
'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದ
'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದ: ಸೋಶಿಯಲ್ ಮೀಡಿಯಾದಲ್ಲಿ ಜೋಗಿ ಪ್ರೇಮ್ ವಿರುದ್ಧ ನೆಟ್ಟಿಗರ ಆಕ್ರೋಶ
ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ಕೆಡಿ: ದಿ ಡೆವಿಲ್' ಚಿತ್ರದ ಮೂರನೇ ಹಾಡು 'ಸರ್ಸೆ ನಿನ್ನ ಸೆರಗ ಸರ್ಸೆ' ಬಿಡುಗಡೆಯಾದ ಬೆನ್ನಲ್ಲೇ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಕೆಡಿ: ದಿ ಡೆವಿಲ್' ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಸದ್ಯ ವಿವಾದದ ಸುಳಿಗೆ ಸಿಲುಕಿದೆ. ಈ ವಿಶೇಷ ಹಾಡಿನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದು, ಭಾನುವಾರ ಬಿಡುಗಡೆಯಾದ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ನೋರಾ ಫತೇಹಿ ಅವರ ನೃತ್ಯವನ್ನು ಕೆಲವರು ಮೆಚ್ಚಿದರೂ, ಹಾಡಿನ ಸಾಹಿತ್ಯದಲ್ಲಿರುವ ಅಶ್ಲೀಲತೆ ಮತ್ತು ದ್ವಂದ್ವಾರ್ಥದ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿಗೆ ಕನ್ನಡದಲ್ಲಿ ಸ್ವತಃ ನಿರ್ದೇಶಕ ಪ್ರೇಮ್ ಅವರು ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಅವರು ಹಾಡಿದ್ದಾರೆ. ಹಿಂದಿ ವರ್ಷನ್ಗೆ ರಖೀಬ್ ಆಲಂ ಅವರು ಸಾಹಿತ್ಯ ಬರೆದಿದ್ದು, ಮಂಗ್ಲಿ ಧ್ವನಿ ನೀಡಿದ್ದಾರೆ.
ಗಾಯಕ ಅರ್ಮಾನ್ ಮಲಿಕ್ ಕಿಡಿ
ಹಾಡಿನ ಸಾಹಿತ್ಯದ ಕುರಿತು ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಇಂದಿನ ವಾಣಿಜ್ಯ ಸಂಗೀತ ಮತ್ತು ಸಾಹಿತ್ಯದ ಮಟ್ಟ ತೀರಾ ಕೆಳಮಟ್ಟಕ್ಕೆ ಇಳಿದಿದೆ ಎಂದು ಕಿಡಿಕಾರಿದ್ದಾರೆ. ಎಕ್ಸ್ ಮೂಲಕ ಪ್ರತಿಕ್ರಿಯಿಸಿದ ಅವರು, "ನಾನು ಕೇಳಿದ್ದು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಹಾಡನ್ನು ಕೇಳಬೇಕಾಯಿತು, ಇಂತಹ ಸಾಹಿತ್ಯವನ್ನು ಕೇಳಿ ನಿಜಕ್ಕೂ ಬೇಸರವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಯೂಟ್ಯೂಬ್ ಕಾಮೆಂಟ್‌ಗಳಲ್ಲಿಯೂ ಸಹ ಈ ಹಾಡನ್ನು ನಿಷೇಧಿಸಬೇಕೆಂದು ಅನೇಕರು ಆಗ್ರಹಿಸಿದ್ದು, 2026ರ ಕಾಲಘಟ್ಟದಲ್ಲೂ ಇಂತಹ ಅಗ್ಗದ ಸಾಹಿತ್ಯದ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.
ಸಾಹಿತ್ಯ ಮತ್ತು ನೃತ್ಯದ ಬಗ್ಗೆ ಆಕ್ಷೇಪ
ಹಾಡಿನಲ್ಲಿ ಬಳಸಿರುವ ಪದಗಳು ಮತ್ತು ದ್ವಂದ್ವಾರ್ಥದ ಸಂಭಾಷಣೆಗಳು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿವೆ. ನೃತ್ಯ ಶೈಲಿ ಮತ್ತು ಸಾಹಿತ್ಯವು ಅತ್ಯಂತ ಕೆಳಮಟ್ಟದ್ದಾಗಿದ್ದು, ಇದು ಸಂಸ್ಕೃತಿಗೆ ಧಕ್ಕೆ ತರುವಂತಿದೆ ಎಂದು ಅನೇಕರು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಸೆನ್ಸಾರ್ ಮಂಡಳಿಯು ಇಂತಹ ಹಾಡುಗಳಿಗೆ ಹೇಗೆ ಅನುಮತಿ ನೀಡುತ್ತದೆ ಎಂಬ ಪ್ರಶ್ನೆಯೂ ಎದ್ದಿದೆ. ಮುಖ್ಯವಾಗಿ ಹಾಡಿನ ಆರಂಭಿಕ ಸಾಲುಗಳು ಸಭ್ಯತೆಯ ಮಿತಿಯನ್ನು ಮೀರಿದೆ ಎಂಬುದು ಸಾರ್ವಜನಿಕರ ದೂರು.
ಸಂಜಯ್ ದತ್ ಅವರಂತಹ ಹಿರಿಯ ನಟರು ಇಂತಹ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಅಂತಹ ದಿಗ್ಗಜ ಕಲಾವಿದರಿದ್ದು, ಏಪ್ರಿಲ್ 30ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಈ ಪ್ಯಾನ್ ಇಂಡಿಯಾ ಚಿತ್ರವು 1970ರ ದಶಕದ ಭೂಗತ ಲೋಕದ ಕಥೆಯನ್ನು ಹೊಂದಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರವು ಏಪ್ರಿಲ್ 30ರಂದು ತೆರೆಕಾಣಲು ಸಜ್ಜಾಗಿದೆ. ಆದರೆ ಚಿತ್ರ ಬಿಡುಗಡೆಗೂ ಮುನ್ನವೇ ಈ ಹಾಡಿನ ವಿವಾದವು ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ವಿವಾದದ ಕುರಿತು ನಟಿ ನೋರಾ ಫತೇಹಿ ಅಥವಾ ಚಿತ್ರದ ನಿರ್ಮಾಪಕರು ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

