
'ದಿ ರೈಸ್ ಆಫ್ ಅಶೋಕ' ಟ್ರೇಲರ್ ಬಿಡುಗಡೆಯಾಗಿದೆ.
ದಿ ರೈಸ್ ಆಫ್ ಅಶೋಕ| ಶೋಷಣೆಯ ವಿರುದ್ಧ ಸಿಡಿದೇಳುವ ಅಶೋಕನ ಕಥೆ; ಟ್ರೇಲರ್ ಬಿಡುಗಡೆ
ಸ್ಯಾಂಡಲ್‌ವುಡ್‌ನ ನಟ ಸತೀಶ್ ನೀನಾಸಂ ನಾಯಕನಾಗಿ ಹಾಗೂ 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ದಿ ರೈಸ್ ಆಫ್ ಅಶೋಕ' ಟ್ರೇಲರ್ ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಕಳಕಳಿ ಮತ್ತು ಹೋರಾಟದ ಕಥೆಗಳಿಗೂ ಯಾವತ್ತೂ ಒಂದು ವಿಶೇಷ ಸ್ಥಾನವಿದೆ. 'ಲ್ಯಾಂಡ್‌ಲಾರ್ಡ್' ನಂತರ ಈಗ ಅದೇ ಮಾದರಿಯ ಮತ್ತೊಂದು ಪವರ್‌ಫುಲ್ ಸಿನಿಮಾ 'ದಿ ರೈಸ್ ಆಫ್ ಅಶೋಕ' ತೆರೆಗೆ ಬರಲು ಸಜ್ಜಾಗಿದೆ.
ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಸತೀಶ್ ನೀನಾಸಂ ನಾಯಕನಾಗಿ ಅಬ್ಬರಿಸುತ್ತಿದ್ದು, ಅವರಿಗೆ 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ಜೋಡಿಯಾಗಿದ್ದಾರೆ.
ಚಿತ್ರದ ಕಥಾಹಂದರ
ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದು 'ಅಶೋಕ' ಎಂಬ ವ್ಯಕ್ತಿಯ ಏಳಿಗೆಯ ಕಥೆ. ಬಡತನದ ಬೇಗೆಯಲ್ಲೇ ಹುಟ್ಟಿ, ಕಷ್ಟಪಟ್ಟು ಓದಿ, ಒಬ್ಬ ಸಭ್ಯ ಸರ್ಕಾರಿ ಅಧಿಕಾರಿಯಾಗಬೇಕೆಂದು ಕನಸು ಕಾಣುವ ಯುವಕನೇ ಅಶೋಕ. ಆದರೆ, ವ್ಯವಸ್ಥೆಯಲ್ಲಿರುವ ಶ್ರೀಮಂತರ ದಬ್ಬಾಳಿಕೆ, ಬಡವರ ಮೇಲಾಗುವ ಶೋಷಣೆ ಮತ್ತು ಅನ್ಯಾಯದ ವಿರುದ್ಧ ಆತ ಹೇಗೆ ಸಿಡಿದೇಳುತ್ತಾನೆ ಎಂಬುದೇ ಚಿತ್ರದ ಕಥೆ.
ಸಾಮಾನ್ಯ ಯುವಕನೊಬ್ಬ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯುವ ಮತ್ತು ಅನ್ಯಾಯದ ವಿರುದ್ಧ 'ಅಶೋಕ'ನಾಗಿ ಉದಯಿಸುವ ರೋಚಕ ಪಯಣ ಈ ಚಿತ್ರದಲ್ಲಿದೆ.
'ಅಶೋಕ' ಟ್ರೇಲರ್
ಈ ಸಿನಿಮಾದಲ್ಲಿ ತಾರಾಗಣ ಮತ್ತು ತಾಂತ್ರಿಕ ತಂಡ ಸತೀಶ್ ನೀನಾಸಂ, ಸಪ್ತಮಿ ಗೌಡ ಸೇರಿದಂತೆ ಬಿ. ಸುರೇಶ್, ರವಿಶಂಕರ್ ಶರ್ಮಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಈ ಸಿನಿಮಾವನ್ನು ವಿನೋದ್ ವಿ. ಧೊಂಡಾಲೆ ನಿರ್ದೇಶನ ಮಾಡುತ್ತಿದ್ದು, ಸತೀಶ್ ನೀನಾಸಂ ಅವರೇ ಸ್ವತಃ ಈ ಚಿತ್ರವನ್ನು ನಿರ್ಮಿಸಿರುವುದು ವಿಶೇಷ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ದುನಿಯಾ ವಿಜಯ್ ಮತ್ತು ವಸಿಷ್ಠ ಸಿಂಹ ಕೂಡ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಸಿನಿಮಾದ ಮೇಕಿಂಗ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ರಿಲೀಸ್ ಡೇಟ್ ಫಿಕ್ಸ್
ಬರೀ ಕನ್ನಡ ಅಷ್ಟೇ ಅಲ್ಲದೆ, ಬಹುಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿರುವ 'ದಿ ರೈಸ್ ಆಫ್ ಅಶೋಕ' ಇದೇ ಫೆಬ್ರವರಿ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

