
ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ವಿಜಯ್ ಸೇತುಪತಿ ಸಿನಿಮಾಕ್ಕೆ ವಿಲನ್-ಕಾಲಿವುಡ್‌ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ
ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ನಟನೆಯ 'ಪಾಕೆಟ್ ನೊವೆಲ್' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಖಳನಾಯಕನಾಗಿ ಅಬ್ಬರಿಸಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಆಲೋಚನೆ ಮತ್ತು ನಟನೆಯ ಮೂಲಕ ಹೊಸ ಅಲೆ ಎಬ್ಬಿಸಿರುವ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ', 'ಟೋಬಿ' ಹಾಗೂ ಇತ್ತೀಚಿನ '45' ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿರುವ ರಾಜ್, ಈಗ ತಮಿಳು ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ಈ ಹೊಸ ಸಿನಿಮಾಗೆ 'ಪಾಕೆಟ್ ನೊವೆಲ್' ಎಂದು ಹೆಸರಿಡಲಾಗಿದೆ.
ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ರಾಜ್ ಬಿ ಶೆಟ್ಟಿ ಅವರು ವಿಲನ್ ಆಗಿ ಅಬ್ಬರಿಸಲಿದ್ದಾರೆ. ಈ ಮೂಲಕ ತ್ಯಾಗರಾಜನ್ ಕುಮಾರರಾಜ ಮತ್ತು ವಿಜಯ್ ಸೇತುಪತಿ ಜೋಡಿ 'ಸೂಪರ್ ಡಿಲಕ್ಸ್' ನಂತರ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಚಿತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಕಿಶೋರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಆಕ್ಷನ್-ಥ್ರಿಲ್ಲರ್ ಮಾದರಿಯ ಈ ಚಿತ್ರಕ್ಕೆ ಸಂಗೀತ ದಿಗ್ಗಜ ಇಳಯರಾಜ ಸಂಗೀತ ಸಂಯೋಜಿಸುತ್ತಿರುವುದು ಮತ್ತೊಂದು ವಿಶೇಷ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಂಗಳವಾರ ಚೆನ್ನೈನಲ್ಲಿ ಅಧಿಕೃತವಾಗಿ ಶೂಟಿಂಗ್ ಆರಂಭವಾಗಿದೆ. ಕರಾವಳಿ ಪ್ರತಿಭೆ ರಾಜ್ ಬಿ ಶೆಟ್ಟಿ ಅವರ ಪ್ರತಿಭೆಯು ಈಗ ಭಾಷೆಯ ಗಡಿ ದಾಟಿ ತಮಿಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿರುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೆಮ್ಮೆ ತಂದಿದೆ.
ರಾಜ್ ಬಿ ಶೆಟ್ಟಿ ಇತ್ತೀಚೆಗೆ ರವಿ ಸಾರಂಗ ನಿರ್ದೇಶನದ ರಕ್ಕಸಪುರದೋಳ್ ಸಿನಿಮಾದಲ್ಲಿ'ಶಿವ' ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ಒಂದು ಸಸ್ಪೆನ್ಸ್ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಫೆಬ್ರವರಿ 6 ರಂದು ಬಿಡುಗಡೆಯಾಗಿದೆ. ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಈ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕರಾಗಿ ಹೊಸ ಅಲೆ ಎಬ್ಬಿಸಿದವರು ರಾಜ್ ಬಿ. ಶೆಟ್ಟಿ. ಮಂಗಳೂರು ಮೂಲದ ಇವರು 2017ರಲ್ಲಿ ತೆರೆಕಂಡ 'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಈ ಸಿನಿಮಾ ಕೇವಲ ಹಾಸ್ಯವನ್ನಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದು, ರಾಜ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಇದಾದ ನಂತರ 2021ರಲ್ಲಿ ಬಿಡುಗಡೆಯಾದ 'ಗರುಡ ಗಮನ ವೃಷಭ ವಾಹನ' ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆಯಿತು.
ಕೇವಲ ತಮ್ಮದೇ ನಿರ್ದೇಶನದ ಚಿತ್ರಗಳಲ್ಲದೆ, ಇತರ ನಿರ್ದೇಶಕರ ಸಿನಿಮಾಗಳಲ್ಲೂ ರಾಜ್ ಅವರು ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಚಿತ್ರದಲ್ಲಿ ವೈದ್ಯರಾಗಿ ಮಿಂಚಿದ್ದ ಅವರು, ಇತ್ತೀಚೆಗೆ 'ಟೋಬಿ' ಎಂಬ ಕೌಟುಂಬಿಕ ಹಾಗೂ ಆ್ಯಕ್ಷನ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದರ ಬೆನ್ನಲ್ಲೇ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಮೂಲಕ ನವಿರಾದ ಪ್ರೇಮಕಥೆಯನ್ನು ಕನ್ನಡಿಗರಿಗೆ ಉಣಬಡಿಸಿದರು. ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮಮ್ಮುಟ್ಟಿ ಅವರೊಂದಿಗೆ 'ಟರ್ಬೊ' ಚಿತ್ರದಲ್ಲಿ ನಟಿಸುವ ಮೂಲಕ ರಾಜ್ ಬಿ. ಶೆಟ್ಟಿ ಮಲಯಾಳಂ ಪ್ರೇಕ್ಷಕರ ಮನವನ್ನೂ ಗೆದ್ದಿದ್ದಾರೆ.

