
ಮಾಸ್ಕ್ ಧರಿಸಿ ಕಡಲೆಕಾಯಿ ಪರಿಷೆಗೆ ಬಂದ ನಟಿ ರಚಿತಾ ರಾಮ್
ಕಡಲೆಕಾಯಿ ಪರಿಷೆಗೆ ಭೇಟಿ ನೀಡಿದ ನಂತರ ರಚಿತಾ ರಾಮ್ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ 'ಕಡಲೆಕಾಯಿ ಪರಿಷೆ'ಗೆ ಈ ಬಾರಿ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರು ಭೇಟಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಅವರು ಸಾಮಾನ್ಯರಂತೆ ಮಾಸ್ಕ್ ಧರಿಸಿ ಪರಿಷೆಗೆ ಆಗಮಿಸಿದ್ದರು.
ಪ್ರತಿ ವರ್ಷದಂತೆ ಈ ಬಾರಿಯೂ ಅಪಾರ ಜನಸ್ತೋಮ ಸೇರಿದ್ದ ಕಡಲೆಕಾಯಿ ಪರಿಷೆಯ ಸಂಭ್ರಮದಲ್ಲಿ ರಚಿತಾ ರಾಮ್ ಪಾಲ್ಗೊಂಡರು. ಯಾರ ಗಮನಕ್ಕೂ ಬಾರದಿರಲಿ ಎಂಬ ಉದ್ದೇಶದಿಂದ ಸಂಪೂರ್ಣವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಪರಿಷೆಯುದ್ದಕ್ಕೂ ಸುತ್ತಾಡಿದ್ದಾರೆ. ಪರಿಷೆಯುದ್ದಕ್ಕೂ ಹಾಕಲಾಗಿದ್ದ ಕಡಲೆಕಾಯಿ ಹಾಗೂ ಇತರೆ ಮಳಿಗೆಗಳನ್ನು ವೀಕ್ಷಿಸಿ, ಕಡಲೆಕಾಯಿಯನ್ನು ಖರೀದಿಸಿದ್ದಾರೆ.
'ಕ್ರಿಮಿನಲ್' ಕಾರ್ಯಕ್ರಮ ಮುಗಿಸಿ ಪರಿಷೆಗೆ
ಕಡಲೆಕಾಯಿ ಪರಿಷೆಗೆ ಭೇಟಿ ನೀಡಿದ ನಂತರ ರಚಿತಾ ರಾಮ್ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ಕ್ರಿಮಿನಲ್ ಸಿನಿಮಾ ಕಾರ್ಯಕ್ರಮ ಮುಗಿಸಿಕೊಂಡು ಕಡಲೆಕಾಯಿ ಪರಿಷೆಗೆ ಹೋಗಿದ್ದು ಹೀಗೆ. ಎಷ್ಟು ಮಜಾ ಮಾಡಿದ್ದೀನಿ ಗೊತ್ತಾ? ನನ್ನ ಜೊತೆಗಿದ್ದ ಹುಡುಗರಿಗೆ ಧನ್ಯವಾದಗಳು. ಈ ತಂಡದೊಂದಿಗೆ ನಾನು ಸೇರಲು ಅದೃಷ್ಟ ಮಾಡಿದ್ದೆ. 18 ವರ್ಷಗಳ ನಂತರ ನಾನು ಮತ್ತೆ ಕಡಲೆಕಾಯಿ ಪರಿಷೆಗೆ ನನ್ನ ಹುಡುಗರ ಜೊತೆಗೆ ಬಂದಿದ್ದೇನೆ. ಎಂತಹ ಅನುಭವ, ಅದ್ಭುತ" ಎಂದು ಬರೆದುಕೊಂಡಿದ್ದಾರೆ. ಸುಮಾರು 18 ವರ್ಷಗಳ ನಂತರ ಮತ್ತೆ ಪರಿಷೆಗೆ ಭೇಟಿ ನೀಡಿದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ಜೊತೆ ಮತ್ತೆ ತೆರೆ ಹಂಚಿಕೆ
ಇದೇ ವೇಳೆ, ನಟಿ ರಚಿತಾ ರಾಮ್ ಅವರು ಇತ್ತೀಚೆಗೆ 'ಕ್ರಿಮಿನಲ್' ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರೊಂದಿಗೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ವಿಶೇಷ ಏನೆಂದರೆ, ಎಂಟು ವರ್ಷಗಳ ಹಿಂದೆ ತೆರೆಕಂಡ 'ಭರ್ಜರಿ' ಸಿನಿಮಾದ ನಂತರ ಧ್ರುವ ಸರ್ಜಾ ಹಾಗೂ ರಚಿತಾ ರಾಮ್ ಮತ್ತೆ 'ಕ್ರಿಮಿನಲ್' ಸಿನಿಮಾದ ಮೂಲಕ ಒಂದಾಗಿದ್ದಾರೆ.

