
ಸತೀಶ್ ನೀನಾಸಂ, ಸಪ್ತಮಿ ಗೌಡ
ನೀನಾಸಂ ಸತೀಶ್ ಅಭಿನಯದ 'ದಿ ರೈಸ್ ಆಫ್ ಅಶೋಕ' ಮೊದಲ ಹಾಡು ರಿಲೀಸ್: ಪ್ಯಾನ್ ಇಂಡಿಯಾ ಕನಸು ಬಿಚ್ಚಿಟ್ಟ ನಟ
ಮಹದೇವರ ಕುರಿತಾದ ಈ ಮೊದಲ ಹಾಡನ್ನು ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ವಿಶೇಷವೆಂದರೆ, ನಾಯಕ ನಟ ನೀನಾಸಂ ಸತೀಶ್ ಅವರೇ 'ಏಳೋ ಮಾದೇವ' ಗೀತೆಗೆ ಸಾಹಿತ್ಯ ರಚಿಸಿದ್ದಾರೆ.
ಖ್ಯಾತ ನಟ ನೀನಾಸಂ ಸತೀಶ್ ಅಭಿನಯದ ಬಹುನಿರೀಕ್ಷಿತ ಚಿತ್ರ, 'ದಿ ರೈಸ್ ಆಫ್ ಅಶೋಕ' ಕುರಿತು ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿದೆ.
ಶೀರ್ಷಿಕೆ ಮತ್ತು ಕಂಟೆಂಟ್ ಮೂಲಕ ಗಮನ ಸೆಳೆದಿರುವ ಈ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಭಕ್ತಿಸಾಗರದಲ್ಲಿ ತೇಲುವಂತಿದೆ.
'ಏಳೋ ಮಾದೇವ' ಗೀತೆಗೆ ಸತೀಶ್ ನೀನಾಸಂ ಸಾಹಿತ್ಯ
ಮಹದೇವರ ಕುರಿತಾದ ಈ ಮೊದಲ ಹಾಡನ್ನು ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ವಿಶೇಷವೆಂದರೆ, ನಾಯಕ ನಟ ನೀನಾಸಂ ಸತೀಶ್ ಅವರೇ 'ಏಳೋ ಮಾದೇವ' ಗೀತೆಗೆ ಸಾಹಿತ್ಯ ರಚಿಸಿದ್ದಾರೆ.
ಈ ಹಾಡಿಗೆ ಕೈಲಾಶ್ ಕೇರ್, ಸಾಧ್ವಿನಿ ಕೊಪ್ಪ ಮತ್ತು ಸಿದ್ದು ಧ್ವನಿ ನೀಡಿದ್ದು, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನದಿಂದ ಹಾಡಿನ ತೂಕ ಹೆಚ್ಚಿದೆ. ಬೀಸುವ ಕಲ್ಲು, ಗಾಳಿಯಲ್ಲಿಯೂ ಶಿವನನ್ನು ವರ್ಣಿಸಿರುವ ನೀನಾಸಂ ಸತೀಶ್ ಅವರ ಸಾಹಿತ್ಯ, ಕೇಳುಗರನ್ನು ಭಕ್ತಿ ಭಾವದಲ್ಲಿ ತೇಲುವಂತೆ ಮಾಡುತ್ತದೆ.
ಭಾವುಕರಾದ ನೀನಾಸಂ ಸತೀಶ್
ಹಾಡು ಬಿಡುಗಡೆ ಬಳಿಕ ಮಾತನಾಡಿದ ನಟ ನೀನಾಸಂ ಸತೀಶ್ ಭಾವುಕರಾದರು. "ಅಯೋಗ್ಯ' ಸಿನಿಮಾ ನನ್ನದೊಂದು ಬ್ರ್ಯಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಾಡುವ ಹುಚ್ಚು ಇದೆ. ಒಂದು 'ಕೆಜಿಎಫ್', ಒಂದು 'ಕಾಂತಾರ' ಮಾಡಬೇಕು ಎಂಬ ಆಸೆ ನನಗಿದೆ" ಎಂದು ತಮ್ಮ ಕನಸನ್ನು ಹಂಚಿಕೊಂಡರು.
'ದಿ ರೈಸ್ ಆಫ್ ಅಶೋಕ' ಚಿತ್ರದ ನಿರ್ಮಾಣದ ಹಾದಿಯ ಬಗ್ಗೆ ಅವರು ನೋವಿನ ಮಾತುಗಳನ್ನಾಡಿದರು. "ಈ ಸಿನಿಮಾಗೆ ಒಂದು ರೂಪಾಯಿಯನ್ನೂ ನಾನು ಸೈನಿಂಗ್ ಹಣ ತೆಗೆದುಕೊಂಡಿಲ್ಲ. ನಾಳೆ ಶೂಟಿಂಗ್ ಮಾಡಬೇಕು ಎನ್ನುವಾಗ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲಿಂದ ನನ್ನ ಜವಾಬ್ದಾರಿ ಹೆಚ್ಚಾಯಿತು. ಇಷ್ಟೆಲ್ಲಾ ಆಗಿ ಶೂಟಿಂಗ್ ಶುರು ಆದ ಮೇಲೆ ನನ್ನ ಅಣ್ಣನಿಗೆ ಆಕ್ಸಿಡೆಂಟ್ ಆಯ್ತು. ಹೀಗೆ ಮೂರು ವರ್ಷ ಕಣ್ಣೀರು ಹಾಕಿ ಈ ಸಿನಿಮಾ ಮುಕ್ತಾಯಗೊಳಿಸಿದ್ದೇವೆ. ಒಂದು ಸಿನಿಮಾಗೆ 50 ಲಕ್ಷ ರೂಪಾಯಿ ತೆಗೆದುಕೊಂಡು 3 ವರ್ಷದಲ್ಲಿ 6 ಸಿನಿಮಾ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ನಮಗೆ 'ರೈಸ್ ಆಫ್ ಅಶೋಕ'ವೇ ಸರ್ವಸ್ವ ಆಗಿತ್ತು. ನನ್ನ ಶತ್ರುಗಳೂ ಈ ಸಿನಿಮಾ ನೋಡಿ ಹೆಮ್ಮೆ ಪಡುತ್ತಾರೆ" ಎಂದು ಅವರು ತಿಳಿಸಿದರು.
‘ಕಾಂತಾರ’ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ಈ ಚಿತ್ರದಲ್ಲಿ ಸತೀಶ್‌ಗೆ ಜೋಡಿಯಾಗಿ ನಟಿಸಿದ್ದಾರೆ. "ಬಹಳ ಖುಷಿಯಾಗಿದೆ. ನಾನು ಸಿನಿಮಾ ತಂಡಕ್ಕೆ ಕೊನೆಯ ಕಲಾವಿದೆಯಾಗಿ ಸೇರ್ಪಡೆಯಾದೆ. ಅಂದಿನಿಂದ ಇಂದಿನವರೆಗೂ ಯಾವುದೇ ಹಾಡು, ಸಂಭಾಷಣೆ, ಸೀನ್, ಕಾಸ್ಟ್ಯೂಮ್ ಏನೇ ಇರಲಿ ಎಲ್ಲದರ ಬಗ್ಗೆಯೂ ಚರ್ಚೆ ನಡೆಸಿ, ನಮ್ಮ ಅಭಿಪ್ರಾಯ ಕೇಳುತ್ತಾರೆ. ಸತೀಶ್ ಸರ್ ತುಂಬಾ ಸಹಕಾರ ನೀಡಿದ್ದಾರೆ. ನಾನು ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ನಿರ್ವಹಿಸಿದ್ದೇನೆ. ಇಡೀ ತಂಡ ಉತ್ತಮ ಕೆಲಸ ಮಾಡಿದೆ" ಎಂದು ಸಂತಸ ವ್ಯಕ್ತಪಡಿಸಿದರು.
70ರ ದಶಕದ ಕ್ರಾಂತಿಕಾರಿ ಕಥೆ
'ದಿ ರೈಸ್ ಆಫ್ ಅಶೋಕ' 70ರ ದಶಕದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಚಿತ್ರದಲ್ಲಿ ನೀನಾಸಂ ಸತೀಶ್ ಅವರು ಅನ್ಯಾಯದ ವಿರುದ್ಧ ಹೋರಾಡುವ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯುವಕನ ಬದುಕು ಮತ್ತು ಸಂಘರ್ಷದ ಸುತ್ತ ಕಥೆ ಸಾಗುತ್ತದೆ. ಈ ಚಿತ್ರ ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದ್ದು, ಇದು ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಇದೆ.
ಬಿ. ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಥೆ ದಯಾನಂದ್ ಟಿ.ಕೆ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಲವಿತ್ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಈ ಸಿನಿಮಾ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ.

