
ರಶ್ಮಿಕಾ ಮಂದಣ್ಣ
ಕೊನೆಗೂ ಕನ್ನಡ ಅಭಿಮಾನಿಗಳ ಯೋಗಕ್ಷೇಮ ವಿಚಾರಿಸಿದ ರಶ್ಮಿಕಾ ಮಂದಣ್ಣ
ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ರಶ್ಮಿಕಾ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ಭಾಗವಾಗಿ 'ರಶಅವರ್' ಎಂಬ ಹೆಸರಿನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ಮಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಇದೇ ಶುಕ್ರವಾರದಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ರೊಮ್ಯಾಂಟಿಕ್ ಚಿತ್ರದಲ್ಲಿ ಕನ್ನಡಿಗ ದೀಕ್ಷಿತ್ ಶೆಟ್ಟಿ ಅವರು ನಾಯಕ ನಟರಾಗಿ ಕಾಣಿಸಿಕೊಂಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಭಾರೀ ಕುತೂಹಲ ಮೂಡಿಸಿದೆ.
'ಸಿಕಂದರ್' ಹೊರತುಪಡಿಸಿ, ರಶ್ಮಿಕಾ ಅವರ ಇತ್ತೀಚಿನ ಚಿತ್ರಗಳಾದ 'ಥಾಮಾ' ಯಶಸ್ವಿ ಪ್ರದರ್ಶನವನ್ನು ಮುಂದುವರಿಸಿದೆ. ಇದರ ನಡುವೆಯೇ ಅವರು 'ದಿ ಗರ್ಲ್‌ಫ್ರೆಂಡ್' ಮೂಲಕ ಪ್ರೇಕ್ಷಕರನ್ನು ತಲುಪಲು ಸಿದ್ಧರಾಗಿದ್ದಾರೆ. ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ರಶ್ಮಿಕಾ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ಭಾಗವಾಗಿ 'ರಶಅವರ್' ಎಂಬ ಹೆಸರಿನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ಮಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಅಭಿಮಾನಿಯೊಬ್ಬರು ಕನ್ನಡಿಗರಿಗಾಗಿ ಏನಾದರೂ ಹೇಳಿ ಎನ್ನುವ ಸಂದರ್ಭದಲ್ಲಿ ರಶ್ಮಿಕಾ "ಹಾಯ್ ನೀವೆಲ್ಲರೂ ಚೆನ್ನಾಗಿದ್ದೀರಾ? ನಾನು ನಿಮ್ಮ ಬಗ್ಗೆ ತುಂಬಾನೇ ಯೋಚನೆ ಮಾಡುತ್ತಾ ಇರುತ್ತೇನೆ. ನೀವು ಯಾವಾಗಲೂ ನನ್ನ ಮನಸ್ಸಿನಲ್ಲಿ ಇರುತ್ತೀರಿ. ಯೋಚನೆಯಲ್ಲಿ ಇರುತ್ತೀರಿ. ನೀವು ಯಾವಾಗಲೂ ಖುಷಿಯಾಗಿ ಆರೋಗ್ಯವಾಗಿರಬೇಕು. ಬಹಳ ಎಚ್ಚರವಾಗಿರಿ. ವೈರಲ್ ಫೀವರ್ ಬರ್ತಿದೆ. ಟ್ರಾಫಿಕ್‌ನಲ್ಲಿ ರೋಡ್‌ಗಳಲ್ಲಿ ಎಚ್ಚರದಿಂದಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತೊಬ್ಬ ಅಭಿಮಾನಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ರಶ್ಮಿಕಾ 'ಇಲ್ಲ' ಎಂದು ತಲೆ ಆಡಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ಪೊಗರು' ಚಿತ್ರದ ನಂತರ ಅವರು ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಿಲ್ಲ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ.
ರಾಹುಲ್ ರವಿಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಚಿತ್ರವು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಚಿತ್ರದಲ್ಲಿ ಅನು ಇಮಾನ್ಯುಯೆಲ್ ,ರಾವು ರಮೇಶ್ , ರೋಹಿಣಿ ಪ್ರಮುಖ ತಾರಾಗಣದಲ್ಲಿದ್ದಾರೆ. ಹೇಶಮ್ ಅಬ್ದುಲ್ ವಹಾಮ್ ಸಂಗೀತ, ಕೃಷ್ಣನ್ ವಸಂತ್ ಛಾಯಾಗ್ರಹಣ ಮತ್ತು ಚೋಟಾ ಕೆ ಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ.
ಬಾಲಿವುಡ್‌ನಲ್ಲಿಯೂ ಯಶಸ್ಸು ಗಳಿಸಿರುವ ರಶ್ಮಿಕಾ, ಅಮಿತಾಬ್ ಬಚ್ಚನ್, ವಿಕ್ಕಿ ಕೌಶಲ್, ರಣ್‌ಬೀರ್ ಕಪೂರ್ ಅವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಯಶಸ್ಸು ಕಂಡಿದ್ದಾರೆ. 'ದಿ ಗರ್ಲ್‌ಫ್ರೆಂಡ್' ಬಳಿಕ ಅವರು ಮತ್ತೊಂದು ಬಾಲಿವುಡ್‌ನ 'ಕಾಕ್‌ಟೇಲ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ 'ಮೈಸಾ' ಎಂಬ ಮಹಿಳಾ ಪ್ರಧಾನ ಚಿತ್ರಕ್ಕೂ ಅವರು ಸಹಿ ಮಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಹಿಂದೆ ನೀಡಿದ ಕೆಲವು ಹೇಳಿಕೆಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದವು, ಇದರಿಂದಾಗಿ ಕೆಲವರು ಅವರನ್ನು ವಿರೋಧಿಸಲು ಪ್ರಾರಂಭಿಸಿದ್ದರು. ಈ ಹಿಂದೆ, ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ವೈಯಕ್ತಿಕ ಜೀವನದ ವಿಚಾರಕ್ಕೆ ಬಂದರೆ, ತೆಲುಗು ನಟ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚೆಗೆ ಅವರೊಂದಿಗೆ ನಿಶ್ಚಿತಾರ್ಥ ಕೂಡ ನಡೆದಿದೆ ಎನ್ನಲಾಗುತ್ತಿದೆ.

