
ಆಶಾ ಭೋಂಸ್ಲೆ ಅವರ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಂಗೀತ ಲೋಕದ ದಂತಕಥೆ ಆಶಾ ಭೋಸ್ಲೆ ಅಸ್ತಂಗತ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಖ್ಯಾತ ಗಾಯಕಿ ಆಶಾ ಭೋಂಸ್ಲೆ ನಿಧನ: ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಸಂಗೀತ ಲೋಕದ ಧ್ರುವತಾರೆಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ.
ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ಆಶಾ ಭೋಸ್ಲೆ (92) ಅವರ ಅಂತ್ಯಕ್ರಿಯೆಯು ಸೋಮವಾರ ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದ ಆಶಾ ಅವರ ಅಂತಿಮ ದರ್ಶನ ಪಡೆಯಲು ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
ಅಂತ್ಯಸಂಸ್ಕಾರಕ್ಕೂ ಮುನ್ನ, ಆಶಾ ಭೋಸ್ಲೆ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ಮುಂಬೈನಲ್ಲಿ ಅತ್ಯಂತ ಭಾವಪೂರ್ಣವಾಗಿ ಜರುಗಿತು. ತಮ್ಮ ನೆಚ್ಚಿನ ಗಾಯಕಿಯನ್ನು ಕೊನೆಯ ಬಾರಿ ನೋಡಲು ಸಾವಿರಾರು ಅಭಿಮಾನಿಗಳು ರಸ್ತೆಯ ಎರಡೂ ಬದಿಯಲ್ಲಿ ಜಮಾಯಿಸಿದ್ದರು. ನಗರದ ಲೋವರ್ ಪರೇಲ್‌ನಲ್ಲಿರುವ ಅವರ ನಿವಾಸದಿಂದ ದಾದರ್‌ನ ಶಿವಾಜಿ ಪಾರ್ಕ್‌ನವರೆಗೆ ನಡೆದ ಈ ಮೆರವಣಿಗೆಯು ಒಂದು ಯುಗದ ಅಂತ್ಯಕ್ಕೆ ಸಾಕ್ಷಿಯಾಯಿತು.
ಹೂವಿನಿಂದ ಅಲಂಕೃತಗೊಂಡ ಭವ್ಯ ರಥ
ಗಾಯಕಿಯ ಪಾರ್ಥಿವ ಶರೀರವನ್ನು ಹೊತ್ತೊಯ್ಯಲು ಬಿಳಿ ಮತ್ತು ಹಳದಿ ಬಣ್ಣದ ಚೆಂಡು ಹೂವುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಬಿಳಿ ವಾಹನವನ್ನು ಸಿದ್ಧಪಡಿಸಲಾಗಿತ್ತು. ಈ ರಥದ ಮೇಲೆ ಸಾಂಪ್ರದಾಯಿಕ ಮಹಾರಾಷ್ಟ್ರದ ‘ನಾಥ್’ (ಮೂಗಿನ ಬೊಟ್ಟು) ಧರಿಸಿರುವ ಆಶಾ ಅವರ ದೊಡ್ಡ ಭಾವಚಿತ್ರವನ್ನು ಇರಿಸಲಾಗಿತ್ತು. ಕೆಂಪು ಸೀರೆ ಮತ್ತು ಬಿಂದಿಯೊಂದಿಗೆ ನಗುಮುಖದ ಅವರ ವಿವಿಧ ಹಂತದ ಛಾಯಾಚಿತ್ರಗಳು ರಥದ ಅಂದವನ್ನು ಹೆಚ್ಚಿಸಿದ್ದವು, ಇದು ಅವರ ಎಂಟು ದಶಕಗಳ ಸುದೀರ್ಘ ಮತ್ತು ರೋಮಾಂಚಕ ವೃತ್ತಿಜೀವನಕ್ಕೆ ನೀಡಿದ ಗೌರವದಂತಿತ್ತು.
ಪೊಲೀಸ್ ಗೌರವ
ಅಂತಿಮ ಯಾತ್ರೆ ಆರಂಭವಾಗುವ ಮುನ್ನ ಪೊಲೀಸ್ ಬ್ಯಾಂಡ್ ಹಿತವಾದ ರಾಗವನ್ನು ನುಡಿಸುವ ಮೂಲಕ ದಂತಕಥೆಗೆ ಗೌರವ ಸಲ್ಲಿಸಿತು. ಪಾರ್ಥಿವ ಶರೀರವನ್ನು ವಾಹನದಲ್ಲಿ ಇರಿಸುತ್ತಿದ್ದಂತೆ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡವು. ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಸುಮಾರು ಐದು ಕಿಲೋಮೀಟರ್ ದೂರದ ಮೆರವಣಿಗೆಯು ಅತ್ಯಂತ ಶಿಸ್ತುಬದ್ಧವಾಗಿ ಆದರೆ ಭಾವೋದ್ವೇಗದಿಂದ ಸಾಗಿತು. ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪೊಲೀಸರು ಕುಶಾಲತೋಪು ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮುನ್ನ ನೆರೆದಿದ್ದ ಅಭಿಮಾನಿಗಳು ಆಶಾ ಅವರ ಅತ್ಯಂತ ಜನಪ್ರಿಯ ಗೀತೆಗಳಲ್ಲಿ ಒಂದಾದ "ಅಭಿ ನಾ ಜಾವೋ ಛೋಡ್ ಕರ್"ಎಂಬ ಹಾಡನ್ನು ಹಾಡುವ ಮೂಲಕ ಭಾವುಕರಾದರು.
ರಸ್ತೆಯುದ್ದಕ್ಕೂ ಹೂಮಳೆ, ಮೊಳಗಿದ ಘೋಷಣೆ
ಲೋವರ್ ಪರೇಲ್‌ನಿಂದ ಶಿವಾಜಿ ಪಾರ್ಕ್‌ವರೆಗಿನ ಮಾರ್ಗದುದ್ದಕ್ಕೂ ಅಭಿಮಾನಿಗಳು ಕಟ್ಟಡಗಳ ಕಿಟಕಿ, ಛಾವಣಿ ಮತ್ತು ಚಾಲ್‌ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ವಾಹನ ಸಾಗುತ್ತಿದ್ದಂತೆ ಅಭಿಮಾನಿಗಳು ಅದರ ಮೇಲೆ ಹೂವಿನ ದಳಗಳನ್ನು ಸುರಿಸಿ "ಆಶಾ ತಾಯ್ ಅಮರ್ ರಹೇ" ಎಂದು ಘೋಷಣೆಗಳನ್ನು ಕೂಗಿದರು. ಮುಂಬೈನ ಪ್ರತಿಯೊಂದು ಗಲ್ಲಿಯೂ ತನ್ನ ಹೆಮ್ಮೆಯ ಪುತ್ರಿಗೆ ʻಸಯೋನಾರಾʼ ಹೇಳಲು ಸಜ್ಜಾದಂತಿತ್ತು.
ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ಸಂಜೆ 4 ಗಂಟೆಗೆ ದಾದರ್‌ನ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಮತ್ತು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಭಾರತದ ಈ ಅದ್ವಿತೀಯ ಗಾಯಕಿ ಪಂಚಭೂತಗಳಲ್ಲಿ ಲೀನರಾದರು. ಆಶಾ ಭೋಸ್ಲೆ ಅವರ ನಿರ್ಗಮನದಿಂದ ಭಾರತೀಯ ಸಂಗೀತ ಲೋಕದಲ್ಲಿ ಎಂದೂ ತುಂಬಲಾರದ ಶೂನ್ಯ ಸೃಷ್ಟಿಯಾಗಿದೆ.

