
ತಂದೆಯ ನಿಧನದ ನಂತರ ಮೊದಲ ಬಾರಿಗೆ ಸನ್ನಿ ಡಿಯೋಲ್ ತಮ್ಮ ಮಲ ಸಹೋದರಿಯರಾದ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ವೈಮನಸ್ಸು ಮರೆತು ಒಂದಾದರೇ ಸನ್ನಿ ಮತ್ತು ಹೇಮಾಮಾಲಿನಿ ಪುತ್ರಿಯರು?
ಮುಂಬೈನಲ್ಲಿ ನಡೆದ 'ಬಾರ್ಡರ್ 2' ವಿಶೇಷ ಪ್ರದರ್ಶನದಲ್ಲಿ ಸನ್ನಿ ಡಿಯೋಲ್ ಅವರು ತಮ್ಮ ಸಹೋದರಿಯರಾದ ಇಶಾ ಮತ್ತು ಅಹಾನಾ ಡಿಯೋಲ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ದಶಕಗಳ ಅಂತರವನ್ನು ಅಳಿಸಿಹಾಕಿದ್ದಾರೆ.
ಖ್ಯಾತ ಬಾಲಿವುಡ್ ನಟ ಧರ್ಮೇಂದ್ರ ಅವರಿಗೆ ಕೇಂದ್ರ ಸರ್ಕಾರದಿಂದ ಮರಣೋತ್ತರವಾಗಿ 'ಪದ್ಮವಿಭೂಷಣ' ಪ್ರಶಸ್ತಿ ಘೋಷಣೆಯಾಗಿದ್ದು, ಇತ್ತ ಅವರ ಪುತ್ರ ಸನ್ನಿ ಡಿಯೋಲ್ ತಮ್ಮ ಸಹೋದರಿಯರಾದ ಇಶಾ ಮತ್ತು ಅಹಾನಾ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅಪ್ರತಿಮ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಹಿರಿಯ ನಟ ಧರ್ಮೇಂದ್ರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ 'ಪದ್ಮವಿಭೂಷಣ'ವನ್ನು ಮರಣೋತ್ತರವಾಗಿ ನೀಡಲಾಗಿದೆ. 2025ರ ನವೆಂಬರ್ 24ರಂದು ಇಹಲೋಕ ತ್ಯಜಿಸಿದ್ದ ಧರ್ಮೇಂದ್ರ ಅವರು, ಕೊನೆಯವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅವರ ಅಭಿನಯದ ಕೊನೆಯ ಚಿತ್ರ 'ಇಕ್ಕಿಸ್' ಜನವರಿ 1ರಂದು ತೆರೆಕಂಡು ಪ್ರೇಕ್ಷಕರ ಮನ ಗೆದ್ದಿದೆ.
ಸಹೋದರಿಯರೊಂದಿಗೆ ಸನ್ನಿ ಡಿಯೋಲ್
ತಂದೆಯ ನಿಧನದ ನಂತರ ಮೊದಲ ಬಾರಿಗೆ ಸನ್ನಿ ಡಿಯೋಲ್ ತಮ್ಮ ಮಲ ಸಹೋದರಿಯರಾದ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ 'ಬಾರ್ಡರ್ 2' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಅವರು ಕ್ಯಾಮೆರಾಗಳಿಗೆ ಆತ್ಮೀಯವಾಗಿ ಪೋಸ್ ನೀಡಿದರು. ಸನ್ನಿ ಡಿಯೋಲ್ ಇಬ್ಬರೂ ಸಹೋದರಿಯರ ಹೆಗಲ ಮೇಲೆ ಕೈಹಾಕಿ ನಗುತ್ತಾ ನಿಂತಿದ್ದ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕುಟುಂಬದ ನಡುವಿನ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಗೈಟಿ ಗ್ಯಾಲಕ್ಸಿ ಚಿತ್ರಮಂದಿರಕ್ಕೆ ಭೇಟಿ
'ಬಾರ್ಡರ್ 2' ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಸನ್ನಿ ಡಿಯೋಲ್ ಮುಂಬೈನ ಐತಿಹಾಸಿಕ ಗೈಟಿ ಗ್ಯಾಲಕ್ಸಿ ಚಿತ್ರಮಂದಿರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಅಭಿಮಾನಿಗಳಿಗೆ ಅಚ್ಚರಿ ನೀಡಿದರು. ಈ ವೇಳೆ ನಟ ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಕೂಡ ಸನ್ನಿ ಜೊತೆಗಿದ್ದರು. ಚಿತ್ರಮಂದಿರದ ಒಳಗೆ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಮಾತನಾಡಿದ ಸನ್ನಿ, ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. 'ಬಾರ್ಡರ್ 2' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಸನ್ನಿ ಡಿಯೋಲ್ ಅವರ ಆಕ್ಷನ್ ಅವತಾರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ.
ಅನುರಾಗ್ ಸಿಂಗ್ ನಿರ್ದೇಶನದ 'ಬಾರ್ಡರ್ 2' ಸಿನಿಮಾ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಜಾಗತಿಕವಾಗಿ ಈ ಚಿತ್ರ ಈಗಾಗಲೆ 150 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ.
ಜೆ.ಪಿ. ದತ್ತಾ ಅವರ 1997ರ ಐತಿಹಾಸಿಕ ಬ್ಲಾಕ್‌ಬಸ್ಟರ್ 'ಬಾರ್ಡರ್' ಚಿತ್ರದ ಮುಂದುವರಿದ ಭಾಗವಾದ ಈ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆಗೆ ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

