KD Movie Song| ಸಾಹಿತ್ಯ ಬರೆದಿದ್ದು ಪ್ರೇಮ್ - ವಿವಾದದ ಬೆನ್ನಲ್ಲೇ ಕೈ ತೊಳೆದುಕೊಂಡ ಹಿಂದಿ ಸಾಹಿತಿ ರಖೀಬ್ ಆಲಂ
x

ಹಿಂದಿ ಸಾಹಿತಿ ರಖೀಬ್ ಆಲಂ, ಈ ಸಾಹಿತ್ಯ ತಾನು ಬರೆದದ್ದಲ್ಲ, ಇದು ನಿರ್ದೇಶಕ ಪ್ರೇಮ್ ಅವರ ಕನ್ನಡ ಸಾಹಿತ್ಯದ ನೇರ ಭಾಷಾಂತರ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

KD Movie Song| ಸಾಹಿತ್ಯ ಬರೆದಿದ್ದು ಪ್ರೇಮ್ - ವಿವಾದದ ಬೆನ್ನಲ್ಲೇ ಕೈ ತೊಳೆದುಕೊಂಡ ಹಿಂದಿ ಸಾಹಿತಿ ರಖೀಬ್ ಆಲಂ

ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಪ್ಯಾನ್‌ಇಂಡಿಯಾ ಸಿನಿಮಾ 'ಕೆಡಿ: ದಿ ಡೆವಿಲ್' ಚಿತ್ರದ 'ಸರ್ಕೆ ಚುನರ್' ಎಂಬ ಹಿಂದಿ ಹಾಡು ಸದ್ಯ ದೇಶಾದ್ಯಂತ ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಈ ಗೀತೆಯ ಅಶ್ಲೀಲ ಸಾಹಿತ್ಯದ ಬಗ್ಗೆ ಕೇಳಿಬಂದ ತೀವ್ರ ಆಕ್ಷೇಪಗಳ ಬೆನ್ನಲ್ಲೇ, ಸಾಹಿತಿ ರಖೀಬ್ ಆಲಂ ಅವರು ಸ್ಪಷ್ಟನೆ ನೀಡಿದ್ದು, ಇದು ಕೇವಲ ಕನ್ನಡದ ಮೂಲ ಸಾಹಿತ್ಯದ ಅನುವಾದವೇ ಹೊರತು ತಮ್ಮ ಸ್ವಂತ ಸಾಹಿತ್ಯವಲ್ಲ ಎಂದು ಹೇಳಿಕೊಂಡಿದ್ದಾರೆ. ನಿರ್ದೇಶಕ ಪ್ರೇಮ್ ಅವರು ಕನ್ನಡದಲ್ಲಿ ಬರೆದಿದ್ದ 'ಸರ್ಸೆ ನಿನ್ನ ಸೆರಗ ಸರ್ಸೆ' ಎಂಬ ಹಾಡಿನ ಸಾಲುಗಳನ್ನೇ ಅಕ್ಷರಶಃ ಹಿಂದಿಗೆ ಭಾಷಾಂತರಿಸಲು ತಮಗೆ ಸೂಚಿಸಲಾಗಿತ್ತು ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಈ ಹಾಡಿನಲ್ಲಿ ಬಳಕೆಯಾಗಿರುವ ದ್ವಂದ್ವಾರ್ಥದ ಪದಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು, ನೋರಾ ಫತೇಹಿ ಮತ್ತು ಸಂಜಯ್ ದತ್ ಅವರ ಮೇಲೆ ಚಿತ್ರೀಕರಿಸಲಾದ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅಂತಹ ಆಕ್ಷೇಪಾರ್ಹ ಪದಗಳು ಮೂಲ ಕನ್ನಡ ಆವೃತ್ತಿಯಲ್ಲೇ ಇದ್ದವು ಎಂದು ರಖೀಬ್ ಆಲಂ ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ಇಂತಹ ಹಾಡು ಬರೆಯಲು ನಿರಾಕರಿಸಿದ್ದರೂ, ಕೇವಲ ಅನುವಾದ ಮಾಡುವಂತೆ ಒತ್ತಾಯಿಸಲಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ. ಪುಷ್ಪ ಚಿತ್ರದಂತಹ ಹಿಟ್ ಹಾಡುಗಳನ್ನು ಬರೆದ ತಮಗೆ ಈ ವಿವಾದದಿಂದ ಅಪಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

ಯೂಟ್ಯೂಬ್‌ನಿಂದ ಹಾಡು ಡಿಲೀಟ್

ಈ ವಿವಾದದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರತಂಡವು ಯೂಟ್ಯೂಬ್‌ನಿಂದ ಅಧಿಕೃತ ಹಾಡನ್ನು ಡಿಲೀಟ್ ಮಾಡಿದೆ. ಇದರ ಬೆನ್ನಲ್ಲೇ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದು, ಇಂತಹ ಅಶ್ಲೀಲ ಹಾಡುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಗಾಯಕ ಅರ್ಮಾನ್ ಮಲಿಕ್ ಅವರು ವಾಣಿಜ್ಯ ಉದ್ದೇಶದ ಗೀತರಚನೆಯು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಿರುವುದು ಬೇಸರದ ಸಂಗತಿ ಎಂದು ಪ್ರತಿಕ್ರಿಯಿಸಿದ್ದರೆ, ನಿರ್ದೇಶಕ ಓನಿರ್ ಅವರು ಸೆನ್ಸಾರ್ ಮಂಡಳಿಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ.

ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಚಿತ್ರತಂಡವು ಸಾಹಿತ್ಯದಲ್ಲಿ ತಿದ್ದುಪಡಿ ಮಾಡಲು ಮುಂದಾಗಿದೆ. ರಖೀಬ್ ಆಲಂ ಅವರು ಮರುದಿನವೇ ಹೊಸ ಮತ್ತು ಸ್ವಚ್ಛವಾದ ಸಾಹಿತ್ಯವನ್ನು ನೀಡಿದ್ದು, ಪರಿಷ್ಕೃತ ಹಾಡನ್ನು ಶೀಘ್ರದಲ್ಲೇ ಕ್ಷಮಾಪಣಾ ಪತ್ರದೊಂದಿಗೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಾಹಿತಿ, ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.

Read More
Next Story