
ಪಾಪರಾಜಿಗಳ ವಿರುದ್ದ ನಟಿ ಸಪ್ತಮಿ ಗೌಡ ಧ್ವನಿ ಎತ್ತಿರುವ ಬೆನ್ನಲ್ಲೇ ಇದೀಗ ನಟ ಶಿವರಾಜ್‌ಕುಮಾರ್ ಅವರು ಈ ಆಂದೋಲನಕ್ಕೆ ಸಾಥ್ ನೀಡಿದ್ದಾರೆ.
ನಟಿಯರ ಅಸಭ್ಯ ಚಿತ್ರೀಕರಣದ ವಿರುದ್ಧ ಶಿವರಾಜ್‌ಕುಮಾರ್ ಕಿಡಿ
ಇತ್ತೀಚೆಗೆ ಚಿತ್ರರಂಗದಲ್ಲಿ ನಟಿಯರ ಖಾಸಗಿತನಕ್ಕೆ ಧಕ್ಕೆ ತರುವಂತಹ ಮತ್ತು ಅಸಭ್ಯವಾಗಿ ಚಿತ್ರೀಕರಿಸುವ ಘಟನೆಗಳ ವಿರುದ್ಧ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಕಾರ್ಯಕ್ರಮಗಳಲ್ಲಿ ನಟಿಯರನ್ನು ಅಸಭ್ಯವಾಗಿ ಚಿತ್ರೀಕರಿಸುವ ಪಾಪರಾಜಿಗಳ ವಿರುದ್ದ ನಟಿ ಸಪ್ತಮಿ ಗೌಡ ಧ್ವನಿ ಎತ್ತಿರುವ ಬೆನ್ನಲ್ಲೇ ಇದೀಗ ನಟ ಶಿವರಾಜ್‌ಕುಮಾರ್ ಅವರು ಈ ಆಂದೋಲನಕ್ಕೆ ಸಾಥ್ ನೀಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ನಟ ಶಿವರಾಜ್‌ಕುಮಾರ್, ‘ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ. ಹೆಣ್ಣು ಮಕ್ಕಳ ಗೌರವಕ್ಕೆ ಚ್ಯುತಿ ತರಬೇಡಿ’ ಎಂದು ಶಿವರಾಜ್‌ಕುಮಾರ್ ಅವರು ಕೋರಿಕೊಂಡಿದ್ದಾರೆ.
ಸಾರ್ವಜನಿಕವಾಗಿ ನಡೆಯುವ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಕೆಲವು ಕ್ಯಾಮೆರಾಮನ್‌ಗಳು ಉದ್ದೇಶಪೂರ್ವಕವಾಗಿ ಅಸಭ್ಯ ಕೋನಗಳಿಂದ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಕೇವಲ ವೀವ್ಸ್ ಮತ್ತು ವೈರಲ್ ಆಗುವ ಉದ್ದೇಶದಿಂದ ನಟಿಯರ ದೇಹದ ಮೇಲೆ ಕ್ಯಾಮೆರಾ ಜೂಮ್ ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ನಟಿ ಸಪ್ತಮಿ ಸಪ್ತಮಿ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರನ್ನು ಚಿತ್ರೀಕರಿಸುವಾಗ ಉದ್ದೇಶಪೂರ್ವಕವಾಗಿ 'ಜೂಮ್-ಇನ್' ಮಾಡುವುದು ಮತ್ತು ಅಸಭ್ಯ ಆಂಗಲ್‌ಗಳಲ್ಲಿ ಫೋಟೋ ತೆಗೆಯುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ. ನಾವು ಚಿತ್ರರಂಗಕ್ಕೆ ಬಂದಿರುವುದು ನಮ್ಮ ಕಲೆ ಮತ್ತು ಸಿನಿಮಾಗಾಗಿ, ಕೇವಲ ದೇಹ ಪ್ರದರ್ಶನಕ್ಕಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲವೇ ಕೆಲವು ವ್ಯಕ್ತಿಗಳು ಮಾಡುತ್ತಿರುವ ಈ ಅಸಭ್ಯ ವರ್ತನೆಯು ನಟಿಯರ ಘನತೆಗೆ ಧಕ್ಕೆ ತರುತ್ತಿದೆ ಮತ್ತು ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದ್ದರು.
ಸಪ್ತಮಿ ಅವರ ಈ ದಿಟ್ಟ ನಿಲುವಿಗೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟಿಯರಾದ ರುಕ್ಮಿಣಿ ವಸಂತ್, ಆಶಿಕಾ ರಂಗನಾಥ್ ಅವರು ಬೆಂಬಲ ಸೂಚಿಸಿದ್ದರು. ಈ ನಟಿಯರು ಸಪ್ತಮಿ ಅವರ ಪೋಸ್ಟ್ ಅನ್ನು ಮರುಹಂಚಿಕೊಳ್ಳುವ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಅದರಲ್ಲೂ ಆಶಿಕಾ ರಂಗನಾಥ್ ಅವರು ಪ್ರತಿಕ್ರಿಯಿಸಿ, ಗೌರವ ನೀಡುವುದನ್ನು ರೂಢಿಸಿಕೊಳ್ಳಿ, ಉಲ್ಲಂಘನೆಯನ್ನಲ್ಲ; ಇಂತಹ ಅಸಭ್ಯ ಆಂಗಲ್‌ಗಳು ಮತ್ತು ಜೂಮ್-ಇನ್‌ಗಳು ವೃತ್ತಿಪರತೆಗೆ ವಿರುದ್ಧವಾದವು ಎಂದು ಬರೆದುಕೊಂಡಿದ್ದರು.

