
ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ
ಅಭಿಮಾನಿಗಳಿಗಾಗಿ 'ವಿಶೇಷ ಔತಣ': ಹೈದರಾಬಾದ್‌ನಲ್ಲಿ ಮನಗೆದ್ದ ರಶ್ಮಿಕಾ-ವಿಜಯ್ ಜೋಡಿ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಮಧ್ಯಾಹ್ನದ ಔತಣಕೂಟವನ್ನು ಏರ್ಪಡಿಸಿದ್ದರು.
ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಳೆದ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಈ ನವಜೋಡಿ ವಿವಾಹದ ನಂತರದ ಸಂಪ್ರದಾಯಗಳಲ್ಲಿ ಬ್ಯುಸಿಯಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಮಧ್ಯಾಹ್ನದ ಔತಣಕೂಟವನ್ನು ಏರ್ಪಡಿಸಿದ್ದರು. ಅಭಿಮಾನಿಗಳಿಗಾಗಿ ಮೀಟ್ ಅಂಡ್ ಗ್ರೀಟ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿಸಿದ್ದಾರೆ.
ಈ ಕಾರ್ಯಕ್ರಮದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋಗಳಲ್ಲಿ ಈ ನವಜೋಡಿ ಅಭಿಮಾನಿಗಳೊಂದಿಗೆ ಕುಳಿತು ಊಟ ಮಾಡುತ್ತಿರುವುದು ಮತ್ತು ಅತ್ಯಂತ ಸರಳವಾಗಿ ಅವರೊಡನೆ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ. ಕಾರ್ಯಕ್ರಮದಲ್ಲಿ ರಶ್ಮಿಕಾ ಪ್ರಿಂಟೆಡ್ ಸೀರೆಯಲ್ಲಿ ಮಿಂಚಿದರೆ,ನಟ ವಿಜಯ್ ನೀಲಿ ಬಣ್ಣದ ಫ್ಲೋರಲ್ ಪ್ರಿಂಟ್ ಕುರ್ತಾದಲ್ಲಿ ಕಂಗೊಳಿಸುತ್ತಿದ್ದರು.
ವಿಜಯ್ ಅವರ ತವರು ಗ್ರಾಮವಾದ ತೆಲಂಗಾಣದ ತುಂಬನಪೇಟೆಗೆ ಭೇಟಿ ನೀಡಿದ್ದ ದಂಪತಿ, ಅಲ್ಲಿನ ನೂತನ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ವ್ರತ ಹಾಗೂ ಗೃಹಪ್ರವೇಶದಂತಹ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಬಾರ್ಡರ್ ಇರುವ ತಿಳಿ ಹಳದಿ ಬಣ್ಣದ ಪ್ರಿಂಟೆಡ್ ಸೀರೆಯಲ್ಲಿ ಮಿಂಚುತ್ತಿದ್ದರು. ಕೊರಳಲ್ಲಿ ಕಂಗೊಳಿಸುತ್ತಿದ್ದ ಮಾಂಗಲ್ಯ ಸರ ಹಾಗೂ ಹಣೆಯ ಮೇಲಿನ ಸಿಂಧೂರ ಅವರ ನವವಧುವಿನ ಕಳೆಯನ್ನು ಇಮ್ಮಡಿಗೊಳಿಸಿತ್ತು. ವಿಜಯ್ ದೇವರಕೊಂಡ ಅವರು ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿ ಪತ್ನಿಗೆ ಸಾಥ್ ನೀಡಿದ್ದರು.
ಮದುವೆಯ ಸಂಭ್ರಮದ ಮುಂದುವರಿದ ಭಾಗವಾಗಿ, ಮಂಗಳವಾರವಷ್ಟೇ ಈ ಜೋಡಿ ತಮ್ಮ ಸಂಗೀತ ಸಮಾರಂಭದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ. 'ಡಿಯರ್ ಕಾಮ್ರೇಡ್' ಜೋಡಿಯ ವಿವಾಹದ ನಂತರದ ಈ ಅದ್ದೂರಿ ಔತಣಕೂಟವು ಅಭಿಮಾನಿಗಳಲ್ಲಿ ಖುಷಿ ತಂದಿದೆ.
ಮದುವೆಗೂ ಮುನ್ನ ತಮ್ಮ ಸಂಬಂಧದ ಬಗ್ಗೆ ಗುಟ್ಟು ಕಾಯ್ದುಕೊಂಡಿದ್ದ ಈ ಜೋಡಿ, ವಿವಾಹದ ನಂತರ ಸಾರ್ವಜನಿಕವಾಗಿ ಅತ್ಯಂತ ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ಅಲ್ಲಿ ನೆರೆದಿದ್ದ ಭಕ್ತರು ಹಾಗೂ ಮಾಧ್ಯಮದವರಿಗೆ ಸಿಹಿ ಹಂಚಿದ್ದರು.
ಇಂದು ಹೈದರಾಬಾದ್‌ನಲ್ಲಿ ಈ ತಾರಾ ಜೋಡಿಯ ಅದ್ಧೂರಿ ವಿವಾಹದ ಔತಣಕೂಟ ನಡೆಯಲಿದೆ. ಅಭಿಮಾನಿಗಳ ಭಾರೀ ಸಡಗರ ಹಾಗೂ ಸುರಕ್ಷತಾ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಕೇವಲ ಆಯ್ದ ಗಣ್ಯರಿಗೆ ಮತ್ತು ಆಪ್ತರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪೊಲೀಸ್ ಇಲಾಖೆಯ ಸಲಹೆಯಂತೆ ಬಿಗಿ ಭದ್ರತೆಯ ನಡುವೆ ಈ ಕಾರ್ಯಕ್ರಮ ನಡೆಯಲಿದ್ದು, ಕೇವಲ ಆಮಂತ್ರಣ ಪತ್ರಿಕೆ ಇರುವವರಿಗೆ ಮಾತ್ರ ಪ್ರವೇಶವಿರಲಿದೆ ಎಂದು ತಿಳಿದುಬಂದಿದೆ. ಈ ಸಮಾರಂಭಕ್ಕೆ ತೆಲುಗು ಹಾಗೂ ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಮಾರಂಗದ ಹಲವು ಪ್ರಮುಖ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ.

