
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅದ್ಧೂರಿ ವಿವಾಹ ಸಂಭ್ರಮದ ಸುಂದರ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಶ್ಮಿಕಾ-ವಿಜಯ್ 'ಸಂಗೀತ' ಸಂಭ್ರಮ: ಬೆಳ್ಳಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ ಕೊಡಗಿನ ಬೆಡಗಿ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಈಗ ಈ ನವಜೋಡಿ ತಮ್ಮ ಮಿನುಗುವ 'ಸಂಗೀತ' ಸಂಭ್ರಮದ ಎಕ್ಸ್‌ಕ್ಲೂಸಿವ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅದ್ಧೂರಿ ವಿವಾಹ ಸಂಭ್ರಮದ ಸುಂದರ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಫೆಬ್ರವರಿ 26 ರಂದು ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ಈ ಜೋಡಿ ಹಸೆಮಣೆ ಏರಿದ್ದು, ತಮ್ಮ ಸಂಗೀತ ಸಂಜೆಯ ಸುಂದರ ಕ್ಷಣಗಳನ್ನು ದಂಪತಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಫೆಬ್ರವರಿ 24 ರಂದು ನಡೆದ ಈ ಅದ್ಧೂರಿ ಸಂಗೀತ ಸಮಾರಂಭದಲ್ಲಿ ರಶ್ಮಿಕಾ ಮತ್ತು ವಿಜಯ್ ಖ್ಯಾತ ವಿನ್ಯಾಸಕರಾದ ಫಾಲ್ಗುಣಿ ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಬೆಳ್ಳಿ ಬಣ್ಣದ ಲೆಹೆಂಗಾ ಹಾಗೂ ಆಭರಣಗಳನ್ನು ಧರಿಸಿ ಮಿಂಚಿದ್ದಾರೆ. ಈ ವಿಶೇಷ ರಾತ್ರಿಯ ಸಂಭ್ರಮದಲ್ಲಿ ವಿಜಯ್ ಪೋಷಕರು, ಸಹೋದರ ಆನಂದ್ ಹಾಗೂ ರಶ್ಮಿಕಾ ಪೋಷಕರು ಮತ್ತು ತಂಗಿ ಶಿಮನ್ ಮಂದಣ್ಣ ಸೇರಿದಂತೆ ಉಭಯ ಕುಟುಂಬದವರು ಭಾಗಿಯಾಗಿದ್ದರು.
ತಮ್ಮ ವಿವಾಹದ ಸಂಭ್ರಮದ ಬಗ್ಗೆ ಮನಬಿಚ್ಚಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ಈ ರಾತ್ರಿ ಪ್ರೀತಿ, ಆನಂದಬಾಷ್ಪ, ನಗು ಮತ್ತು ಸಂಗೀತದಿಂದ ತುಂಬಿತ್ತು ಎಂದು ಬಣ್ಣಿಸಿದ್ದಾರೆ. ನಾವಿಬ್ಬರು ಒಬ್ಬರಿಗೊಬ್ಬರು ಸರ್‌ಪ್ರೈಸ್ ನೀಡಲು ಬಯಸಿದ್ದೆವು, ಆದರೆ ನಮ್ಮ ಕುಟುಂಬದವರ ನೃತ್ಯ ನಮಗೆ ಅತಿದೊಡ್ಡ ಸರ್‌ಪ್ರೈಸ್ ನೀಡಿತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ ಸಹ ಮಾತನಾಡಿ, ಕಾಲು ನೋವಾಗುವವರೆಗೆ ನೃತ್ಯ ಮಾಡಿದ್ದೇವೆ ಮತ್ತು ಭಾವನಾತ್ಮಕ ಭಾಷಣಗಳಿಂದ ಕಣ್ಣೀರು ಬರುವಷ್ಟು ಈ ಸಂಭ್ರಮ ನಮ್ಮನ್ನು ಆವರಿಸಿತ್ತು ಎಂದು ಹೇಳಿಕೊಂಡಿದ್ದಾರೆ.
ಫೆಬ್ರವರಿ 26 ರಂದು ಬೆಳಿಗ್ಗೆ ವಿಜಯ್ ಅವರ ಸಂಪ್ರದಾಯದಂತೆ ತೆಲುಗು ಶೈಲಿಯಲ್ಲಿ ಮತ್ತು ಸಂಜೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ನೆರವೇರಿದವು. ವಿವಾಹಕ್ಕೂ ಮುನ್ನ ಜಪಾನೀಸ್ ಔತಣಕೂಟ, ಪೂಲ್ ವಾಲಿಬಾಲ್ ಮತ್ತು ʻವಿರೋಶ್ ಪ್ರೀಮಿಯರ್ ಲೀಗ್ʼ ಎಂಬ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಅತಿಥಿಗಳಿಗೆ ರಂಜನೆ ನೀಡಲಾಗಿತ್ತು. ಈ ಸಂಭ್ರಮಕ್ಕೆ ಸಂದೀಪ್ ರೆಡ್ಡಿ ವಂಗಾ, ತರುಣ್ ಭಾಸ್ಕರ್, ರಾಹುಲ್ ರವೀಂದ್ರನ್ ಸೇರಿದಂತೆ ದಕ್ಷಿಣ ಭಾರತದ ಹಲವು ತಾರೆಯರು ಸಾಕ್ಷಿಯಾಗಿದ್ದರು.
ಇನ್ನು ಬುಧವಾರ (ಮಾರ್ಚ್ 4) ನಡೆಯಲಿರುವ ಇವರ ಮದುವೆಯ ಆರತಕ್ಷತೆ ಕಾರ್ಯಕ್ರಮವು ಭದ್ರತಾ ಕಾರಣಗಳಿಂದಾಗಿ ಕೇವಲ ಆಹ್ವಾನಿತರಿಗಷ್ಟೇ ಸೀಮಿತವಾಗಿರಲಿದೆ ಎಂದು ದಂಪತಿಗಳ ತಂಡ ಅಧಿಕೃತವಾಗಿ ತಿಳಿಸಿದೆ. ಈ ಅದ್ಧೂರಿ ಸಮಾರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಾಗಿದ್ದು, ಚಿತ್ರರಂಗದ ಗಣ್ಯರು ಮತ್ತು ರಾಜಕೀಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಅಭಿಮಾನಿಗಳ ಸುರಕ್ಷತೆ ಮತ್ತು ಸಂತೋಷ ನಮಗೆ ಮುಖ್ಯ, ಆದ್ದರಿಂದ ಸಹಕರಿಸಿ ಎಂದು ನವಜೋಡಿ ವಿನಂತಿಸಿಕೊಂಡಿದ್ದಾರೆ.

