
ಕಾಂತಾರ ನೋಡಿ ವಿಜಯ್ ಸೇತುಪತಿ ಮಾಡಿದ ಆ ಒಂದು ಕಾಲ್ ರಿಷಬ್ ಶೆಟ್ಟಿಗೆ ಯಾಕೆ ಸ್ಪೆಷಲ್
ವಿಜಯ್ ಸೇತುಪತಿ-ರಿಷಬ್ ಶೆಟ್ಟಿ ಫೋನ್ ಕಾಲ್; ಸೇಮ್ ಬ್ಲಡ್' ಎಂದ ರಿಷಬ್
ರಿಷಬ್ ಶೆಟ್ಟಿ ಅವರ 'ಜೈ ಹನುಮಾನ್' ಚಿತ್ರವು ಫೆಬ್ರವರಿ 22, ಹಂಪಿಯಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದಿದೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂತಾರ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಅವರೊಂದಿಗೆ ನಡೆದ ಆಪ್ತ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ. ಕಾಂತಾರ ಬಿಡುಗಡೆಯಾದ ಸಮಯದಲ್ಲಿ ವಿಜಯ್ ಸೇತುಪತಿ ಅವರು ಖುದ್ದಾಗಿ ಫೋನ್ ಮಾಡಿ ಅಭಿನಂದಿಸಿದ್ದು ತಮಗೆ ದೊಡ್ಡ ಗೌರವ ಎಂದು ರಿಷಬ್ ಭಾವೋದ್ವೇಗದಿಂದ ನುಡಿದಿದ್ದಾರೆ.
ಮೊದಲಿಗೆ ವಿಜಯ್ ಸೇತುಪತಿ ಅವರು ಇಂಗ್ಲಿಷ್‌ನಲ್ಲಿ ಮಾತು ಆರಂಭಿಸಿ, ಸಿನಿಮಾ ಅದ್ಭುತವಾಗಿದೆ ಎಂದು ಹೊಗಳಿದ್ದರು. ಆದರೆ ರಿಷಬ್ ಅವರು ತಮಿಳಿನಲ್ಲಿ ಮಾತನಾಡಲು ಶುರುಮಾಡಿದಾಗ ಸೇತುಪತಿ ಅವರಿಗೆ ಆಶ್ಚರ್ಯವಾಯಿತು. ತಮಗೆ ತಮಿಳು ಬರುತ್ತೆ ಎಂಬ ವಿಷಯ ತಿಳಿಯುತ್ತಿದ್ದಂತೆ ಇಬ್ಬರ ನಡುವಿನ ಸಂಭಾಷಣೆ ತುಂಬಾ ಸ್ನೇಹಮಯವಾಗಿ ಮತ್ತು ವೈಯಕ್ತಿಕವಾಗಿ ಮುಂದುವರಿಯಿತು.
"ಸರ್, ನೀವು ಫೋನ್ ಮಾಡಿ ಮಾತನಾಡಿದ್ದೇ ನನಗೆ ದೊಡ್ಡ ಪ್ರಶಸ್ತಿ" ಎಂದು ರಿಷಬ್ ಈ ವೇಳೆ ಕೃತಜ್ಞತೆ ಸಲ್ಲಿಸಿದ್ದರು. ಸೇತುಪತಿ ಅವರ ಸಿನಿಮಾಗಳು ಮತ್ತು ಸರಳ ವ್ಯಕ್ತಿತ್ವಕ್ಕೆ ಮೊದಲೇ ಫ್ಯಾನ್ ಆಗಿದ್ದ ರಿಷಬ್, ಇಬ್ಬರ ನಡುವಿನ ಆ ಬಾಂಧವ್ಯವನ್ನು `ವೈ ಬ್ಲಡ್? ಸೇಮ್ ಬ್ಲಡ್!' ಎಂಬ ತಮಿಳಿನ ಖ್ಯಾತ ಕಾಮಿಡಿ ಡೈಲಾಗ್ ಮೂಲಕ ಬಣ್ಣಿಸಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
ಸದ್ಯ ರಿಷಬ್ ಶೆಟ್ಟಿ ಅವರು ಹಲವು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ಜೈ ಹನುಮಾನ್' ನಲ್ಲಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಇದರ ಜೊತೆಗೆ 'ದ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಎಂಬ ಐತಿಹಾಸಿಕ ಬಿಗ್ ಬಜೆಟ್ ಸಿನಿಮಾದಲ್ಲೂ ರಿಷಬ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸತತ ಗೆಲುವುಗಳ ಮೂಲಕ ರಿಷಬ್ ಈಗ ಭಾರತೀಯ ಚಿತ್ರರಂಗದ ಮೋಸ್ಟ್ ವಾಟೆಂಡ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ತಮಿಳು ನಟ ವಿಜಯ್ ಸೇತುಪತಿ ಅವರು ಇತ್ತೀಚೆಗೆ 'ಗಾಂಧಿ ಟಾಕ್ಸ್' ಎಂಬ ಸಂಭಾಷಣೆಗಳಿಲ್ಲದ ಮೂಕ ಚಿತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಈ ಚಿತ್ರವು ಜನವರಿ 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಈಗ ಒಟಿಟಿ ತಾಣಗಳಲ್ಲಿ ಲಭ್ಯವಿದೆ. ಸದ್ಯ ವಿಜಯ್ ಸೇತುಪತಿ ಅವರ ಅಭಿಮಾನಿಗಳು ಬಹುನಿರೀಕ್ಷಿತ 'ಫರ್ಜಿ' ವೆಬ್ ಸರಣಿಯ ಎರಡನೇ ಸೀಸನ್ ವೀಕ್ಷಿಸಲು ಕಾತರರಾಗಿದ್ದಾರೆ.
ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿರುವ ಈ ಸರಣಿಯ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, 2026ರ ದ್ವಿತೀಯಾರ್ಧದಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ವಿಜಯ್ ಸೇತುಪತಿ ಅವರು ವೆಟ್ರಿಮಾರನ್ ಅವರ 'ಅರಸನ್' ಚಿತ್ರದಲ್ಲೂ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

