
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಅಲ್ಲು ಸಿರೀಶ್ 'ಪೆಳ್ಳಿ ಕೊಡುಕು' ಶಾಸ್ತ್ರದಲ್ಲಿ ನವದಂಪತಿ ರಶ್ಮಿಕಾ-ವಿಜಯ್ ದೇವರಕೊಂಡ
ಹೈದರಾಬಾದ್‌ನಲ್ಲಿ ನಡೆದ ಅಲ್ಲು ಸಿರೀಶ್ ಅವರ ಅರಿಶಿನ ಶಾಸ್ತ್ರ (ಪೆಳ್ಳಿ ಕೊಡುಕು) ಸಂಭ್ರಮದಲ್ಲಿ ನವದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಭಾಗವಹಿಸಿ ಮಿಂಚಿದ್ದಾರೆ. ಮದುವೆಗೂ ಮುನ್ನ ದೇಶಾದ್ಯಂತ ಸಿಹಿ ಹಂಚಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತ್ತು.
ಅಲ್ಲು ಕುಟುಂಬದ ನಿವಾಸದಲ್ಲಿ ನಡೆದ ಈ ಸಮಾರಂಭದಲ್ಲಿ ಸಾಂಪ್ರದಾಯಿಕ 'ಪೆಳ್ಳಿ ಕೊಡುಕು' (ವರಪೂಜೆ/ಅರಿಶಿನ ಶಾಸ್ತ್ರ) ವಿಧಿವಿಧಾನಗಳು ಜರುಗಿದವು. ಪವಿತ್ರ ಮಂಗಳ ಸ್ನಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಅಲ್ಲು ಸಿರೀಶ್ ಅವರಿಗೆ ಅರಿಶಿನ ಮತ್ತು ಶ್ರೀಗಂಧದ ಲೇಪನ ಮಾಡಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಿಸಲಾಯಿತು. ಇದು ವರನ ಶುದ್ಧೀಕರಣ ಮತ್ತು ಗೃಹಸ್ಥಾಶ್ರಮಕ್ಕೆ ಕಾಲಿಡುವ ಸಂಕೇತವಾಗಿದೆ.
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತ್ತು.
ಈ ಅದ್ಧೂರಿ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಜೊತೆಗೆ ಮೆಗಾಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಕೂಡ ಭಾಗವಹಿಸಿದ್ದರು. ರಶ್ಮಿಕಾ ಅವರು ಹಸಿರು ಬಣ್ಣದ ರೇಷ್ಮೆ ಬ್ಲೌಸ್ ಹಾಗೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚಿದರೆ, ವಿಜಯ್ ದೇವರಕೊಂಡ ಅವರು ಬಿಳಿ ಕುರ್ತಾ ಮತ್ತು ಕೆಂಪು ಶಾಲು ಧರಿಸಿ ಆಕರ್ಷಕವಾಗಿ ಕಾಣಿಸಿಕೊಂಡರು. ಅಲ್ಲು ಸಿರೀಶ್ ಅವರು ನಯನಿಕಾ ರೆಡ್ಡಿ ಅವರೊಂದಿಗೆ ಮಾರ್ಚ್ 6 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ದೇಶಾದ್ಯಂತ ಸಿಹಿ ಹಂಚಿದ ನವದಂಪತಿ
ಭಾನುವಾರ ಮುಂಜಾನೆ ರಶ್ಮಿಕಾ ಮತ್ತು ವಿಜಯ್ ಹೈದರಾಬಾದ್‌ನ ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದಂಪತಿಯ ತಂಡವು ಭಾರತದ 23 ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಸಿಹಿ ಹಂಚಿಕೆ ಮಾಡಿದೆ. ಸಾರ್ವಜನಿಕರಿಗೆ ಸಾವಿರಾರು ಸಿಹಿ ಬಾಕ್ಸ್‌ಗಳನ್ನು ವಿತರಿಸಲಾಗಿದ್ದು, ಹಲವು ದೇವಸ್ಥಾನಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಹೈದರಾಬಾದ್, ಬೆಂಗಳೂರು, ಮೈಸೂರು, ಕೊಡಗು ಸೇರಿದಂತೆ ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ಚಂಡೀಗಢದ ವಿವಿಧೆಡೆ ಸಿಹಿ ವಿತರಣೆ ಮಾಡಲಾಗಿದೆ.
ಭಾನುವಾರ ರಶ್ಮಿಕಾ ಮಂದಣ್ಣ ಅವರು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ತಮ್ಮ ವಿವಾಹ ಆರತಕ್ಷತೆಗೆ ಆತ್ಮೀಯವಾಗಿ ಆಹ್ವಾನಿಸಿದರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ರಶ್ಮಿಕಾ, ರೇವಂತ್ ರೆಡ್ಡಿ ಅವರಿಗೆ ಆಮಂತ್ರಣ ಪತ್ರ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪತ್ನಿ ಗೀತಾ ರೆಡ್ಡಿ ಮತ್ತು ಅವರ ಪುತ್ರಿಯೊಂದಿಗೆ ರಶ್ಮಿಕಾ ಸಮಯ ಕಳೆದರು. ಗೀತಾ ರೆಡ್ಡಿ ಅವರು ನವವಧುವಿಗೆ ಹಾರೈಸಿ ಆಶೀರ್ವಾದ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಗೀತಾ ರೆಡ್ಡಿ ಅವರು ನವವಧುವಿಗೆ ಹಾರೈಸಿ ಆಶೀರ್ವಾದ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಉದಯಪುರದಲ್ಲಿ ಖಾಸಗಿ ವಿವಾಹ
ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿತ್ತು. ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ನಡೆದ ಈ ವಿವಾಹ ಮಹೋತ್ಸವಕ್ಕೆ ಕೇವಲ ಆಯ್ದ ಗಣ್ಯರು ಮತ್ತು ಕುಟುಂಬದವರಿಗೆ ಮಾತ್ರ ಆಹ್ವಾನವಿತ್ತು. ಮದುವೆಯ ನಂತರ ದಂಪತಿಗಳು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಿಸೆಪ್ಷನ್‌ಗೆ ಆಹ್ವಾನಿಸಿದ್ದರು. ಪ್ರಧಾನಿ ಅವರೊಂದಿಗಿನ ಭೇಟಿಯ ಬಗ್ಗೆ ಹಂಚಿಕೊಂಡಿದ್ದ ರಶ್ಮಿಕಾ, "ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಪ್ರಧಾನಿಗಳೊಂದಿಗೆ ಮಾತನಾಡಿದ್ದು ಮರೆಯಲಾಗದ ಕ್ಷಣ" ಎಂದು ಬರೆದುಕೊಂಡಿದ್ದರು.
ತೆರೆಯ ಮೇಲೆ ಮತ್ತೆ ಒಂದಾಗಲಿರುವ 'ರಾಮಬಾಲಿ' ಜೋಡಿ
ಮದುವೆಯ ನಂತರ ಈ ದಂಪತಿಗಳು ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇದು ಐತಿಹಾಸಿಕ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ನಿರ್ದೇಶಕ ರಾಹುಲ್ ಇತ್ತೀಚೆಗೆ ಹಂಚಿಕೊಂಡ ಪೋಸ್ಟರ್ ವೈರಲ್ ಆಗಿದೆ. "ರಣಬಾಲಿ ಚಿತ್ರದ ಮದುವೆಯ ಪೋಸ್ಟರ್ ಕೇವಲ ಒಂದು ಫೋಟೋ ಅಲ್ಲ, ಅದು ಒಂದು ಭಾವನೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಮದುಮಕ್ಕಳ ಉಡುಪಿನಲ್ಲಿ ಬಂದಾಗ, ಅವರು ನಟರಂತೆ ಕಾಣಲಿಲ್ಲ, ಬದಲಾಗಿ ಹಿಂದಿನ ಕಾಲದ ದಂಪತಿಗಳಂತೆ ಭಾಸವಾಯಿತು," ಎಂದು ನಿರ್ದೇಶಕರು ತಮ್ಮ ಅನುಭವ ಹಂಚಿಕೊಂಡಿದ್ದರು.

