
ಗಾಯನ ಲೋಕಕ್ಕೆ ಅರಿಜಿತ್ ಸಿಂಗ್ ವಿದಾಯ; ಪದ್ಮಶ್ರೀ ಪುರಸ್ಕೃತ ಗಾಯಕನ ಭಾವುಕ ಪೋಸ್ಟ್
ಬಾಲಿವುಡ್‌ನ ಸುಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ
ಖ್ಯಾತ ಹಿನ್ನೆಲೆ ಗಾಯಕ, ಪದ್ಮಶ್ರೀ ಪುರಸ್ಕೃತ ಅರಿಜಿತ್ ಸಿಂಗ್ ಅವರು ಚಿತ್ರರಂಗದ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುವುದಾಗಿ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಸುದೀರ್ಘ ಪಯಣಕ್ಕೆ ವಿರಾಮ ಹಾಡಿದ್ದಾರೆ.
ಅರಿಜಿತ್ ಸಿಂಗ್ ಅವರ ಸಂದೇಶ
"ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಇಷ್ಟು ವರ್ಷಗಳ ಕಾಲ ಕೇಳುಗರಾಗಿ ನನಗೆ ಅಪಾರ ಪ್ರೀತಿ ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಇಂದಿನಿಂದ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಘೋಷಿಸಲು ಸಂತೋಷಪಡುತ್ತೇನೆ. ನಾನು ಇಲ್ಲಿಗೆ ಈ ಪಯಣವನ್ನು ಮುಗಿಸುತ್ತಿದ್ದೇನೆ. ಇದೊಂದು ಅದ್ಭುತ ಪ್ರಯಾಣವಾಗಿತ್ತು." ಎಂದು ಬರೆದು ಕೊಂಡಿದ್ದಾರೆ
ಅಭಿಮಾನಿಗಳ ಪ್ರತಿಕ್ರಿಯೆ
ಅರಿಜಿತ್ ಅವರ ಈ ದಿಢೀರ್ ನಿರ್ಧಾರ ಕೇಳುಗರಲ್ಲಿ ಆಘಾತ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬಳಕೆದಾರರು, "ದಯವಿಟ್ಟು ಯಾರಾದರೂ ಇದು ಸುಳ್ಳು ಅಥವಾ ಅವರ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಅರಿಜಿತ್ ಇಲ್ಲದೆ ಬಾಲಿವುಡ್ ಸಂಗೀತವೇ ಶೂನ್ಯ" ಎಂದು ಬರೆದುಕೊಂಡಿದ್ದಾರೆ.
ಅರಿಜಿತ್ ಸಿಂಗ್ ಸಾಧನೆಯ ಹಾದಿ:
ಬಾಲಿವುಡ್‌ನ ಅತ್ಯಂತ ಜನಪ್ರಿಯ ಗಾಯಕರಾಗಿರುವ ಅರಿಜಿತ್ ಸಿಂಗ್, ಅನೇಕ ಹೃದಯಸ್ಪರ್ಶಿ ಗೀತೆಗಳನ್ನು ನೀಡಿದ್ದಾರೆ. ಆಶಿಕಿ 2 ಚಿತ್ರದ 'ತುಮ್ ಹಿ ಹೋ', 'ಚನ್ನಾ ಮೇರೆಯಾ', 'ಫಿರ್ ಭಿ ತುಮ್ಕೋ ಚಾಹುಂಗಾ' ಮತ್ತು 'ಹವಾಯೇಂ' ನಂತಹ ಸೂಪರ್ ಹಿಟ್ ಹಾಡುಗಳು ಇಂದಿಗೂ ಜನರ ಮನಸ್ಸಿನಲ್ಲಿವೆ.
ಸಂದ ಗೌರವಗಳು
ಅವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು 2025 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ, ಅರಿಜಿತ್ ಸಿಂಗ್ ಅವರು ಈ ನಿರ್ಧಾರಕ್ಕೆ ನಿಖರವಾದ ಕಾರಣವನ್ನಾಗಲಿ ಅಥವಾ ಅವರ ಮುಂದಿನ ಯೋಜನೆಗಳ ಬಗ್ಗೆಯಾಗಲಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.

