
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ.
ToxicTeaser| ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಟೀಸರ್ ರಿಲೀಸ್ ಡೇಟ್ ಫಿಕ್ಸ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಫೆಬ್ರವರಿ 20ರ ಬೆಳಿಗ್ಗೆ 9:35ಕ್ಕೆ ಟೀಸರ್ ಬಿಡುಗಡೆಯಾಗಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೌನ್-ಅಪ್ಸ್' ಚಿತ್ರದ ಟೀಸರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಅಭಿಮಾನಿಗಳ ದೀರ್ಘಕಾಲದ ಕಾಯುವಿಕೆಗೆ ತೆರೆ ಎಳೆಯಲು ಮುಂದಾಗಿರುವ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್, ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಹೊಚ್ಚ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಟೀಸರ್ ಬಿಡುಗಡೆಯ ದಿನಾಂಕ ಹಾಗೂ ಸಮಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಫೆಬ್ರವರಿ 20ರ ಬೆಳಿಗ್ಗೆ 9:35ಕ್ಕೆ ಚಿತ್ರದ ಅಧಿಕೃತ ಟೀಸರ್ ಅನಾವರಣಗೊಳ್ಳಲಿದೆ.
ಈಗಾಗಲೇ ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಕಡುಗತ್ತಲೆಯ ಹಿನ್ನೆಲೆಯಲ್ಲಿ, ಹಿಮ ಸುರಿಯುವ ಪರಿಸರದಲ್ಲಿ ಯಶ್ ಒಂಟಿಯಾಗಿ ನಿಂತು ಕೈಯಲ್ಲಿ ಪಾನೀಯ ಹಿಡಿದಿರುವ ದೃಶ್ಯವು ಈ ಬಾರಿ ಸಿನಿಮಾ ಅತ್ಯಂತ ಕರಾಳ ಮತ್ತು ಸಾಹಸಮಯವಾಗಿರಲಿದೆ ಎಂಬ ಸುಳಿವನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ಕಾಡ್ಗಿಚ್ಚಿನಂತೆ ಹಬ್ಬಿದೆ.
ಟಾಕ್ಸಿಕ್ ಸಿನಿತಂಡ ಹಂಚಿಕೊಂಡಿರುವ ಪೋಸ್ಟರ್
ಹಿಂದೆ ಯಶ್ ಅವರ 40ನೇ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಕ್ಯಾರೆಕ್ಟರ್ ಟೀಸರ್ನಲ್ಲಿ ಅವರನ್ನು 'ರಾಯ' ಎಂದು ಪರಿಚಯಿಸಲಾಗಿತ್ತು. ಸ್ಮಶಾನದ ಹಿನ್ನೆಲೆಯಲ್ಲಿ ಗನ್ ಹಿಡಿದು ಸಾಗುತ್ತಿದ್ದ ಅವರ ಮಾಸ್ ಲುಕ್ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಇದೀಗ ಬರಲಿರುವ ಟೀಸರ್ ಚಿತ್ರದ ಕಥಾಹಂದರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆಯಿದೆ. ಯುಎಇ ವಿತರಕರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಚಿತ್ರವು 1940 ರಿಂದ 1970ರ ಅವಧಿಯ ಗೋವಾದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಕರಾವಳಿ ತೀರದ ಅಪರಾಧ ಲೋಕದ ಕರಾಳ ಮುಖಗಳನ್ನು ಅನಾವರಣಗೊಳಿಸಲಿದೆ. ಅಧಿಕಾರವನ್ನು ಯಾರೂ ದಯಪಾಲಿಸುವುದಿಲ್ಲ - ಅದನ್ನು ಕಿತ್ತುಕೊಳ್ಳಬೇಕು ಮತ್ತು ಅದಕ್ಕೆ ಬೆಲೆ ತೆರಲೇಬೇಕು ಎಂಬ ಸಂವಾದದೊಂದಿಗೆ ಈ ಕ್ರೈಮ್ ಥ್ರಿಲ್ಲರ್ ಮೂಡಿಬರಲಿದೆ.
ಗೀತು ಮೋಹನ್ ದಾಸ್ ಹಾಗೂ ಯಶ್ ಜಂಟಿಯಾಗಿ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿರುವ 'ಟಾಕ್ಸಿಕ್' ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ತೆರೆಕಾಣಲಿದೆ. ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಚಿತ್ರದೊಂದಿಗೆ ಸೆಣೆಸಾಡಲಿದೆ.

