
ಜನವರಿ 23ಕ್ಕೆ 'ಲ್ಯಾಂಡ್‌ಲಾರ್ಡ್' ಸಿನಿಮಾ ರಿಲೀಸ್
ಲ್ಯಾಂಡ್‌ಲಾರ್ಡ್ ಟ್ರೇಲರ್ ಬಿಡುಗಡೆ: ದುನಿಯಾ ವಿಜಯ್ , ರಾಜ್ ಬಿ ಶೆಟ್ಟಿ ಮುಖಾಮುಖಿ
'ಲ್ಯಾಂಡ್‌ಲಾರ್ಡ್' ಚಿತ್ರವು 1980ರ ದಶಕದ ಹಳ್ಳಿಯ ಹಿನ್ನೆಲೆಯುಳ್ಳ ಒಂದು ತೀವ್ರವಾದ ಆಕ್ಷನ್ ಡ್ರಾಮಾ ಆಗಿದೆ. ಚಿತ್ರದ ಕಥೆಯು ಭೂಮಿ, ಅಧಿಕಾರ ಮತ್ತು ಬದುಕುಳಿಯುವಿಕೆಗಾಗಿ ನಡೆಯುವ ಹೋರಾಟದ ಸುತ್ತ ಸಾಗುತ್ತದೆ.
ನಟ ದುನಿಯಾ ವಿಜಯ್ ಅವರ 52ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿನಯದ ಬಹುನಿರೀಕ್ಷಿತ 'ಲ್ಯಾಂಡ್‌ಲಾರ್ಡ್' ಚಿತ್ರದ ಅಧಿಕೃತ ಟ್ರೇಲರ್ ಮಂಗಳವಾರ ಬಿಡುಗಡೆಗೊಂಡಿದೆ. ಹಳ್ಳಿ ಸೊಗಡಿನ ಕಥೆ ಹೊಂದಿರುವ ಈ ಚಿತ್ರದಲ್ಲಿ ಭೂಮಾಲೀಕರ ದರ್ಪ ಮತ್ತು ಅಮಾಯಕ ರೈತರ ಹೋರಾಟದ ಕಥೆಯಿದ್ದು, ಟ್ರೇಲರ್‌ನಲ್ಲಿ ವಿಜಯ್ ಅವರ ರಗಡ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರಿಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ಈ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಟ್ರೇಲರ್‌ನಲ್ಲಿ ಅವರ ಪಾತ್ರದ ಝಲಕ್ ಕುತೂಹಲ ಮೂಡಿಸಿದೆ.
'ಜಂಟಲ್‌ಮನ್' ಮತ್ತು 'ಗುರು-ಶಿಷ್ಯರು' ಖ್ಯಾತಿಯ ಜಡೇಶ್ ಹಂಪಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 1980ರ ಕಾಲಘಟ್ಟವನ್ನು ತೆರೆಯ ಮೇಲೆ ಮರುಸೃಷ್ಟಿಸಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಹೆಚ್ಚಿನ ಶಕ್ತಿ ನೀಡಿದ್ದು, ಈಗಾಗಲೇ ಬಿಡುಗಡೆಯಾಗಿರುವ 'ನಿಂಗವ್ವ ನಿಂಗವ್ವ' ಹಾಡು ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಸ್ವಾಮಿ ಜೆ. ಗೌಡ ಅವರ ಛಾಯಾಗ್ರಹಣ ಮತ್ತು ಮಾಸ್ತಿ ಅವರ ಸಂಭಾಷಣೆಗಳು ಟ್ರೇಲರ್‌ನಲ್ಲಿ ಗಮನ ಸೆಳೆದಿವೆ.
ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಜನವರಿ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

