
ಅರಿಜಿತ್ ಸಿಂಗ್ ಸಂಗೀತವನ್ನೇನೂ ತ್ಯಜಿಸುತ್ತಿಲ್ಲ. ಕೇವಲ ಚಿತ್ರರಂಗದ ಕಟ್ಟುಪಾಡುಗಳಿಂದ ಹೊರಬರಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅರಿಜಿತ್ ಸಿಂಗ್ ನಿವೃತ್ತಿ ಘೋಷಿಸಿದ್ದೇಕೆ?
ಗಾಯಕ ಅರಿಜಿತ್ ಸಿಂಗ್ ಪ್ಲೇಬ್ಯಾಕ್ ಸಿಂಗಿಂಗ್‌ಗೆ ಅನಿರೀಕ್ಷಿತ ನಿವೃತ್ತಿ ಘೋಷಿಸಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅರಿಜಿತ್ ದಿಢೀರ್ ನಿವೃತ್ತಿ ಘೋಷಿಸಿದ್ದೇಕೆ? ಇಲ್ಲಿದೆ ಸವಿಸ್ತಾರವಾದ ವರದಿ
ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಮಂಗಳವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ಪೋಸ್ಟ್ ಇಡೀ ಸಂಗೀತ ಲೋಕವನ್ನು ಬೆಚ್ಚಿಬೀಳಿಸಿದೆ. ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರುತ್ತಲೇ, ತಾವು ಇನ್ನು ಮುಂದೆ ಚಿತ್ರಗಳಿಗೆ ಹಾಡುವುದಿಲ್ಲ (ಪ್ಲೇಬ್ಯಾಕ್ ಸಿಂಗಿಂಗ್) ಎಂದು ಘೋಷಿಸುವ ಮೂಲಕ ಅವರು ಎಲ್ಲರಿಗೂ ಆಘಾತ ನೀಡಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ 'ಮಾತೃಭೂಮಿ' ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಶ್ರೇಯಾ ಘೋಷಾಲ್ ಅವರೊಂದಿಗೆ ಹಾಡಿರುವ ಈ ಹಾಡು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರೀ ಸದ್ದು ಮಾಡಿತ್ತು.
'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ 'ಮಾತೃಭೂಮಿ' ಹಾಡು
ನಿವೃತ್ತಿಯ ಹಿಂದಿರುವ ಅಸಲಿ ಕಾರಣವೇನು?
ಅರಿಜಿತ್ ಸಿಂಗ್ ಅವರ ಈ ನಿರ್ಧಾರ ಅವರ ಆಪ್ತ ವಲಯಕ್ಕೆ ಅಚ್ಚರಿಯೇನಲ್ಲ. ಅವರ ಖಾಸಗಿ ಎಕ್ಸ್ ಖಾತೆಯ ಪೋಸ್ಟ್ ಎಂದು ಹೇಳಲಾಗುತ್ತಿರುವ ಸ್ಕ್ರೀನ್‌ಶಾಟ್‌ಗಳು ಈಗ ವೈರಲ್ ಆಗುತ್ತಿವೆ. ಅದರಲ್ಲಿ ಅವರು ತಮ್ಮ ನಿರ್ಧಾರದ ಬಗ್ಗೆ ಹೀಗೆ ಬರೆದಿದ್ದಾರೆ.
"ನನ್ನ ಈ ನಿರ್ಧಾರಕ್ಕೆ ಒಂದೇ ಕಾರಣವಿಲ್ಲ, ಹಲವು ಕಾರಣಗಳಿವೆ. ನಾನು ದೀರ್ಘಕಾಲದಿಂದ ಇದನ್ನು ಮಾಡಲು ಪ್ರಯತ್ನಿಸುತ್ತಿದ್ದೆ, ಈಗ ಅಂತಿಮವಾಗಿ ಧೈರ್ಯ ಮಾಡಿದ್ದೇನೆ. ಪ್ರಮುಖ ಕಾರಣವೆಂದರೆ, ನನಗೆ ಬೇಗ ಬೇಸರವಾಗುತ್ತದೆ. ಅದಕ್ಕಾಗಿಯೇ ನಾನು ವೇದಿಕೆಯ ಮೇಲೆ ಒಂದೇ ಹಾಡನ್ನು ಬೇರೆ ಬೇರೆ ರೀತಿಯಲ್ಲಿ ಹಾಡುತ್ತಿರುತ್ತೇನೆ. ಈಗ ನನಗೆ ಪ್ಲೇಬ್ಯಾಕ್ ಸಿಂಗಿಂಗ್ ಬಗ್ಗೆ ಬೇಸರವಾಗಿದೆ ಎಂದು ಬರೆದಿದ್ದಾರೆ.
ಹದಿನೈದು ವರ್ಷಗಳ ಸುದೀರ್ಘ ಪಯಣ
2005ರಲ್ಲಿ 'ಫೇಮ್ ಗುರುಕುಲ್' ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಅರಿಜಿತ್, 2010ರಲ್ಲಿ ತೆಲುಗು ಚಿತ್ರ 'ಕೇಡಿ' ಮೂಲಕ ಪ್ಲೇಬ್ಯಾಕ್ ಸಿಂಗಿಂಗ್ ಆರಂಭಿಸಿದರು. ಹಿಂದಿ ಚಿತ್ರರಂಗಕ್ಕೆ 'ಮರ್ಡರ್ 2' ಮೂಲಕ ಪಾದಾರ್ಪಣೆ ಮಾಡಿದರೂ, 2013ರ 'ಆಶಿಕಿ 2' ಚಿತ್ರ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಕಳೆದ 15 ವರ್ಷಗಳಲ್ಲಿ ಅವರು ಸುಮಾರು 800ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅಂದರೆ ವರ್ಷಕ್ಕೆ ಸರಾಸರಿ 53 ಹಾಡುಗಳು. ಹಾಡುವುದರ ಜೊತೆಗೆ 'ಪಗ್ಲೈಟ್' ನಂತಹ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಗ್ಲಾಮರ್ ಜಗತ್ತಿನಿಂದ ದೂರವಿರುವ ಅವರು, ಮುರ್ಷಿದಾಬಾದ್‌ನ ತಮ್ಮ ಪುಟ್ಟ ಸ್ಟುಡಿಯೋದಲ್ಲಿ ಸಂಗೀತ ಸೃಷ್ಟಿಸುವುದನ್ನು ಇಷ್ಟಪಡುತ್ತಾರೆ.
'ಆಶಿಕಿ 2' ಚಿತ್ರದ ಹಾಡು
ಸಂಗೀತದಿಂದ ದೂರವಿಲ್ಲ, ಚಿತ್ರರಂಗದಿಂದ ಮಾತ್ರ
ಅರಿಜಿತ್ ಸಿಂಗ್ ಸಂಗೀತವನ್ನೇನೂ ತ್ಯಜಿಸುತ್ತಿಲ್ಲ. ಕೇವಲ ಚಿತ್ರರಂಗದ ಕಟ್ಟುಪಾಡುಗಳಿಂದ ಹೊರಬರಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಿರ್ಮಾಪಕರು ಮತ್ತು ಮಾರುಕಟ್ಟೆಯ ಒತ್ತಡವಿಲ್ಲದೆ, ತಮ್ಮದೇ ಆದ ರೀತಿಯಲ್ಲಿ ಸ್ವತಂತ್ರ ಸಂಗೀತವನ್ನು ಸೃಷ್ಟಿಸುವುದು ಅವರ ಗುರಿಯಾಗಿದೆ ಎಂದು ವರದಿಯಾಗಿದೆ.
ನಾನು ಇನ್ನು ಮುಂದೆ ಯಾವುದೇ ಹೊಸ ಪ್ಲೇಬ್ಯಾಕ್ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ. ಇದು ಅದ್ಭುತವಾದ ಪ್ರಯಾಣವಾಗಿತ್ತು ಎಂದು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಬಾಕಿ ಇರುವ ಚಿತ್ರದ ಹಾಡುಗಳನ್ನು ಪೂರ್ಣಗೊಳಿಸಿದ ನಂತರ ಅವರು ಸಂಪೂರ್ಣವಾಗಿ ಸ್ವತಂತ್ರ ಸಂಗೀತದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

