
ಧುರಂಧರ್ 2' ಚಿತ್ರಕ್ಕೆ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಫಿದಾ ಆಗಿದ್ದಾರೆ.
Dhurandhar 2| ಶಿವಣ್ಣನ ಮನಗೆದ್ದ ‘ಧುರಂಧರ್ 2’: ರಣವೀರ್ ಸಿಂಗ್ ನಟನೆಗೆ ಹ್ಯಾಟ್ರಿಕ್ ಹೀರೋ ಫಿದಾ
ಧುರಂಧರ್ 2' ಚಿತ್ರಕ್ಕೆ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಫಿದಾ ಆಗಿದ್ದಾರೆ. ರಣವೀರ್ ಸಿಂಗ್ ಅಭಿನಯ ಮತ್ತು ಆದಿತ್ಯ ಧರ್ ನಿರ್ದೇಶನವನ್ನು ಶಿವಣ್ಣ ಹಾಡಿ ಹೊಗಳಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಧುರಂಧರ್ 2’ ಚಿತ್ರದ ಕ್ರೇಜ್ ಒಂದು ವಾರ ಕಳೆದರೂ ಕಡಿಮೆಯಾಗಿಲ್ಲ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಇದೀಗ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಶಿವಣ್ಣ, ರಣವೀರ್ ಸಿಂಗ್ ನಟನೆ ಮತ್ತು ಚಿತ್ರದ ತಾಂತ್ರಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಶಿವರಾಜ್‌ಕುಮಾರ್ ಅವರು ಚಿತ್ರದ ಕುರಿತು ಮಾತನಾಡುತ್ತಾ, "ಧುರಂಧರ್: ದಿ ರಿವೆಂಜ್ ಅದ್ಭುತವಾಗಿದೆ. ಚಿತ್ರದ ಪ್ರತಿ ಕ್ಷಣವನ್ನೂ ನಾನು ಆನಂದಿಸಿದೆ. ನಟ ರಣವೀರ್ ಸಿಂಗ್ ಅವರ ಪರ್ಫಾರ್ಮೆನ್ಸ್ ಅದ್ಭುತವಾಗಿದ್ದು, ಶಾಶ್ವತ್ ನೀಡಿರುವ ಸಂಗೀತ, ಅದರಲ್ಲೂ ಹಳೆಯ ಹಾಡುಗಳ ಬಳಕೆ ಮನಸ್ಸಿನ ಮೇಲೆ ಅಚ್ಚೊತ್ತುತ್ತದೆ. ನಿರ್ದೇಶಕ ಆದಿತ್ಯ ಧರ್ ಅವರ ಶ್ರಮ ಮತ್ತು ಕಲೆಗೆ ಗೌರವ ಸಲ್ಲಲೇಬೇಕು. ಒಬ್ಬ ಸೈನಿಕ ದೇಶಪ್ರೇಮಕ್ಕಾಗಿ ಎಂತಹ ಸಾಹಸಕ್ಕೂ ಸಿದ್ಧನಾಗುತ್ತಾನೆ ಎನ್ನುವುದೇ ಈ ಸಿನಿಮಾದ ಜೀವಾಳ," ಎಂದು ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ 2025ರ ಡಿಸೆಂಬರ್‌ನಲ್ಲಿ ಮೊದಲ ಭಾಗ ಬಿಡುಗಡೆಯಾದಾಗಲೂ ಶಿವಣ್ಣ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಅಂದು ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅವರ ಅಭಿನಯದ ಬಗ್ಗೆ ಮಾತನಾಡಿದ್ದ ಅವರು, ರಣವೀರ್ ನಿರ್ವಹಿಸಿದ ಪಾತ್ರ ಅತ್ಯಂತ ಸವಾಲಿನದ್ದಾಗಿತ್ತು ಎಂದಿದ್ದರು. ಅಕ್ಷಯ್ ಖನ್ನಾ ಅವರ ಪಾತ್ರಕ್ಕೆ ಹೆಚ್ಚಿನ ಸ್ವಾತಂತ್ರ್ಯವಿತ್ತು, ಆದರೆ ರಣವೀರ್ ಸಿಂಗ್ ಒಬ್ಬ ಗುಪ್ತಚರ ಅಧಿಕಾರಿಯಾಗಿ ತೋರಬೇಕಾದ ಗಾಂಭೀರ್ಯ ಮತ್ತು ಸೂಕ್ಷ್ಮತೆಯನ್ನು ಅತ್ಯಂತ ನಾಜೂಕಾಗಿ ನಿಭಾಯಿಸಿದ್ದಾರೆ ಎಂದು ಅವರು ವಿಶ್ಲೇಷಿಸಿದ್ದರು.
ಈ ಚಿತ್ರದಲ್ಲಿ ರಣವೀರ್ ಸಿಂಗ್ 'ಹಮ್ಜಾ' ಎಂಬ ಹೆಸರಿನ ಭಾರತೀಯ ಗೂಢಚಾರಿಯಾಗಿ ಪಾಕಿಸ್ತಾನದ ಗ್ಯಾಂಗ್‌ಸ್ಟರ್ ರೆಹಮಾನ್ ಡಕೈತ್ (ಅಕ್ಷಯ್ ಖನ್ನಾ) ಅಡ್ಡಾದೊಳಗೆ ನುಸುಳುವ ಪಾತ್ರ ನಿರ್ವಹಿಸಿದ್ದಾರೆ. ಮೊದಲ ಭಾಗವು ಕಂದಹಾರ್ ವಿಮಾನ ಅಪಹರಣ ಮತ್ತು ಮುಂಬೈ ದಾಳಿಯಂತಹ ಭೀಕರ ಘಟನೆಗಳ ಹಿನ್ನೆಲೆಯಲ್ಲಿ ಸಾಗಿದ್ದರೆ, ಈ ಎರಡನೇ ಭಾಗವು ಕರಾಚಿಯ ಅಂಡರ್‌ವರ್ಲ್ಡ್‌ನಲ್ಲಿ ಹಮ್ಜಾ ಅಲಿಯ ಬೆಳವಣಿಗೆಯನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ, ಹಮ್ಜಾ ಎಂಬ ಹೆಸರಿನ ಹಿಂದೆ ಇರುವ ಜಸ್ಕಿರತ್ ಸಿಂಗ್ ರಂಗಿ ಎಂಬ ಯುವಕ ಹೇಗೆ ಗುಪ್ತಚರ ಅಧಿಕಾರಿಯಾಗಿ ಬದಲಾದ ಎಂಬ ಕಥೆಯನ್ನೂ ಈ ಚಿತ್ರ ಅನಾವರಣಗೊಳಿಸಿದೆ.

