Dhurandhar 2: ಧುರಂಧರ್ 2 ಸಿನಿಮಾವನ್ನು ಮುಕ್ತಕಂಠದಿಂದ ಹೊಗಳಿದ ರಿಷಬ್ ಶೆಟ್ಟಿ
x

Dhurandhar 2: ಧುರಂಧರ್ 2' ಸಿನಿಮಾವನ್ನು ಮುಕ್ತಕಂಠದಿಂದ ಹೊಗಳಿದ ರಿಷಬ್ ಶೆಟ್ಟಿ

ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿರುವ ಅವರು, ಸಿನಿಮಾದ ಮೇಕಿಂಗ್ ಮತ್ತು ಕಲಾವಿದರ ನಟನೆಯನ್ನು ಹಾಡಿ ಹೊಗಳಿದ್ದಾರೆ.


Click the Play button to hear this message in audio format

ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ 'ಧುರಂಧರ್: ದಿ ರಿವೆಂಜ್' (ಧುರಂಧರ್ 2) ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಯಾಗಿರುವ ಈ ಸುನಾಮಿಯ ನಡುವೆ, ಇದೀಗ ಕನ್ನಡದ ಸ್ಟಾರ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಿನಿಮಾ ವೀಕ್ಷಿಸಿ ಚಿತ್ರತಂಡದ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿರುವ ಅವರು, ಸಿನಿಮಾದ ಮೇಕಿಂಗ್ ಮತ್ತು ಕಲಾವಿದರ ನಟನೆಯನ್ನು ಹಾಡಿ ಹೊಗಳಿದ್ದಾರೆ.

ಸಿನಿಮಾದ ಬಗ್ಗೆ ಬರೆದುಕೊಂಡಿರುವ ರಿಷಬ್ ಶೆಟ್ಟಿ, "ಸಿನಿಮಾದ ಮೊದಲ ದೃಶ್ಯವೇ ನಿಮ್ಮನ್ನು ಒಮ್ಮೆಲೇ ಸೆಳೆದುಕೊಂಡು, ಕೊನೆಯವರೆಗೂ ಕುರ್ಚಿಯ ತುದಿಯಲ್ಲಿ ಕೂರುವಂತೆ ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾದ ಪ್ರತಿಯೊಂದು ಫ್ರೇಮ್ ಕೂಡ ನೈಜ ಯುದ್ಧದಂತೆಯೇ ಭಾಸವಾಗುತ್ತದೆ" ಎಂದು ರೋಮಾಂಚನ ವ್ಯಕ್ತಪಡಿಸಿದ್ದಾರೆ. "ಇದೊಂದು ಕೇವಲ 'ಧುರಂಧರ್' ಚಿತ್ರದ ಮುಂದುವರಿದ ಭಾಗ (ಸೀಕ್ವೆಲ್) ಮಾತ್ರವಲ್ಲ, ಸಹೋದರ ಆದಿತ್ಯ ಧರ್ ಅವರು ಈ ಕಥೆಯನ್ನು ಅದ್ಭುತವಾಗಿ ಹೆಣೆದು ಸೃಷ್ಟಿಸಿದ್ದಾರೆ. ಕಥೆಯ ಪ್ರತಿಯೊಂದು ವಿಷಯವನ್ನು ಅತ್ಯಂತ ಅಚ್ಚುಕಟ್ಟಾಗಿ ವಿವರಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು" ಎಂದು ನಿರ್ದೇಶಕರ ಬೆನ್ನು ತಟ್ಟಿದ್ದಾರೆ.

ಕಲಾವಿದರಿಗೆ ಬಹುಪರಾಕ್

ಚಿತ್ರದಲ್ಲಿನ ಬೃಹತ್ ತಾರಾಗಣದ ನಟನೆಯನ್ನು ರಿಷಬ್ ಶೆಟ್ಟಿ ಪ್ರತ್ಯೇಕವಾಗಿ ನೆನಪಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್, ಅರ್ಜುನ್ ರಾಮ್‌ಪಾಲ್, ಆರ್. ಮಾಧವನ್, ಸಾರಾ ಅರ್ಜುನ್ ಹಾಗೂ ಸಂಜಯ್ ದತ್ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ಸಿನಿಮಾದ ಜೀವನಾಡಿಯಾಗಿರುವ ತಾಂತ್ರಿಕ ವರ್ಗದವರಾದ ಛಾಯಾಗ್ರಾಹಕ ವಿಕಾಶ್ ನೌಲಾಖಾ, ಸಂಗೀತ ನಿರ್ದೇಶಕ ಶಾಶ್ವತ್ ಸಚ್‌ದೇವ್ ಮತ್ತು ಸಂಕಲನಕಾರ ಶಿವಕುಮಾರ್ ಪಣಿಕ್ಕರ್ ಅವರ ಕೆಲಸಕ್ಕೂ ರಿಷಬ್ ಶೆಟ್ಟಿ ಪೂರ್ಣ ಅಂಕಗಳನ್ನು ನೀಡಿ, ಇಡೀ ಚಿತ್ರತಂಡಕ್ಕೆ ಬಹುಪರಾಕ್ ಹೇಳಿದ್ದಾರೆ.

Read More
Next Story