
Toxic|ಯಶ್ ಅಭಿಮಾನಿಗಳಿಗೆ ನಿರಾಸೆ: ಮಾ.19ರಂದು ರಿಲೀಸ್ ಆಗಲ್ಲ 'ಟಾಕ್ಸಿಕ್'!
ಸದ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅಸ್ಥಿರತೆ ಮತ್ತು ಪ್ರಕ್ಷುಬ್ಧ ವಾತಾವರಣವು ಟಾಕ್ಸಿಕ್ ಚಿತ್ರದ ಜಾಗತಿಕ ಬಿಡುಗಡೆಯ ಮೇಲೆ ಪರಿಣಾಮ ಬೀರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ನಟ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಮುಂದೂಡಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರದ ನಿರ್ಮಾಪಕರು, ಸಿನಿಮಾ ಪ್ರೇಮಿಗಳಿಗೆ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.
ಮೊದಲೇ ನಿರ್ಧರಿಸಿದಂತೆ ‘ಟಾಕ್ಸಿಕ್’ ಚಿತ್ರವು ಮಾರ್ಚ್ 19 ರಂದು ತೆರೆಕಾಣಬೇಕಿತ್ತು. ಅಚ್ಚರಿಯ ವಿಷಯವೆಂದರೆ, ಇದೇ ದಿನ ಬಾಲಿವುಡ್‌ನ ಬಹುನಿರೀಕ್ಷಿತ ಸೀಕ್ವೆಲ್ ‘ಧುರಂಧರ್ 2’ ಕೂಡ ಬಿಡುಗಡೆಗೆ ಸಜ್ಜಾಗಿತ್ತು. ಈ ಸಂಘರ್ಷವನ್ನು ತಪ್ಪಿಸಲು ಅಥವಾ ಜಾಗತಿಕ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲು ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ವಿಶ್ವದಾದ್ಯಂತ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದೆ.
ಸದ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅಸ್ಥಿರತೆ ಮತ್ತು ಪ್ರಕ್ಷುಬ್ಧ ವಾತಾವರಣವು ಚಿತ್ರದ ಜಾಗತಿಕ ಬಿಡುಗಡೆಯ ಮೇಲೆ ಪರಿಣಾಮ ಬೀರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರೇಕ್ಷಕರ ಮತ್ತು ವಿತರಕರ ಹಿತದೃಷ್ಟಿಯಿಂದ ಚಿತ್ರದ ಬಿಡುಗಡೆಯನ್ನು ಮುಂದೂಡುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿರುವ ತಂಡ, ಜೂನ್ 4 ರಂದು ವಿಶ್ವದಾದ್ಯಂತ ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿಸಿದೆ.
ಚಿತ್ರತಂಡದ ಈ ಘೋಷಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಅಭಿಮಾನಿಗಳು ತಂಡದ ನಿರ್ಧಾರವನ್ನು ಬೆಂಬಲಿಸಿ, ಗುಣಮಟ್ಟದ ಸಿನಿಮಾದ ನಿರೀಕ್ಷೆಯಲ್ಲಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಇನ್ನೂ ಕೆಲವು ನೆಟ್ಟಿಗರು ಬಿಡುಗಡೆ ವಿಳಂಬಕ್ಕೆ ‘ಧುರಂಧರ್ 2’ ಚಿತ್ರದೊಂದಿಗಿನ ಪೈಪೋಟಿಯೇ ಅಸಲಿ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುದ್ಧದ ಹಿನ್ನೆಲೆಯ ಕಥೆಯನ್ನು ಸಿನಿಮಾ ಹೊಂದಿರುವುದರಿಂದ ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಚಿತ್ರತಂಡ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಒಟ್ಟಿನಲ್ಲಿ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಬ್ಬರ ನೋಡಲು ಜೂನ್ ತಿಂಗಳವರೆಗೆ ಕಾಯುವುದು ಅನಿವಾರ್ಯವಾಗಿದೆ.

