
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ
Darshan Case|ದರ್ಶನ್ಗೆ ಬಿಗ್ ರಿಲೀಫ್: ಜೈಲಿನಲ್ಲಿ ಸಂದರ್ಶಕರ ಭೇಟಿ; ಕೋರ್ಟ್ ಸಮ್ಮತಿ
ಮೊಬೈಲ್ ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ ಮತ್ತು ಸಾಕ್ಷ್ಯ ನಾಶಪಡಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ದರ್ಶನ್ ಸಲ್ಲಿಸಿದ್ದ ಸಂದರ್ಶಕರನ್ನು ಭೇಟಿ ಮಾಡುವ ಸಂಬಂಧ ಮನವಿಗೆ 57ನೇ ಸೆಷನ್ಸ್ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಆದರೆ, ಈ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಜೈಲು ಸೂಪರಿಂಟೆಂಡೆಂಟ್ಗೆ ವಹಿಸಲಾಗಿದ್ದು, ಜೈಲು ಮ್ಯಾನ್ಯುಯಲ್ ನಿಯಮಗಳ ಅಡಿಯಲ್ಲಿ ಸೂಪರಿಂಟೆಂಡೆಂಟ್ ಒಪ್ಪಿಗೆ ನೀಡಿದರೆ ಮಾತ್ರ ಈ ಸಂದರ್ಶನಕ್ಕೆ ಅವಕಾಶವಿರುತ್ತದೆ. ಒಂದು ವೇಳೆ ಸೂಪರಿಂಟೆಂಡೆಂಟ್ ಅನುಮತಿ ನಿರಾಕರಿಸಿದರೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದೇ ವೇಳೆ, ಮೊಬೈಲ್ ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ ಮತ್ತು ಸಾಕ್ಷ್ಯ ನಾಶಪಡಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸುಳ್ಳು ಅಥವಾ ಆಧಾರರಹಿತ ವಾದ ಮಂಡಿಸಿದ್ದಕ್ಕಾಗಿ ಅರ್ಜಿದಾರರಿಗೆ 5 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಮೊಬೈಲ್ ವಶಕ್ಕೆ ಪಡೆದ ಸ್ಥಳದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿಲ್ಲ.
ಐವರು ಆರೋಪಿಗಳ ಜಾಮೀನು ಭವಿಷ್ಯ
ಇನ್ನೊಂದೆಡೆ, ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಪವನ್, ವಿನಯ್, ಧನರಾಜ್, ರಾಘವೇಂದ್ರ ಮತ್ತು ನಂದೀಶ್ ಅವರ ಜಾಮೀನು ಅರ್ಜಿಯ ತೀರ್ಪು ಕೂಡ ಪ್ರಕಟವಾಗಲಿದೆ. ಈ ಐವರು ಆರೋಪಿಗಳಿಗೆ ನೀಡಲಾದ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಮೇಲೆ ನ್ಯಾಯಾಲಯವು ಇಂದು ತನ್ನ ನಿರ್ಧಾರವನ್ನು ತಿಳಿಸಲಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೂನ್ 11, 2024ರಂದು ಬಂಧನಕ್ಕೊಳಗಾಗಿದ್ದ ದರ್ಶನ್, 5 ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಆ ಸಮಯದಲ್ಲಿ 'ಡೆವಿಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಆದರೆ, ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಪರಿಣಾಮ, ಕಳೆದ ವರ್ಷ ಆಗಸ್ಟ್ 14ರಂದು ಅವರು ಮತ್ತೆ ಜೈಲು ಸೇರಬೇಕಾಯಿತು. ಸದ್ಯ ಅವರು 6 ತಿಂಗಳಿನಿಂದ ಜೈಲಿನಲ್ಲೇ ದಿನ ಕಳೆಯುತ್ತಿದ್ದು, ಕಾನೂನು ಹೋರಾಟ ಮುಂದುವರಿದಿದೆ. ದರ್ಶನ್ ಶೀಘ್ರವೇ ಬಿಡುಗಡೆಯಾಗಿ ಮತ್ತೆ ಬೆಳ್ಳಿಪರದೆ ಮೇಲೆ ಮಿಂಚಲಿ ಎಂಬುದು ಅವರ ಲಕ್ಷಾಂತರ 'ಸೆಲೆಬ್ರಿಟಿ'ಗಳ (ಅಭಿಮಾನಿಗಳ) ಆಶಯವಾಗಿದೆ.

