Asha Bhosle| ಲತಾ-ಆಶಾ ಹೆಸರಿನಲ್ಲಿ ಏಷ್ಯಾದ ಅತಿದೊಡ್ಡ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ
x

ಮಂಗೇಶ್ಕರ್ ಕುಟುಂಬದಿಂದ ಲತಾ-ಆಶಾ ಹೆಸರಿನಲ್ಲಿ ಏಷ್ಯಾದ ಅತಿದೊಡ್ಡ ಆಸ್ಪತ್ರೆ ನಿರ್ಮಾಣದ ಘೋಷಣೆ.

Asha Bhosle| ಲತಾ-ಆಶಾ ಹೆಸರಿನಲ್ಲಿ ಏಷ್ಯಾದ ಅತಿದೊಡ್ಡ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ

ಗಾಯಕಿ ಆಶಾ ಭೋಸ್ಲೆ ನಿಧನ: ಮಂಗೇಶ್ಕರ್ ಕುಟುಂಬದಿಂದ ಲತಾ-ಆಶಾ ಹೆಸರಿನಲ್ಲಿ ಏಷ್ಯಾದ ಅತಿದೊಡ್ಡ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಲಾಗಿದೆ.


Click the Play button to hear this message in audio format

ಭಾರತೀಯ ಸಂಗೀತ ಲೋಕದ ದ್ರುವತಾರೆ, ಪದ್ಮವಿಭೂಷಣ ಪುರಸ್ಕೃತ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಶನಿವಾರ ಎದೆ ಸೋಂಕಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 12ರಂದು ಕೊನೆಯುಸಿರೆಳೆದರು.

ಸೋಮವಾರ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಈ ದುಃಖದ ಸಂದರ್ಭದಲ್ಲೂ ಮಂಗೇಶ್ಕರ್ ಕುಟುಂಬವು ಸಮಾಜಮುಖಿ ಕಾರ್ಯವೊಂದನ್ನು ಘೋಷಿಸಿದೆ. ಅಂತ್ಯಕ್ರಿಯೆಯ ನಂತರ ಆಶಾ ಅವರ ಸಹೋದರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಹೃದಯನಾಥ್ ಮಂಗೇಶ್ಕರ್ ಅವರು ಮಾತನಾಡುತ್ತಾ, ಆಶಾ ಮತ್ತು ಲತಾ ಮಂಗೇಶ್ಕರ್ ಅವರ ನೆನಪನ್ನು ಶಾಶ್ವತವಾಗಿಸಲು ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರ ನೆನಪಿಗಾಗಿ ಏಷ್ಯಾದಲ್ಲೇ ಅತಿದೊಡ್ಡ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ.

ಈ ಆಸ್ಪತ್ರೆಯ ಉದ್ಘಾಟನೆಯು ಏಪ್ರಿಲ್ 16 ರಂದು ನಡೆಯಬೇಕಿತ್ತು. ಆರಂಭದಲ್ಲಿ ಇದು ಲತಾ ಮಂಗೇಶ್ಕರ್ ಅವರ ಹೆಸರಿನಲ್ಲಿ ಮಾತ್ರ ಇರಬೇಕಿತ್ತು. ಆದರೆ ಈಗ ಆಶಾ ಅವರ ನಿಧನದ ನಂತರ ಈ ಆಸ್ಪತ್ರೆಗೆ 'ಲತಾ-ಆಶಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್' ಅಥವಾ 'ಲತಾ-ಆಶಾ ಮಂಗೇಶ್ಕರ್ ಆಯುರ್ವಿದ್ಯಾ ಸಂಸ್ಥಾನ' ಎಂದು ಹೆಸರಿಸಲು ತೀರ್ಮಾನಿಸಲಾಗಿದೆ. ಆಶಾ ತಾಯಿ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಅವರ ಅಗಲಿಕೆಯಿಂದಾಗಿ ಭಾರತೀಯ ಸಂಗೀತ ಕ್ಷೇತ್ರದ ಒಂದು ಸುದೀರ್ಘ ಮತ್ತು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ.

ರಾಜ್ಯ ಗೌರವದೊಂದಿಗೆ ಅಂತ್ಯಕ್ರಿಯೆ

ಸೋಮವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಅದಕ್ಕೂ ಮುನ್ನ ಲೋಯರ್ ಪರೇಲ್‌ನಲ್ಲಿರುವ ಅವರ ನಿವಾಸ 'ಕಾಸಾ ಗ್ರಾಂಡೆ'ಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಮಿತಾಭ್ ಬಚ್ಚನ್ ಸೇರಿದಂತೆ ಬಾಲಿವುಡ್‌ನ ದಿಗ್ಗಜರು, ಕ್ರೀಡಾ ತಾರೆಯರು ಹಾಗೂ ರಾಜಕೀಯ ಗಣ್ಯರು ಗಾಯಕಿಯ ಅಂತಿಮ ದರ್ಶನ ಪಡೆದು ಕಣ್ಣೀರಿನ ವಿದಾಯ ಹೇಳಿದರು.

ಎಂಟು ದಶಕಗಳ ಸಂಗೀತ ಪಯಣ

ಕಳೆದ ಎಂಟು ದಶಕಗಳಿಂದ ಭಾರತೀಯ ಗಾಯನ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಆಶಾ ಅವರು, 20ಕ್ಕೂ ಹೆಚ್ಚು ಭಾಷೆಗಳಲ್ಲಿ ಅಂದಾಜು 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅವರ ಈ ಅಪಾರ ಸಾಧನೆಗಾಗಿ 2011ರಲ್ಲಿ ಗಿನ್ನೆಸ್ ದಾಖಲೆ ಕೂಡ ಒಲಿದು ಬಂದಿತ್ತು. ಕೇವಲ ಹಿಂದಿಯಲ್ಲದೆ ಕನ್ನಡ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಅವರು ಹಾಡಿ ಜನಪ್ರಿಯರಾಗಿದ್ದರು.

ಪ್ರಶಸ್ತಿಗಳ ಸರಮಾಲೆ

ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ 2001ರಲ್ಲಿ ಅವರಿಗೆ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಂದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದ ಅವರು, ತಮ್ಮ ತಂದೆ ದೀನನಾಥ್ ಮಂಗೇಶ್ಕರ್, ತಾಯಿ ಹಾಗೂ ಗುರುಗಳನ್ನು ನೆನೆದು ಭಾವುಕರಾಗಿದ್ದರು. "ಈ ಗೌರವವನ್ನು ಸ್ವೀಕರಿಸಲು ನನಗೆ ಅತೀವ ಭಯವಾಗುತ್ತಿದೆ" ಎಂದು ವಿನಮ್ರವಾಗಿ ನುಡಿದಿದ್ದರು. ಎರಡು ರಾಷ್ಟ್ರ ಪ್ರಶಸ್ತಿಗಳು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಾಗೂ ಪದ್ಮವಿಭೂಷಣ ಗೌರವಗಳಿಗೆ ಪಾತ್ರರಾಗಿದ್ದ ಅವರ ಧ್ವನಿ ಇಂದಿನ ಮತ್ತು ಮುಂದಿನ ತಲೆಮಾರಿನ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿರುತ್ತದೆ. ಆಶಾ ಭೋಸ್ಲೆ ಅವರ ನಿಧನಕ್ಕೆ ದೇಶಾದ್ಯಂತ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Read More
Next Story