ಕೆಡಿ ಹಾಡಿನ ವಿವಾದ| ಹಿಂದಿ ಸಾಹಿತ್ಯದ ಬಗ್ಗೆ ಅರಿವಿರಲಿಲ್ಲ, ಕ್ಷಮೆಯಿರಲಿ: ನಿರ್ದೇಶಕ ಪ್ರೇಮ್
x

'ಕೆಡಿ ದಿ ಡೆವಿಲ್' ಚಿತ್ರದ 'ಸರ್ಕೆ ಚುನರ್' ಹಾಡಿನ ವಿವಾದದ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯೆ

'ಕೆಡಿ' ಹಾಡಿನ ವಿವಾದ| ಹಿಂದಿ ಸಾಹಿತ್ಯದ ಬಗ್ಗೆ ಅರಿವಿರಲಿಲ್ಲ, ಕ್ಷಮೆಯಿರಲಿ: ನಿರ್ದೇಶಕ ಪ್ರೇಮ್

'ಕೆಡಿ ದಿ ಡೆವಿಲ್' ಚಿತ್ರದ 'ಸರ್ಕೆ ಚುನರ್' ಹಾಡಿನ ವಿವಾದದ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯೆ. ಹಿಂದಿ ಸಾಹಿತ್ಯದ ಗೊಂದಲ ಮತ್ತು ಕ್ಷಮೆಯಾಚನೆಯ ಸಂಪೂರ್ಣ ವಿವರ ಇಲ್ಲಿದೆ.


Click the Play button to hear this message in audio format

ಬಹುನಿರೀಕ್ಷಿತ 'ಕೆಡಿ ದಿ ಡೆವಿಲ್' ಚಿತ್ರದ 'ಸರ್ಕೆ ಚುನರ್' ಹಾಡು ಸದ್ಯ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಾಡಿನ ಸಾಹಿತ್ಯ ಮತ್ತು ನಟಿ ನೋರಾ ಫತೇಹಿ ಅವರ ವಿರುದ್ಧ ಕೇಳಿಬಂದಿರುವ ಫತ್ವಾ ವಿಚಾರ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ವಿವಾದವು ಕೇವಲ ಪ್ರಚಾರದ ಗಿಮಿಕ್ ಎಂಬ ಆರೋಪಗಳ ನಡುವೆಯೇ ನಿರ್ದೇಶಕ ಪ್ರೇಮ್ ಮೌನ ಮುರಿದಿದ್ದಾರೆ. ತಮಗೆ ಯಾವುದೇ ರೀತಿಯ ವಿವಾದ ಸೃಷ್ಟಿಸುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದು ಭಾವನಾತ್ಮಕ ಕಥೆಯುಳ್ಳ ಸಿನಿಮಾ ಮತ್ತು ಕೇವಲ ಒಂದು ಸಂಭ್ರಮದ ಹಾಡಿನ ಮೇಲೆ ಇಷ್ಟೊಂದು ರಾದ್ಧಾಂತ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಗೊಂದಲಕ್ಕೆ ಮೂಲ ಕಾರಣ ಹಿಂದಿ ಅವತರಣಿಕೆಯ ಸಾಹಿತ್ಯ ಎಂದು ಪ್ರೇಮ್ ವಿವರಿಸಿದ್ದಾರೆ. ಮೂಲ ಕನ್ನಡ ಸಾಹಿತ್ಯವನ್ನು ತಾವೇ ಬರೆದಿದ್ದರೂ, ಹಿಂದಿ ಭಾಷೆಯ ಮೇಲೆ ತಮಗೆ ಹೆಚ್ಚಿನ ಹಿಡಿತವಿಲ್ಲದ ಕಾರಣ ರಕೀಬ್ ಆಲಂ ಅವರು ಮಾಡಿದ ಅನುವಾದದ ಪದಪ್ರಯೋಗಗಳು ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಜಾನಪದ ಶೈಲಿಯಲ್ಲಿ ತಾವು ಬಳಸಿದ ಸಾಲುಗಳು ಹಿಂದಿಯಲ್ಲಿ ಬೇರೆಯದೇ ಅರ್ಥ ನೀಡಿದ್ದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದಿರುವ ಪ್ರೇಮ್, ಈಗಾಗಲೇ ಆಕ್ಷೇಪಾರ್ಹ ಸಾಲುಗಳನ್ನು ತೆಗೆದುಹಾಕಿ ಪರಿಷ್ಕೃತ ಆವೃತ್ತಿಯನ್ನು ಸೆನ್ಸಾರ್ ಮಂಡಳಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಜಗತ್ತಿನಲ್ಲಿ ಯುದ್ಧ ಮತ್ತು ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳು ಇರುವಾಗ ಒಂದು ಹಾಡಿನ ವಿಚಾರವನ್ನು ಇಷ್ಟು ದೊಡ್ಡದು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಪ್ರೇಮ್, ಯಾರ ಮನಸ್ಸಾದರೂ ನೋವಾಗಿದ್ದರೆ ತಾವು ಕ್ಷಮೆ ಕೇಳುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ 'ಸರ್ಕೆ ಚುನರ್' ಹಾಡಿನ ಸುತ್ತ ಎದ್ದಿದ್ದ ವಿವಾದದ ಕಿಚ್ಚನ್ನು ತಣಿಸಲು ಅವರು ಪ್ರಯತ್ನಿಸಿದ್ದಾರೆ.

ಧ್ರುವ ಸರ್ಜಾ ಅಭಿನಯದ 'ಕೆಡಿ: ದಿ ಡೆವಿಲ್' ಸಿನಿಮಾದ "ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ" ಹಾಡಿನ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ಹಾಡಿನ ಸಾಹಿತ್ಯವು ಮಹಿಳೆಯರನ್ನು ಅವಹೇಳನ ಮಾಡುವಂತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗವು, ಚಿತ್ರತಂಡದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಈ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಡಿನಲ್ಲಿ ಬಳಸಲಾಗಿರುವ ಪದಗಳು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರಿಗೆ ಅಗೌರವ ತರುವಂತಿವೆ ಎಂದು ಅವರು ಆಕ್ಷೇಪಿಸಿದ್ದರು. ಈ ಸಂಬಂಧ ಪ್ರಾದೇಶಿಕ ಸೆನ್ಸಾರ್ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧಿಕೃತ ಪತ್ರ ಬರೆದಿರುವ ಅವರು, ಕೂಡಲೇ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Read More
Next Story