Asha Bhosle | ಆಶಾ ಭೋಸ್ಲೆ ಸುದ್ದಿ ಬಿತ್ತರಿಸಿದ ಪಾಕ್ ವಾಹಿನಿಗೆ ಶೋಕಾಸ್ ನೋಟಿಸ್
x

ಖ್ಯಾತ ಗಾಯಕಿ ಆಶಾ ಭೋಂಸ್ಲೆ ನಿಧನದ ಸುದ್ದಿ ವೇಳೆ ಭಾರತೀಯ ಹಾಡು ಪ್ರಸಾರ ಮಾಡಿದ ಪಾಕಿಸ್ತಾನದ ಜಿಯೋ ನ್ಯೂಸ್ ಸಂಸ್ಥೆಗೆ ಅಲ್ಲಿನ ಮಾಧ್ಯಮ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದೆ. 

Asha Bhosle | ಆಶಾ ಭೋಸ್ಲೆ ಸುದ್ದಿ ಬಿತ್ತರಿಸಿದ ಪಾಕ್ ವಾಹಿನಿಗೆ ಶೋಕಾಸ್ ನೋಟಿಸ್

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನದ ಸುದ್ದಿ ವೇಳೆ ಭಾರತೀಯ ಹಾಡು ಪ್ರಸಾರ ಮಾಡಿದ ಪಾಕಿಸ್ತಾನದ ಜಿಯೋ ನ್ಯೂಸ್ ಸಂಸ್ಥೆಗೆ ಅಲ್ಲಿನ ಮಾಧ್ಯಮ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದ್ದು, ದಂಡದ ಎಚ್ಚರಿಕೆ ನೀಡಿದೆ.


Click the Play button to hear this message in audio format

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಸುದ್ದಿಯನ್ನು ಬಿತ್ತರಿಸಿದಕ್ಕಾಗಿ ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಮಂಡಳಿ , ಅಲ್ಲಿನ ಪ್ರಮುಖ ಸುದ್ದಿ ಸಂಸ್ಥೆಯಾದ 'ಜಿಯೋ ನ್ಯೂಸ್'ಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ. 2018ರಿಂದಲೇ ಪಾಕಿಸ್ತಾನದಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಹಾಡುಗಳ ಪ್ರಸಾರಕ್ಕೆ ಸಂಪೂರ್ಣ ನಿಷೇಧವಿದ್ದು, ಇದನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಭಾನುವಾರ 92ನೇ ವಯಸ್ಸಿನಲ್ಲಿ ಆಶಾ ಭೋಸ್ಲೆ ಅವರು ಮಲ್ಟಿ-ಆರ್ಗನ್ ಫೇಲ್ಯೂರ್‌ನಿಂದಾಗಿ ನಿಧನರಾಗಿದ್ದರು. ಈ ಸುದ್ದಿಯನ್ನು ಪ್ರಸಾರ ಮಾಡುವಾಗ ಜಿಯೋ ನ್ಯೂಸ್, ಆಶಾ ಅವರ ಪ್ರಸಿದ್ಧ ಹಾಡುಗಳು ಮತ್ತು ಭಾರತೀಯ ಸಿನಿಮಾಗಳ ದೃಶ್ಯಗಳನ್ನು ಬಳಸಿತ್ತು. ಇದನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಿರುವ ಪೆಮ್ರಾ(Pakistan Electronic Media Regulatory Authority) , ಏಪ್ರಿಲ್ 27ರಂದು ವಿವರಣೆ ನೀಡುವಂತೆ ವಾಹಿನಿಯ ಸಿಇಒಗೆ ಸಮನ್ಸ್ ನೀಡಿದೆ. ಒಂದು ವೇಳೆ ಸಮರ್ಪಕ ವಿವರಣೆ ನೀಡದಿದ್ದಲ್ಲಿ ಭಾರಿ ದಂಡ ಅಥವಾ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಯೋ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ಅಜರ್ ಅಬ್ಬಾಸ್, "ಕಲೆ ಮತ್ತು ಜ್ಞಾನಕ್ಕೆ ಗಡಿಗಳಿಲ್ಲ, ಅವು ಮಾನವಕುಲದ ಹಂಚಿಕೆಯ ಪರಂಪರೆ. ಆಶಾ ಭೋಸ್ಲೆ ಅಂತಹ ಮೇರು ಕಲಾವಿದೆಯ ನಿಧನದ ವೇಳೆ ಅವರ ಸಾಧನೆಯನ್ನು ಸ್ಮರಿಸುವುದು ನಮ್ಮ ಸಂಪ್ರದಾಯವಾಗಿದೆ. ಇದನ್ನು ನಿರ್ಬಂಧಿಸಿರುವುದು ಸರಿಯಲ್ಲ," ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಶಾ ಭೋಸ್ಲೆ ಅವರು ಪಾಕಿಸ್ತಾನದ ಗಾಯಕಿ ನೂರ್ ಜಹಾನ್ ಅವರನ್ನು ಅಕ್ಕ ಎಂದು ಕರೆಯುತ್ತಿದ್ದರು ಮತ್ತು ನುಸ್ರತ್ ಫತೇ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು ಎಂಬ ವಿಷಯವನ್ನು ಅವರು ನೆನಪಿಸಿದ್ದಾರೆ.ಈ ಘಟನೆಯನ್ನು ಪಾಕಿಸ್ತಾನದ ಪೀಪಲ್ಸ್ ಪಾರ್ಟಿ ಸೆನೆಟರ್ ಶೆರ್ರಿ ರೆಹಮಾನ್ ಕೂಡ ಖಂಡಿಸಿದ್ದು, ಸಾಂಸ್ಕೃತಿಕ ವಿಷಯಗಳಲ್ಲಿ ಈ ಮಟ್ಟದ ಕಟ್ಟುನಿಟ್ಟಿನ ಪೊಲೀಸ್ ವ್ಯವಸ್ಥೆ ಬೇಡ ಎಂದು ಪೆಮ್ರಾ ವಿರುದ್ಧ ಹರಿಹಾಯ್ದಿದ್ದಾರೆ. ಸದ್ಯ ಪಾಕಿಸ್ತಾನದಲ್ಲಿ ಭಾರತೀಯ ಕಲೆ ಮತ್ತು ಕಲಾವಿದರ ಕುರಿತಾದ ಈ ನಿರ್ಬಂಧ ಹೊಸ ಚರ್ಚೆಗೆ ನಾಂದಿ ಹಾಡಿದೆ.

Read More
Next Story