
ನಿರ್ದೇಶಕ ವಿಕ್ರಮ್ ಭಟ್ ಮತ್ತು ಪತ್ನಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು
ಉದಯಪುರದ ಜೈಲಿನಲ್ಲಿದ್ದ ಖ್ಯಾತ ಬಾಲಿವುಡ್ ನಿರ್ದೇಶಕ ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಚಲನಚಿತ್ರ ನಿರ್ಮಾಣದ ಹೆಸರಿನಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜೈಲು ಪಾಲಾಗಿದ್ದ ನಿರ್ದೇಶಕ ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ದಂಪತಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಡಾ. ಅಜಯ್ ಮುರ್ಡಿಯಾ ಅವರು ತಮ್ಮ ದೂರಿನಲ್ಲಿ ತಿಳಿಸಿರುವಂತೆ, ವಿಕ್ರಮ್ ಭಟ್ ಮತ್ತು ಅವರ ತಂಡವು ಮುರ್ಡಿಯಾ ಅವರಿಗೆ ಚಿತ್ರರಂಗದಲ್ಲಿ ಹಣ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದರು. ಮುರ್ಡಿಯಾ ಅವರ ದಿವಂಗತ ಪತ್ನಿಯ ಜೀವನದ ಆಧಾರಿತ ಬಯೋಪಿಕ್ (ಜೀವನಾಧಾರಿತ ಚಿತ್ರ) ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳನ್ನು ನಿರ್ಮಿಸುವುದಾಗಿ ವಿಕ್ರಮ್ ಭಟ್ ಭರವಸೆ ನೀಡಿದ್ದರು. ಈ ಪ್ರಾಜೆಕ್ಟ್‌ಗಳಿಂದ ಸುಮಾರು 200 ಕೋಟಿ ರೂಪಾಯಿ ಲಾಭ ಬರಲಿದೆ ಎಂದು ನಂಬಿಸಲಾಗಿತ್ತು.
30 ಕೋಟಿ ರೂಪಾಯಿ ವಂಚನೆಯ ಆರೋಪ
ಈ ಸಿನಿಮಾಗಳ ನಿರ್ಮಾಣಕ್ಕಾಗಿ ಡಾ. ಮುರ್ಡಿಯಾ ಅವರು ಹಂತ ಹಂತವಾಗಿ ಸುಮಾರು 30 ಕೋಟಿ ರೂಪಾಯಿಗೂ ಅಧಿಕ ಹಣವನ್ನು (ಕೆಲವು ವರದಿಗಳ ಪ್ರಕಾರ 44 ಕೋಟಿ ರೂ.) ವಿಕ್ರಮ್ ಭಟ್ ಅವರ ಖಾತೆಗೆ ವರ್ಗಾಯಿಸಿದ್ದರು. ಆದರೆ, ಒಪ್ಪಂದದಂತೆ ಸಿನಿಮಾಗಳು ಪೂರ್ಣಗೊಳ್ಳಲಿಲ್ಲ ಮತ್ತು ಹಣವನ್ನು ಚಿತ್ರ ನಿರ್ಮಾಣಕ್ಕೆ ಬಳಸುವ ಬದಲಿಗೆ ವೈಯಕ್ತಿಕ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಮುರ್ಡಿಯಾ ಆರೋಪಿಸಿದ್ದಾರೆ.
ನಕಲಿ ಬಿಲ್‌ಗಳ ಸೃಷ್ಟಿ: ಹಣ ಎಲ್ಲಿಗೆ ಹೋಯಿತು ಎಂದು ಕೇಳಿದಾಗ, ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ವಿವಿಧ ನಕಲಿ ವೆಂಡರ್‌ಗಳ ಹೆಸರಿನಲ್ಲಿ ಸುಳ್ಳು ಬಿಲ್‌ಗಳು ಮತ್ತು ವೋಚರ್‌ಗಳನ್ನು ಸೃಷ್ಟಿಸಿ ಹಣವನ್ನು ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಬಂಧನ ಮತ್ತು ಜೈಲು ವಾಸ
ಈ ಹಿನ್ನೆಲೆಯಲ್ಲಿ ಡಾ. ಮುರ್ಡಿಯಾ ಅವರು ಉದಯಪುರದ ಭೂಪಾಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಡಿಸೆಂಬರ್ 7, 2025 ರಂದು ರಾಜಸ್ಥಾನ ಪೊಲೀಸರು ಮುಂಬೈನಲ್ಲಿ ವಿಕ್ರಮ್ ಭಟ್ ಮತ್ತು ಅವರ ಪತ್ನಿಯನ್ನು ಬಂಧಿಸಿ ಉದಯಪುರಕ್ಕೆ ಕರೆತಂದಿದ್ದರು. ಅಂದಿನಿಂದ ಇವರು ಉದಯಪುರದ ಜೈಲಿನಲ್ಲಿದ್ದರು.
ಈಗ ಸುಪ್ರೀಂ ಕೋರ್ಟ್ ರಾಜಸ್ಥಾನ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ನಿಗದಿಪಡಿಸಿದೆ.

