
ಬಿಗ್‌ಬಾಸ್‌ನಲ್ಲಿ ಗಿಲ್ಲಿ ಹವಾ ಜೋರಾಗಿದೆ.
BBK12| ಜ.18ರ ಮಹಾ ಫಿನಾಲೆ: ಕಪ್ ಗಿಲ್ಲಿಗೋ, ಕರವೇ ಅಶ್ವಿನಿಗೋ; 'ಬಣ' ರಾಜಕೀಯ ಜೋರು
ಅಶ್ವಿನಿಗೌಡ ಹಾಗೂ ಗಿಲ್ಲಿನಟನನ್ನು ಬೆಂಬಲಿಸುವಲ್ಲಿ ಅಭಿಮಾನಿಗಳ ನಡುವೆ ದೊಡ್ಡ ಸಮರ ಏರ್ಪಟ್ಟಿದೆ. ಜತೆಗೆ ರಾಜಕೀಯ ನಾಯಕರ ಹಾಗೂ ಕರವೇ ನಾಯಕರ ಹೇಳಿಕೆ ಅಭಿಮಾನಿಗಳ ನಡುವಿನ 'ರಾಜಕೀಯ' ಕ್ಕೆ ಕಾರಣವಾಗಿದೆ.
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಈ ಬಾರಿಯ ಬಿಗ್‌ಬಾಸ್ - 12 ಸೀಸನ್ ಹಿಂದೆಂದೂ ಕಾಣದಂತಹ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಅಂತಿಮ ಹಂತಕ್ಕೆ ತಲುಪಿರುವ ಈ ಶೋ ಕೇವಲ ಮನರಂಜನೆ ಹಾಗೂ ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗಿರದೆ, ಇಂದು ರಾಜಕೀಯ ಮುಖಂಡರೂ ಕೂಡ ಈ ಬಾರಿಯ ಬಿಗ್‌ಬಾಸ್‌ಗೆ ಬೆಂಬಲ ಸೂಚಿಸುತ್ತಿರುವುದು ವಿಶೇಷ.
ಈ ಬಾರಿಯ ಬಿಗ್‌ಬಾಸ್ ಸೀಸನ್‌ನಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಹೆಸರು ಮಂಡ್ಯದ ಮಣ್ಣಿನ ಮಗ ಗಿಲ್ಲಿನಟ. ಮಂಡ್ಯದ ಹಳ್ಳಿಯೊಂದರಿಂದ ಬಂದ ಗಿಲ್ಲಿನಟ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. ಸಾಮಾನ್ಯ ಹಳ್ಳಿಗನಂತೆ ಕಾಣುವ ಗಿಲ್ಲಿನಟ ತನ್ನ ಮುಗ್ಧತೆ, ನೇರ ನುಡಿ ಹಾಗೂ ಹಾಸ್ಯ ಪ್ರಜ್ಞೆಯಿಂದ ಜನರ ಮನ ಗೆದ್ದಿದ್ದಾರೆ. ಬಿಗ್‌ಬಾಸ್ ಮನೆಗೆ ಬರುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿದ್ದರಾದರೂ, ಈ ರಿಯಾಲಿಟಿ ಶೋ ಅವರನ್ನು ಮನೆಮಾತಾಗಿಸಿದೆ. ಅವರು ಬಿಗ್‌ಬಾಸ್ ಛಾಯೆಯನ್ನು ಮೀರಿಸಿ ಒಬ್ಬ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಗಿಲ್ಲಿನಟನ ಅಭಿಮಾನಿಗಳು ರಾಜ್ಯಾದ್ಯಂತ ಹರಡಿದ್ದು, ಹಳ್ಳಿ ಹಳ್ಳಿಗಳಲ್ಲಿ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟ ಮ್ಯಾನರಿಸಂ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಸ್ಪರ್ಧಿ 'ಗಿಲ್ಲಿ ನಟ' ಪರವಾಗಿ ನೆಟ್ಟಿಗರು ಅಭಿಯಾನ ಆರಂಭಿಸಿದರೆ, ಮತ್ತೊಬ್ಬ ಪ್ರಬಲ ಸ್ಪರ್ಧಿ ಹಾಗೂ ಹೋರಾಟಗಾರ್ತಿ ಅಶ್ವಿನಿ ಗೌಡ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬಹಿರಂಗ ಬೆಂಬಲ ಘೋಷಿಸಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಅಶ್ವಿನಿ ಗೌಡ ಅವರನ್ನು ಗೆಲ್ಲಿಸುವಂತೆ ಕರೆ ನೀಡಿರುವುದು ಮತ್ತು ಸಂಘಟನೆ ಅವರ ಬೆಂಬಲಕ್ಕೆ ನಿಂತಿರುವುದು 'ಗಿಲ್ಲಿ ನಟ' ಅಭಿಮಾನಿಗಳನ್ನು ಕೆರಳಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.
ಮನರಂಜನಾ ಕಾರ್ಯಕ್ರಮವೊಂದರಲ್ಲಿ ಸಂಘಟನೆಯ ಪ್ರಭಾವ ಬಳಸುವುದು ಸರಿಯಲ್ಲ ಎಂಬುದು ಗಿಲ್ಲಿ ನಟ ಅಭಿಮಾನಿಗಳ ಪ್ರಮುಖ ಆಕ್ಷೇಪವಾಗಿದ್ದರೆ, ಕನ್ನಡ ಪರ ಹೋರಾಟದ ಹಿನ್ನೆಲೆಯುಳ್ಳ ಮಹಿಳಾ ಸ್ಪರ್ಧಿಯನ್ನು ಬೆಂಬಲಿಸುವುದು ತಪ್ಪಲ್ಲ ಎಂಬುದು ಕರವೇ ಪರ ವಾದವಾಗಿದೆ. ಹಿಂದೆ ಗಿಲ್ಲಿ ನಟ ಅವರ ವರ್ತನೆ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದ್ದನ್ನು ವಿರೋಧಿ ಬಣ ಪ್ರಸ್ತಾಪಿಸುತ್ತಿದ್ದರೆ, ಗಿಲ್ಲಿ ಅಭಿಮಾನಿಗಳು ಇದನ್ನು ತಮ್ಮ ನೆಚ್ಚಿನ ಸ್ಪರ್ಧಿಯನ್ನು ಕುಗ್ಗಿಸುವ ತಂತ್ರ ಎಂದು ಜರೆಯುತ್ತಿದ್ದಾರೆ.
ಗಿಲ್ಲಿನಟ ಯಾರು?
ಗಿಲ್ಲಿ ನಟ ಅವರ ನಿಜವಾದ ಹೆಸರು ನಟರಾಜ್. ಇವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಎಂಬ ಪುಟ್ಟ ಹಳ್ಳಿಯವರು. ರೈತ ಕುಟುಂಬದಿಂದ ಬಂದ ನಟರಾಜ್, ಬಾಲ್ಯದಿಂದಲೂ ಕೃಷಿ ಮತ್ತು ಗ್ರಾಮೀಣ ಬದುಕಿನೊಂದಿಗೆ ಬೆಳೆದವರು. ತಮ್ಮ ಶಾಲಾ ಶಿಕ್ಷಣದ ನಂತರ ಐಟಿಐ ಪೂರ್ಣಗೊಳಿಸಿದ ಇವರು, ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಬೆಂಗಳೂರಿಗೆ ಬಂದರು. ಆರಂಭದಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ಆರ್ಟ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದ ಇವರು, ನಂತರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಶಿಷ್ಟ ಹಾಸ್ಯ ಶೈಲಿಯಿಂದ ಗಮನ ಸೆಳೆದರು.
ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಡಿದ 'ನಲ್ಲಿಮೂಳೆ' ವಿಡಿಯೋ ಭಾರೀ ವೈರಲ್ ಆಗಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಇದಾದ ನಂತರ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು ಸೀಸನ್ 4'ರಲ್ಲಿ ಭಾಗವಹಿಸಿ ರನ್ನರ್ ಅಪ್ ಪಟ್ಟ ಗೆದ್ದರು. ನಂತರ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಭರ್ಜರಿ ಬ್ಯಾಚುಲರ್ಸ್' ಮತ್ತು 'ಕ್ವಾಟ್ಲೆ ಕಿಚನ್' ಅಂತಹ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನೆಮಾತಾದರು. ಇವರ ಲವಲವಿಕೆಯ ಮಾತು ಮತ್ತು ಹಳ್ಳಿಯ ಸೊಗಡಿನ ಹಾಸ್ಯ ಜನರಿಗೆ ಬಹಳ ಇಷ್ಟವಾಯಿತು.
ಬಿಗ್ ಬಾಸ್ ಮನೆ ಪ್ರವೇಶಿಸಿದ ದಿನದಿಂದಲೇ ಗಿಲ್ಲಿ ನಟ ತಮ್ಮ ನೇರ ಮಾತು ಮತ್ತು ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದರು. ಗಿಲ್ಲಿ ಅವರು ಕ್ಯಾಮರಾ ಮುಂದೆ ಒಂದು ರೀತಿ, ಹಿಂದೆ ಒಂದು ರೀತಿ ಇರದೆ, ಬಹಳ ನ್ಯಾಚುರಲ್ ಆಗಿ ಇರುತ್ತಾರೆ ಎಂದು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಜಗಳಗಳು ನಡೆದಾಗ ತಮ್ಮ ಹಾಸ್ಯದ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಕಲೆ ಇವರಿಗೆ . ಆದರೆ, ಕೆಲವು ಬಾರಿ ಇವರ ಹೀಯಾಳಿಸುವ ಹಾಸ್ಯಗಳು ಸಹ-ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಇತರರಿಗೆ ನೋವುಂಟು ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಗಿಲ್ಲಿ ಅವರಿಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ಕೂಡ "ಗಿಲ್ಲಿಯ ನೈಜ ವ್ಯಕ್ತಿತ್ವ ನನಗೆ ಇಷ್ಟ, ಈ ಬಾರಿ ಅವರೇ ಗೆಲ್ಲಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಪರವಾಗಿ ದೊಡ್ಡ ಮಟ್ಟದ ಅಭಿಯಾನಗಳು ನಡೆಯುತ್ತಿವೆ.
ಬಿಗ್‌ಬಾಸ್ ಶೋಗೆ ರಾಜಕಾರಣಿಗಳ ಬೆಂಬಲ
ಈ ಬಾರಿಯ ವಿಶೇಷವೆಂದರೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕೇವಲ ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ, ರಾಜಕೀಯ ನಾಯಕರು ಹಾಗೂ ಸಂಘಟನೆಗಳು ಬಹಿರಂಗವಾಗಿ ಬೆಂಬಲ ಸೂಚಿಸುತ್ತಿರುವುದು. ಗಿಲ್ಲಿನಟನಿಗೆ ಹಳೇ ಮೈಸೂರು ಭಾಗದ ರಾಜಕಾರಣಿಗಳ ಬೆಂಬಲ ದೊಡ್ಡ ಮಟ್ಟದಲ್ಲಿದೆ. ಮಂಡ್ಯದ ಪ್ರಭಾವಿ ನಾಯಕರು ತಮ್ಮ ಜಿಲ್ಲೆಯ ಹುಡುಗ ಗೆಲ್ಲಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಗಿಲ್ಲಿ ನಟ ನಮ್ಮ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ಪ್ರತಿಭೆ. ರೈತ ಕುಟುಂಬದಿಂದ ಬಂದ ಈ ಯುವಕ ತನ್ನ ನೈಜ ಆಟದಿಂದ ಎಲ್ಲರ ಮನ ಗೆದ್ದಿದ್ದಾನೆ. ಬಿಗ್ ಬಾಸ್ ಟ್ರೋಫಿ ಗೆಲ್ಲಲು ಆತನಿಗೆ ಹೆಚ್ಚಿನ ಮತಗಳನ್ನು ನೀಡುವಂತೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಜನರಲ್ಲಿ ಮನವಿ ಮಾಡಿದ್ದರು.
ಜೆಡಿಎಸ್ ಹಿರಿಯ ನಾಯಕ ಡಿ.ಸಿ. ತಮ್ಮಣ್ಣ ಅವರು ಕೂಡ ಗಿಲ್ಲಿ ನಟನ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. "ಗಿಲ್ಲಿ ನಟ ಅತ್ಯಂತ ಯೋಗ್ಯ ಸ್ಪರ್ಧಿ, ಆತನ ಗೆಲುವು ಲಕ್ಷಾಂತರ ಸಾಮಾನ್ಯ ಜನರ ಧ್ವನಿಯಾಗಲಿದೆ" ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಳವಳ್ಳಿ ಮತ್ತು ಮಂಡ್ಯ ಭಾಗದ ಹಲವು ಸ್ಥಳೀಯ ಜನಪ್ರತಿನಿಧಿಗಳು ಕೂಡ ವಾಟ್ಸಾಪ್ ಮತ್ತು ಫೇಸ್ಬುಕ್ ಮೂಲಕ 'ಗಿಲ್ಲಿ'ಗೆ ವೋಟ್ ಮಾಡುವಂತೆ ಅಭಿಯಾನ ಆರಂಭಿಸಿದ್ದರು.
ಇನ್ನು ಇನ್ನೊಬ್ಬ ಪ್ರಬಲ ಮಹಿಳಾ ಸ್ಪರ್ಧಿ ಅಶ್ವಿನಿಗೌಡ ಅವರ ವಿಷಯಕ್ಕೆ ಬಂದರೆ, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅವರು ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಇನ್ನು ಇತ್ತೀಚೆಗೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಆಗಿದ್ದರು. ಈ ಭೇಟಿಯನ್ನು ಸಹ ನಾರಾಯಣಗೌಡರು ಅಶ್ವಿನಿಯನ್ನು ಗೆಲ್ಲಿಸಲೆಂದು ಸುದೀಪ್ ಅವರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ನಾರಾಯಣಗೌಡರು ತಮ್ಮ ಮಗನ ಮದುವೆ ಆಮಂತ್ರಣ ನೀಡಲೆಂದು ಸುದೀಪ್ ಮನೆಗೆ ಹೋಗಿದ್ದರು ಎಂದು ಸ್ಪಷ್ಟನೆ ನೀಡಿದ್ದರು. ಕನ್ನಡ ಮತ್ತು ಕನ್ನಡಿಗರ ಪರವಾಗಿ ಹೋರಾಟ ಮಾಡುವ ಸಂಘಟನೆಯ ಶಕ್ತಿ ಅಶ್ವಿನಿ ಅವರ ಬೆನ್ನಿಗಿದೆ.
ಮತ್ತೊಂದೆಡೆ ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಹಂತ ಹತ್ತಿರವಾಗುತ್ತಿದ್ದಂತೆ, ರಕ್ಷಿತಾ ಶೆಟ್ಟಿ ಪರವಾಗಿ ಬೆಂಬಲದ ಅಲೆ ಜೋರಾಗಿದೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ಹಾಗೂ ತುಳು ಚಿತ್ರರಂಗದ ಖ್ಯಾತ ನಟ ರೂಪೇಶ್ ಶೆಟ್ಟಿ ಅವರು ರಕ್ಷಿತಾ ಶೆಟ್ಟಿ ಅವರನ್ನು ಬೆಂಬಲಿಸಿ ವಿಶೇಷವಾಗಿ ತುಳು ಭಾಷೆಯಲ್ಲಿ ವೀಡಿಯೊ ಸಂದೇಶ ಹಂಚಿಕೊಳ್ಳುವ ಮೂಲಕ ಪ್ರಚಾರ ನಡೆಸಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ತುಳುನಾಡು ಮತ್ತು ತುಳು ಭಾಷೆಯ ಬಗ್ಗೆ ತೋರುತ್ತಿರುವ ಅಭಿಮಾನವನ್ನು ಮೆಚ್ಚಿಕೊಂಡಿರುವ ರೂಪೇಶ್ ಶೆಟ್ಟಿ, ತಮ್ಮದೇ ಶೈಲಿಯಲ್ಲಿ ತುಳುವಿನಲ್ಲಿ ಮಾತನಾಡಿ ಮತಯಾಚಿಸಿದ್ದಾರೆ. "ನಮ್ಮ ತುಳುನಾಡಿನ ಹೆಣ್ಣುಮಗಳು ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ಅವರು ಫಿನಾಲೆ ತಲುಪಲು ಮತ್ತು ಗೆಲ್ಲಲು ನಿಮ್ಮೆಲ್ಲರ ಬೆಂಬಲ ಅಗತ್ಯ. ದಯವಿಟ್ಟು ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡಿ" ಎಂದು ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಕರಾವಳಿ ಉತ್ಸವ ಹಾಗೂ ಉಡುಪಿ ಉತ್ಸವಗಳಲ್ಲೂ ರಕ್ಷಿತಾ ಶೆಟ್ಟಿ ಪರವಾಗಿ ದೊಡ್ಡ ಮಟ್ಟದ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ರಕ್ಷಿತಾ ಅವರ ಅಭಿಮಾನಿಗಳು ಬ್ಯಾನರ್ ಮತ್ತು ಪೋಸ್ಟರ್‌ಗಳ ಮೂಲಕ ಕರಾವಳಿಯಾದ್ಯಂತ ಸಂಚರಿಸಿ ಮತ ಕೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಭಾಷೆಯ ವಿಚಾರವಾಗಿ ಪರ-ವಿರೋಧ ಚರ್ಚೆಗೆ ಒಳಗಾಗಿದ್ದ ರಕ್ಷಿತಾ, ಈಗ ಗಟ್ಟಿಯಾಗಿ ನಿಂತು ಆಟವಾಡುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ಅವರಿಗೆ ಬಂಟ್ಸ್ ಸಮುದಾಯ ಮತ್ತು ಕರಾವಳಿ ಭಾಗದ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ರಕ್ಷಿತಾ ಪರವಾಗಿ ದೊಡ್ಡ ಮಟ್ಟದ ಪ್ರಚಾರ ನಡೆಯುತ್ತಿದ್ದು, ಅಲ್ಲಿನ ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಮುದಾಯದ ಮುಖಂಡರು ರಕ್ಷಿತಾ ಅವರ ಜಾಣ್ಮೆ ಹಾಗೂ ಕರಾವಳಿ ಸಂಸ್ಕೃತಿಯನ್ನು ಅವರು ಬಿಂಬಿಸುತ್ತಿರುವ ರೀತಿಗೆ ಮಾರುಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತಾ ಪರವಾಗಿ ಕರಾವಳಿಯ ಜನತೆ ತಮ್ಮ ಮನೆ ಮಗಳನ್ನು ಗೆಲ್ಲಿಸಲು ಒಂದಾಗಿದ್ದಾರೆ.
ಇನ್ನುಳಿದಂತೆ ಧನುಷ್, ರಘು ಹಾಗೂ ಕಾವ್ಯಾ ಶೈವ ಅವರು ಕೂಡ ಸದ್ದಿಲ್ಲದೆ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಧನುಷ್ ಅವರ ಕಷ್ಟಪಟ್ಟು ಆಡುವ ಗುಣ ಮತ್ತು ರಘು ಅವರ ಸಮಯಪ್ರಜ್ಞೆ ಯುವಕರನ್ನು ಸೆಳೆದಿದೆ. ಕಾವ್ಯಾ ಶೈವ ಅವರು ಕೂಡ ಮಹಿಳಾ ಪ್ರೇಕ್ಷಕರ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಫಿನಾಲೆ ಕೇವಲ ಟ್ರೋಫಿಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲ. ಇದು ಮಂಡ್ಯದ ದೇಸಿ ಪ್ರತಿಭೆ, ಕರವೇ ಸಂಘಟನೆಯ ಶಕ್ತಿ ಹಾಗೂ ಕರಾವಳಿಯ ಅಸ್ಮಿತೆಯ ನಡುವಿನ ಪೈಪೋಟಿಯಂತಿದೆ. ರಾಜಕೀಯ ನಾಯಕರು ಮತ್ತು ಸಂಘಟನೆಗಳ ನೇರ ಪ್ರವೇಶದಿಂದಾಗಿ ಈ ಬಾರಿಯ ಮತದಾನದ ಪ್ರಮಾಣವು ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, ಈ ಬಾರಿಯ ಫಿನಾಲೆ ಕೇವಲ ಸ್ಪರ್ಧಿಗಳ ನಡುವಿನ ಹಣಾಹಣಿಯಾಗಿ ಉಳಿಯದೆ, ಸೋಶಿಯಲ್ ಮೀಡಿಯಾದ 'ಜನಪ್ರಿಯತೆ' ಮತ್ತು ಸಂಘಟನೆಯ 'ಶಕ್ತಿ ಪ್ರದರ್ಶನ'ದ ನಡುವಿನ ಜಿದ್ದಾಜಿದ್ದಾಗಿ ಮಾರ್ಪಟ್ಟಿದೆ.

