
ಸೆಲೆಬ್ರಿಟಿ ಜೋಡಿಗಳಿಂದ 'ಲ್ಯಾಂಡ್ ಲಾರ್ಡ್' ಹಾಡು ರಿಲೀಸ್!
ಸಾರಥಿ ಫಿಲಂಸ್ ನಿರ್ಮಾಣದ, ಜಡೇಶ್ ಕೆ. ಹಂಪಿ ನಿರ್ದೇಶನದ 'ಲ್ಯಾಂಡ್ ಲಾರ್ಡ್' ಚಿತ್ರದ "ನಿಂಗವ್ವ ನಿಂಗವ್ವ" ಹಾಡು ಅದ್ಧೂರಿಯಾಗಿ ಬಿಡುಗಡೆಯಾಯಿತು.
ಸ್ಯಾಂಡಲ್‌ವುಡ್‌ನ ನಟ ದುನಿಯಾ ವಿಜಯ್ ಹಾಗೂ 'ಡಿಂಪಲ್ ಕ್ವೀನ್' ರಚಿತಾ ರಾಮ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ 'ಲ್ಯಾಂಡ್ ಲಾರ್ಡ್' ಈಗ ಹೊಸ ಸಂಚಲನ ಸೃಷ್ಟಿಸಿದೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಚಿತ್ರದ ಮೊದಲ ಲಿರಿಕಲ್ ಸಾಂಗ್ ʻನಿಂಗವ್ವ ನಿಂಗವ್ವʼ ಹಾಡು ಬಿಡುಗಡೆಗೊಂಡಿದೆ.
ವಿಶೇಷವೆಂದರೆ, ಈ ಹಾಡನ್ನು ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ದಂಪತಿಗಳಾದ ʻನೆನಪಿರಲಿʼ ಪ್ರೇಮ್ - ಜ್ಯೋತಿ, ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಹಾಗೂ ತರುಣ್ ಸುಧೀರ್ - ಸೋನಾಲ್ ಮೊಂತೆರೊ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ತಾರೆಯರು, ಹಾಡಿನ ಮೇಕಿಂಗ್ ಹಾಗೂ ಹಳ್ಳಿ ಸೊಗಡಿನ ಸಾಹಿತ್ಯ ಕಿವಿಗಿಂಪಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿಜಯ್ ಹಾಗೂ ರಚಿತಾ ಅವರು ಆಗಮಿಸಿದ ದಂಪತಿಗಳಿಗೆ ಬಾಗಿನ ನೀಡಿ ಗೌರವಿಸಿದರು.
ಹಾಡಿನ ಬಗ್ಗೆ ಮಾತನಾಡಿದ ದುನಿಯಾ ವಿಜಯ್, "ನನ್ನ ವೃತ್ತಿಜೀವನದ ಬಹುತೇಕ ಸೂಪರ್ ಹಿಟ್ ಹಾಡುಗಳಿಗೆ ಸಾಹಿತ್ಯ ಬರೆದ ಯೋಗರಾಜ್ ಭಟ್ ಅವರು ಈ ಚಿತ್ರಕ್ಕೂ ಅದ್ಭುತ ಸಾಹಿತ್ಯ ನೀಡಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಅನನ್ಯ ಭಟ್ ಅವರ ಗಾಯನ ಈ ಹಾಡಿಗೆ ಜೀವ ತುಂಬಿದೆ," ಎಂದರು. ಚಿತ್ರದಲ್ಲಿ ವಿಜಯ್ 'ರಾಚಯ್ಯ'ನಾಗಿ ಹಾಗೂ ರಚಿತಾ ರಾಮ್ 'ನಿಂಗವ್ವ'ನಾಗಿ ಕಾಣಿಸಿಕೊಂಡಿದ್ದು, ವಿಶೇಷವಾಗಿ ರಚಿತಾ ಅವರು ಹದಿನೆಂಟು ವರ್ಷದ ಮಗಳ ತಾಯಿಯ ಪಾತ್ರದಲ್ಲಿ ನಟಿಸಿರುವುದು ವಿಶೇಷ.
'ಕಾಟೇರ' ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಕೆ. ಹಂಪಿ, ಈ ಬಾರಿ 80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಈ ಕಥೆಯನ್ನು ಹೆಣೆದಿದ್ದಾರೆ. "ವಿಜಿ ಸರ್ ಮತ್ತು ಯೋಗರಾಜ್ ಭಟ್ ಅವರ ಕಾಂಬಿನೇಷನ್ ಯಾವಾಗಲೂ ಮ್ಯಾಜಿಕ್ ಮಾಡುತ್ತದೆ, ಈ ಹಾಡೂ ಕೂಡ ಆ ಸಾಲಿಗೆ ಸೇರಲಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಸ್ವಾಮಿ ಜೆ ಗೌಡ ಅವರ ಛಾಯಾಗ್ರಹಣಕ್ಕೆ ಚಿತ್ರತಂಡ ಅಭಿನಂದನೆ ಸಲ್ಲಿಸಿತು.
ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಅವರು ಮಾತನಾಡಿದ್ದು, ಸಿನಿಮಾ ಜನವರಿ 23 ರಂದು ತೆರೆಕಾಣಲಿದೆ ಎಂದು ಘೋಷಿಸಿದರು. ಸಮಾರಂಭದಲ್ಲಿ ನೀನಾಸಂ ಸತೀಶ್, ಗುರು ದೇಶಪಾಂಡೆ, ಉಮಾಶ್ರೀ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

