
'ಕೆಡಿ' ಅಖಾಡಕ್ಕೆ ಎಂಟ್ರಿ ಕೊಟ್ಟ 'ಕಾಲಭೈರವ'. ಕಿಚ್ಚ ಸುದೀಪ್ ಅವರ ರಗಡ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ರಾಮನವಮಿಗೆ ಭರ್ಜರಿ ಉಡುಗೊರೆ ನೀಡಿದ ಕೆಡಿ ಚಿತ್ರತಂಡ.
KD: The Devil| ಕಾಲಭೈರವನ ಎಂಟ್ರಿ; ಕಿಚ್ಚ ಸುದೀಪ್ ರಗಡ್ ಲುಕ್ ವೈರಲ್
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ: ದಿ ಡೆವಿಲ್' ಚಿತ್ರದಲ್ಲಿ ಕಿಚ್ಚ ಸುದೀಪ್ 'ಕಾಲಭೈರವ'ನಾಗಿ ಕಾಣಿಸಿಕೊಳ್ಳುತ್ತಿದ್ದು, ರಾಮನವಮಿ ಪ್ರಯುಕ್ತ ಸುದೀಪ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಸ್ಯಾಂಡಲ್‌ವುಡ್‌ನ ಅತ್ಯಂತ ನಿರೀಕ್ಷಿತ ಸಿನಿಮಾ 'ಕೆಡಿ: ದಿ ಡೆವಿಲ್' ಚಿತ್ರತಂಡವು ರಾಮನವಮಿಯ ವಿಶೇಷ ದಿನದಂದು ಕಿಚ್ಚ ಸುದೀಪ್ ಅವರ ಪಾತ್ರವನ್ನು ಪರಿಚಯಿಸುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ.
ಈ ಚಿತ್ರದಲ್ಲಿ ಸುದೀಪ್ ಅವರು 'ಕಾಲಭೈರವ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಿಡುಗಡೆಯಾಗಿರುವ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸುತ್ತಿದೆ. ಈ ಪೋಸ್ಟರ್‌ನಲ್ಲಿ ಸುದೀಪ್ ಅತ್ಯಂತ ರಗಡ್ ಹಾಗೂ ಶಕ್ತಿಯುತವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟುಗೊಳಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು `ಕೆಲವು ಹೆಸರುಗಳು ಭಯ ಹುಟ್ಟಿಸುತ್ತವೆ, ಆದರೆ ಈ ಹೆಸರು ಯುದ್ಧವನ್ನೇ ಸೃಷ್ಟಿಸುತ್ತದೆ. ಅವರೇ ಕಾಲ ಭೈರವ' ಎಂಬ ಅಡಿಬರಹದೊಂದಿಗೆ ಈ ಪೋಸ್ಟರ್ ಹಂಚಿಕೊಂಡಿದೆ.
ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೆ ಇದರಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಸ್ಸು ಸೇನ್ ಗುಪ್ತಾ ಮತ್ತು ನೋರಾ ಫತೇಹಿ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಸಂಕೇತ್ ಆಚಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.'ಕೆಡಿ: ದಿ ಡೆವಿಲ್' ಚಿತ್ರವು ಏಪ್ರಿಲ್ 30ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ. 70ರ ದಶಕದ ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಆಧರಿಸಿದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಇತ್ತೀಚೆಗೆ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ಬೆನ್ನಲ್ಲೇ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಹಾಡಿನಲ್ಲಿ ಬಳಸಲಾದ ಸಾಹಿತ್ಯ ಮತ್ತು ನೃತ್ಯ ಸಂಯೋಜನೆ ಅತ್ಯಂತ ಅಶ್ಲೀಲತೆಯಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ವಿಶೇಷವಾಗಿ ಹಾಡಿನ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿಯಾ’ ಸಾಹಿತ್ಯವು ದ್ವಂದ್ವಾರ್ಥದಿಂದ ಕೂಡಿದ್ದು, ಮಹಿಳೆಯರನ್ನು ಅವಮಾನಿಸುವಂತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ವಿವಾದವು ಕೇವಲ ಸಾಮಾಜಿಕ ಮಾದ್ಯಮಗಳಲ್ಲಿ ಮಾತ್ರವಲ್ಲ, ಕಾನೂನು ಸಂಕಷ್ಟವನ್ನೂ ತಂದೊಡ್ಡಿದೆ. ದೆಹಲಿ ಮತ್ತು ಕರ್ನಾಟಕದ ಹಲವು ಕಡೆಗಳಲ್ಲಿ ಚಿತ್ರತಂಡದ ವಿರುದ್ಧ ದೂರುಗಳು ದಾಖಲಾಗಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿತ್ತು. ವಿವಾದ ತಾರಕಕ್ಕೇರುತ್ತಿದ್ದಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸೂಚನೆಯ ಮೇರೆಗೆ ಈ ಹಾಡನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಅಧಿಕೃತವಾಗಿ ತೆಗೆದುಹಾಕಲಾಗಿದೆ. ಅಷ್ಟೇ ಅಲ್ಲದೆ, ಅಲಿಗಢದ ಧಾರ್ಮಿಕ ಸಂಸ್ಥೆಯೊಂದು ನಟಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿರುವುದು ವಿವಾದಕ್ಕೆ ಮತ್ತೊಂದು ತಿರುವು ನೀಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಪ್ರೇಮ್, ಹಾಡಿನ ಮೂಲ ಕನ್ನಡ ಸಾಹಿತ್ಯದಲ್ಲಿ ಯಾವುದೇ ತಪ್ಪು ಇರಲಿಲ್ಲ, ಆದರೆ ಹಿಂದಿ ಭಾಷೆಗೆ ಭಾಷಾಂತರಿಸುವಾಗ ಸಂವಹನ ಕೊರತೆಯಿಂದಾಗಿ ಈ ಅಚಾತುರ್ಯ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆಯಿರಲಿ ಎಂದು ಕ್ಷಮೆಯನ್ನು ಕೇಳಿದ್ದರು.

