
'ಲವ್ ಮಾಕ್‌ಟೇಲ್ 3' ಫೇಲ್ ಡಾರ್ಲಿಂಗ್ ಕೃಷ್ಣ ಗರಂ
Love Mocktail 3| ಮಿಲನಾ ಅಹಂಕಾರದಿಂದ ಸಿನಿಮಾ ಫೇಲ್ ಅಂದವರಿಗೆ ಕೃಷ್ಣ ತಿರುಗೇಟು
ಬೋಗಸ್ ಕಥೆ ಹಾಗೂ ಮಿಲನಾ-ಕೃಷ್ಣ ಅವರ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎಂಬ ಮಾಧ್ಯಮಗಳ ಟೀಕೆಗೆ ನಟ ಡಾರ್ಲಿಂಗ್ ಕೃಷ್ಣ 'ಧುರಂಧರ್' ಚಿತ್ರದ ಡೈಲಾಗ್ ಮೂಲಕವೇ ಖಡಕ್ ತಿರುಗೇಟು ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ 'ಲವ್ ಮಾಕ್‌ಟೇಲ್ 3' ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದು, ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಭಣಗುಡುತ್ತಿವೆ. ಸರಣಿಯ ಹಿಂದಿನ ಎರಡು ಭಾಗಗಳು ಸೂಪರ್ ಹಿಟ್ ಆಗಿದ್ದರೂ, ಮೂರನೇ ಭಾಗವು ಗಟ್ಟಿಯಾದ ಕಥೆಯಿಲ್ಲದೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಬೋಗಸ್ ಕಥೆಯನ್ನು ನಂಬಿಕೊಂಡು ಸಿನಿಮಾ ಮಾಡಿದ್ದೇ ಈ ದುಸ್ಥಿತಿಗೆ ಕಾರಣ ಎಂಬ ಮಾಧ್ಯಮವೊಂದು ಬಿತ್ತರಿಸಿದ ವರದಿಗೆ ನಟ ಡಾರ್ಲಿಂಗ್ ಕೃಷ್ಣ ತಮ್ಮದೇ ಶೈಲಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಚಿತ್ರದ ಸೋಲಿಗೆ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಅತಿಯಾದ ಆತ್ಮವಿಶ್ವಾಸ ಹಾಗೂ ಅಹಂಕಾರವೇ ಕಾರಣ ಎಂದು ಮಾಧ್ಯಮವೊಂದು ಗಂಭೀರ ಆರೋಪ ಮಾಡಿತ್ತು. ಇದೇ ಸಮಯದಲ್ಲಿ ತೆರೆಕಂಡಿರುವ 'ಧುರಂದರ್ 2' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ಆದರೆ 'ಲವ್ ಮಾಕ್‌ಟೇಲ್ 3' ಚಿತ್ರಕ್ಕೆ ಜನರು ಕ್ಯಾರೇ ಎನ್ನುತ್ತಿಲ್ಲ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಈ ಪೋಸ್ಟ್‌ಗೆ ತಿರುಗೇಟು ನೀಡಿದ ಕೃಷ್ಣ, ''ಪ್ರಸ್ತುತ ಟ್ರೆಂಡ್‌ನಲ್ಲಿರುವ 'ಧುರಂದರ್' ಚಿತ್ರದ `ಹಿಂದೂಸ್ತಾನ್ ಕಾ ಸಬ್ಸೆ ಬಡಾ ದುಶ್ಮನ್ ಏಕ್ ಹಿಂದೂಸ್ತಾನ್ ಹಿ ಹೈ'ಎಂಬ ಡೈಲಾಗ್ ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲವೂ ನಿಮ್ಮ ಆಶೀರ್ವಾದ, ಕನ್ನಡ ಚಿತ್ರಗಳ ಮೇಲೆ ನಿಮ್ಮ ಬೆಂಬಲ ಹೀಗೆ ಇರಲಿ" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
'ಲವ್ ಮಾಕ್‌ಟೇಲ್ 3' ಸಿನಿಮಾ ಕಥೆಯು ಆದಿ ತನ್ನ ದತ್ತು ಪುತ್ರಿ ನಿಧಿಯನ್ನು ಸಾಕಿ ಬೆಳೆಸುವ ಪೋಷಕತ್ವದ ಜವಾಬ್ದಾರಿಯ ಸುತ್ತ ಸುತ್ತುತ್ತದೆ. ಆದಿ ತನ್ನ ಪತ್ನಿ ನಿಧಿಯ ಅಗಲಿಕೆಯ ನೋವಿನಲ್ಲಿದ್ದರೂ, ಮಗಳೇ ತನ್ನ ಸರ್ವಸ್ವ ಎಂದು ಬದುಕುತ್ತಿರುತ್ತಾನೆ. ಆದರೆ ಶಾಲೆಯಲ್ಲಿ ಮಗಳ ತುಂಟಾಟ ಮತ್ತು ಹಠಮಾರಿ ವರ್ತನೆ ಆದಿಗೆ ತಲೆನೋವಾಗಿ ಪರಿಣಮಿಸುತ್ತದೆ. ಚಿತ್ರದ ದ್ವಿತೀಯಾರ್ಧವು ಒಂದು ಅನಿರೀಕ್ಷಿತ ತಿರುವಿನೊಂದಿಗೆ ಕೋರ್ಟ್‌ರೂಮ್ ಡ್ರಾಮಾವಾಗಿ ಬದಲಾಗುತ್ತದೆ. ಇಲ್ಲಿ ಕೃಷ್ಣ ಅವರು ಭಾವನಾತ್ಮಕ ಸನ್ನಿವೇಶಗಳ ಮೂಲಕ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡುವ ಪ್ರಯತ್ನ ಮಾಡಿದ್ದಾರೆ. ವಕೀಲರ ಪಾತ್ರದಲ್ಲಿ ಶ್ವೇತಾ ಪ್ರಸಾದ್ ಮತ್ತು ದಿಲೀಪ್ ರಾಜ್ ಅವರ ಅಭಿನಯವು ತೂಕಬದ್ಧವಾಗಿದ್ದು, ಮಾನಸಿಕ ಆರೋಗ್ಯ ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ ನಡೆಯುವ ಚರ್ಚೆಗಳು ಅರ್ಥಪೂರ್ಣವಾಗಿವೆ. ನಕುಲ್ ಅಭ್ಯಂಕರ್ ಅವರ ಸಂಗೀತವು ಚಿತ್ರದ ಮೆಲೋಡ್ರಾಮಾಗೆ ಸಾಥ್ ನೀಡಿದೆ. ಒಟ್ಟಾರೆಯಾಗಿ ಹೇಳುವುದಾದರೆ, 'ಲವ್ ಮಾಕ್ಟೇಲ್ 3' ಕೇವಲ ಪ್ರೇಮಕಥೆಗೆ ಸೀಮಿತವಾಗದೆ ಪೋಷಕತ್ವದ ಹೊಸ ಆಯಾಮವನ್ನು ಪರಿಚಯಿಸಿದೆ.

