ನಟಿ ಸಾಯಿಪಲ್ಲವಿ ವಿರುದ್ಧ ಬೈಕಾಟ್ ಅಭಿಯಾನ
"ಹಿಂದೂ ದ್ವೇಷಿ ಸಾಯಿ ಪಲ್ಲವಿಯು ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡಬಾರದು" ಎಂದು ಜಾಲತಾಣದಲ್ಲಿ ಅಭಿಯಾನ
ಸಹಜ ಅಭಿನಯ, ಸಹಜ ಸೌಂದರ್ಯದಿಂದ ಎಲ್ಲರಿಗೂ ಇಷ್ಟವಾಗುವ ನಟಿ ಸಾಯಿ ಪಲ್ಲವಿ. ಇದೀಗ ಬಾಲಿವುಡ್‌ನಲ್ಲಿ ಸಾಯಿ ಪಲ್ಲವಿ ವಿರುದ್ಧ ಒಂದಿಷ್ಟು ಜನರು ಬೈಕಾಟ್ ಚಳವಳಿ ಆರಂಭಿಸಿದ್ದಾರೆ. ನಿರ್ದೇಶಕ ನಿತೀಶ್ ತಿವಾರಿಯ ಮುಂಬರುವ ಸಿನಿಮಾ ʼರಾಮಾಯಣʼದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರ ನಿರ್ವಹಿಸಲಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಲಾರ್ಡ್ ರಾಮ ಮತ್ತು ಸೀತಾ ದೇವಿಯ ಚಿತ್ರಗಳು ಹೊಸ ವಿವಾದಕ್ಕೆ ನಾಂದಿ ಹಾಡಿವೆ.
2022ರಲ್ಲಿ ಸಾಯಿ ಪಲ್ಲವಿ ಕಾಶ್ಮಿರ್ ಪೈಲ್ ಸಿನಿಮಾದ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಹಿಂದೂ ದ್ವೇಷಿಯಾಗಿರುವ ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಬಾರದು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೈಕಾಟ್ ಸಾಯಿ ಪಲ್ಲವಿ ಅಭಿಯಾನ ಆರಂಭಿಸಿದ್ದಾರೆ.
ಸಾಯಿ ಪಲ್ಲವಿ ಹೇಳಿದ್ದೇನು?
ವಿರಾಟ ಪರ್ವಮ್ ಸಿನಿಮಾದ ಪ್ರಚಾರದ ಸಮಯದಲ್ಲಿ ಸಾಯಿ ಪಲ್ಲವಿ ಅವರು ಕಾಶ್ಮೀರ ಫೈಲ್ಸ್ , ಕಾಶ್ಮೀರ ಪಂಡಿತರ ವಲಸೆ ಮತ್ತು ಗೋವು ರಕ್ಷಣೆಯ ಕುರಿತು ತನ್ನ ಅಭಿಪ್ರಾಯವ್ಯಕ್ತಪಡಿಸಿದ್ದರು. ಈಗಲೂ ಹಸುಗಳನ್ನು ಸಾಗಿಸುವ ಮುಸ್ಲಿಂ ಚಾಲಕರನ್ನು ಜೈಶ್ರೀರಾಮ್ ಎಂದು ಹೇಳಿ ಥಳಿಸಲಾಗುತ್ತದೆ. ಇತ್ತೀಚೆಗೆ ಹೆಚ್ಚುತ್ತಿರುವ ಇಂತಹ ಘಟನೆಗಳಿಗೂ ಕಾಶ್ಮೀರ ಪಂಡಿತರಿಗೆ ಆಗುವ ತೊಂದರೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದರು.
ಸಾಯಿಪಲ್ಲವಿಗೆ ಸೀತೆಯಾಗುವ ಅರ್ಹತೆ ಇಲ್ಲ
ಅವರ ಆ ಅಭಿಪ್ರಾಯವು ಒಂದಿಷ್ಟು ಜನರ ಭಾವನೆಗಳಿಗೆ ಘಾಸಿ ಉಂಟುಮಾಡಿತ್ತು. ಅವರೆಲ್ಲರೂ ಈಗ "ಹಿಂದೂ ದ್ವೇಷಿ ಸಾಯಿ ಪಲ್ಲವಿಯು ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡಬಾರದು" ಎಂದು ಬೈಕಾಟ್ ಅಭಿಯಾನ ಮಾಡುತ್ತಿದ್ದಾರೆ. ಈಗಾಗಲೇ ಸಾಯಿ ಪಲ್ಲವಿ ತಮ್ಮ ನಿಲುವಿನ ಕುರಿತು ಸ್ಪಷ್ಟಪಡಿಸಿದ್ದಾರೆ.
ಸಾಯಿ ಪಲ್ಲವಿ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇದೀಗ ರಾಮಾಯಣದ ಮೂಲಕ ಬಾಲಿವುಡ್‌ನಲ್ಲಿ ನಟಿಸುತ್ತಿದ್ದಾರೆ. ನಾಲ್ಕು ಫಿಲ್ಮ್‌ಫೇರ್ ಸೌತ್ ಅವಾರ್ಡ್, ಎರಡು ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿರುವ ಇವರು ಫೋರ್ಬ್ಸ್ ನಿಯತಕಾಲಿಕೆಯ 30 ವರ್ಷದೊಳಗಿನ 30 ಬೆಸ್ಟ್ ನಟಿಯರ ಸ್ಥಾನ ಪಡೆದಿದ್ದಾರೆ. 2015ರಲ್ಲಿ ಪ್ರೇಮಮ್ ಸಿನಿಮಾದ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು.