 ಲಕ್ಷ ರೂಪಾಯಿ ಬಹುಮಾನ ಮುಡಿಗೇರಿಸಿಕೊಂಡ ಮಳವಳ್ಳಿಯ ಪ್ರತಿಭೆಯ ಸಂಪೂರ್ಣ ವಿವರ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾಮಿಡಿ ನಟ ಗಿಲ್ಲಿ ಹೊಸ ಇತಿಹಾಸ ಬರೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಜನರ ಮನಗೆದ್ದಿದ್ದ ಇತರೆ 23 ಸ್ಪರ್ಧಿಗಳನ್ನು ಹಿಂದಿಕ್ಕಿದ ಗಿಲ್ಲಿ, ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸುಮಾರು 40 ಕೋಟಿಗೂ ಅಧಿಕ ದಾಖಲೆ ಮಟ್ಟದ ವೋಟ್ ಪಡೆದು ಗೆದ್ದ ಗಿಲ್ಲಿ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕಾರಣಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಗಿಲ್ಲಿ ಅಲಿಯಾಸ್ ಶ್ರೀ ನಟರಾಜ್ ಅವರಿಗೆ ಈಗ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಗಿಲ್ಲಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಅಲ್ಲದೆ, ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ ಮತ್ತು ಹೆಸರು ಬರಲಿ ಎಂದು ಹಾರೈಸುವುದರ ಜೊತೆಗೆ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ ಅವರಿಗೂ ಶುಭ ಕೋರಿದ್ದಾರೆ. ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ವಿಜೇತ ಎಂದು ಘೋಷಿಸುತ್ತಿದ್ದಂತೆ ಗಿಲ್ಲಿ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಹೆಚ್‌ಡಿಕೆ ಟ್ವೀಟ್
ವಿಜೇತರಾದ ಗಿಲ್ಲಿ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಲಭಿಸಿದ್ದು, ಅವರ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದಾರೆ. ಮೊದಲ ದಿನದಿಂದಲೂ ಬಿಗ್ ಬಾಸ್ ಮನೆಯಲ್ಲಿ ತನ್ನ ಸಹಜ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದ ಗಿಲ್ಲಿ ಅವರ ಗೆಲುವನ್ನು ಬಹುತೇಕ ಎಲ್ಲರೂ ನಿರೀಕ್ಷಿಸಿದ್ದರು. ಗಿಲ್ಲಿಯ ಈ ಜನಪ್ರಿಯತೆಯಿಂದಾಗಿ ಈ ಬಾರಿ ಬಿಗ್ ಬಾಸ್ ಪ್ರೇಕ್ಷಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿತ್ತು ಮತ್ತು ಎಲ್ಲಾ ವರ್ಗದ ಕುಟುಂಬಗಳು ಈ ಕಾರ್ಯಕ್ರಮವನ್ನು ಸವಿದಿವೆ.

