Saipallavi| ಸಾಯಿ ಪಲ್ಲವಿಗೆ ಬ್ಲ್ಯಾಕ್ ಲೇಡಿ ಪ್ರಶಸ್ತಿ; ಮುಕುಂದ್ ವರದರಾಜನ್ ಕುಟುಂಬಕ್ಕೆ ಅರ್ಪಿಸಿದ ನಟಿ
x

ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿ ಇಂದು ವರ್ಗೀಸ್ ಅವರ ಪಾತ್ರಕ್ಕೆ ಜೀವ ತುಂಬಿದ್ದ ಸಾಯಿ ಪಲ್ಲವಿ, ತಮ್ಮ ನೈಜ ನಟನೆಯ ಮೂಲಕ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದರು. 

Saipallavi| ಸಾಯಿ ಪಲ್ಲವಿಗೆ 'ಬ್ಲ್ಯಾಕ್ ಲೇಡಿ' ಪ್ರಶಸ್ತಿ; ಮುಕುಂದ್ ವರದರಾಜನ್ ಕುಟುಂಬಕ್ಕೆ ಅರ್ಪಿಸಿದ ನಟಿ

70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸಮಾರಂಭದಲ್ಲಿ 'ಅಮರನ್' ಚಿತ್ರದ ಅದ್ಭುತ ನಟನೆಗಾಗಿ ಸಾಯಿ ಪಲ್ಲವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.


Click the Play button to hear this message in audio format

ದಕ್ಷಿಣ ಭಾರತದ ಪ್ರತಿಷ್ಠಿತ ಫಿಲ್ಮ್‌ಫೇರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಭಾಷಾ ನಟಿ ಸಾಯಿ ಪಲ್ಲವಿ ಅವರಿಗೆ ‘ಅಮರನ್’ ಚಿತ್ರದ ಅದ್ಭುತ ನಟನೆಗಾಗಿ ಅವರಿಗೆ 'ಬ್ಲ್ಯಾಕ್ ಲೇಡಿ' ಪ್ರಶಸ್ತಿ ಲಭಿಸಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಮೂರು ಭಾಷೆಗಳಲ್ಲಿ ಒಟ್ಟು ಏಳು ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನು ಸಾಯಿಪಲ್ಲವಿ ಮುಡಿಗೇರಿಸಿಕೊಂಡಿದ್ದಾರೆ.

ಕೇರಳ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ನಡೆದ ಪ್ರತಿಷ್ಠಿತ 70ನೇ ಫಿಲ್ಮ್‌ಫೇರ್‌ ಅವಾರ್ಡ್‌ ಸೌತ್ ಈ ಬಾರಿ ಕೇರಳದ ಕೊಚ್ಚಿಯಲ್ಲಿ ಇತಿಹಾಸ ಸೃಷ್ಟಿಸಿತ್ತು.

ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿ ಇಂದು ವರ್ಗೀಸ್ ಅವರ ಪಾತ್ರಕ್ಕೆ ಜೀವ ತುಂಬಿದ್ದ ಸಾಯಿ ಪಲ್ಲವಿ, ತಮ್ಮ ನೈಜ ನಟನೆಯ ಮೂಲಕ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದರು. ಅಮರನ್ ಚಿತ್ರದಲ್ಲಿ ಅವರ ಭಾವನಾತ್ಮಕ ಅಭಿನಯಕ್ಕೆ ವಿಮರ್ಶಕರಿಂದ ಹಾಗೂ ಸಿನಿರಸಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸಾಯಿ ಪಲ್ಲವಿ,"ಅಮರನ್ ಸಿನಿಮಾ ನನಗೆ ಕೇವಲ ಪ್ರೀತಿ ಮತ್ತು ಮೆಚ್ಚುಗೆಯನ್ನು ಮಾತ್ರ ನೀಡಿದೆ. ಈ ಪ್ರಶಸ್ತಿಯನ್ನು ನಾನು ಆ ಕುಟುಂಬಕ್ಕೆ ಅರ್ಪಿಸಲು ಬಯಸುತ್ತೇನೆ, ಯಾರು ನಮಗೆ ಅವರ ಜೀವನದ ಕಥೆಯನ್ನು ಹೇಳಲು ಅವಕಾಶ ಮಾಡಿಕೊಟ್ಟರೋ ಅವರಿಗೆ ಈ ಗೌರವ ಸಲ್ಲಬೇಕು," ಎಂದು ಹೆಮ್ಮೆಯಿಂದ ಹೇಳಿದರು.

ಮಿಲಿಟರಿ ಸೇರಲು ಮುಂದಾಗುತ್ತಿದ್ದಾರೆ ಯುವಕರು

ಸಿನಿಮಾದ ಯಶಸ್ಸು ಮತ್ತು ಅದರ ಸಾಮಾಜಿಕ ಪ್ರಭಾವದ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, "ಈ ಸಿನಿಮಾ ನೋಡಿದ ನಂತರ ಅನೇಕ ಪೋಷಕರು ಬಂದು ತಮ್ಮ ಮಕ್ಕಳು ಈಗ ಮಿಲಿಟರಿ ಸೇರಲು ಬಯಸುತ್ತಿದ್ದಾರೆ ಎಂದು ಹೇಳಿದಾಗ ನನಗೆ ತುಂಬಾ ಸ್ಫೂರ್ತಿ ಸಿಕ್ಕಿತು. ಇದು ಕೇವಲ ಸಿನಿಮಾ ಮಾತ್ರವಲ್ಲದೆ ಜನರ ಮನಸ್ಸಿನಲ್ಲಿ ದೇಶಪ್ರೇಮವನ್ನು ಹೇಗೆ ಮೂಡಿಸಿದೆʼʼ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಮಲಯಾಳಂ ಚಿತ್ರರಂಗದೊಂದಿಗೆ ವಿಶೇಷ ನಂಟು

ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಸಾಯಿ ಪಲ್ಲವಿ, ಮಲಯಾಳಂ ಚಿತ್ರರಂಗ ಮತ್ತು ಕೇರಳದೊಂದಿಗಿನ ಒಡನಾಟವನ್ನು ಶ್ಲಾಘಿಸಿದರು. ʻʻನನ್ನ ಮೊದಲ ಸಿನಿಮಾ ಕೇರಳದಲ್ಲಿ ಆರಂಭವಾಗಿದ್ದಕ್ಕೆ ನಾನು ಚಿರಋಣಿ. 'ಮಲರೇ' ಹಾಡು ನನ್ನನ್ನು ಮನೆಮಾತಾಗಿಸಿತು. ಶೀಘ್ರದಲ್ಲೇ ಮತ್ತೊಂದು ಮಲಯಾಳಂ ಚಿತ್ರದಲ್ಲಿ ನಟಿಸುವ ಆಸೆ ಇದೆ," ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

ಗ್ಲಾಮರ್ ಪಾತ್ರಗಳಿಗಿಂತ ಕಥೆಯ ಹಿನ್ನೆಲೆಯುಳ್ಳ ಮತ್ತು ಅರ್ಥಪೂರ್ಣ ಪಾತ್ರಗಳಿಗೆ ಆದ್ಯತೆ ನೀಡುವ ಸಾಯಿ ಪಲ್ಲವಿ, ಇಂದು ದಕ್ಷಿಣ ಭಾರತದ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ನೈಸರ್ಗಿಕ ನಟನಾ ಶೈಲಿಯಿಂದಲೇ ಮನೆಮಾತಾಗಿರುವ ಅವರು, ಫಿಲ್ಮ್‌ಫೇರ್ ವೇದಿಕೆಯ ಮೇಲೆ ಈ ಗೆಲುವಿನ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ.

Read More
Next Story