
ನಟಿ ರಶ್ಮಿಕಾ ಮಂದಣ್ಣ
ಅತಿಯಾದ ಕೆಲಸ ಸುಸ್ಥಿರವಲ್ಲ; '8 ಗಂಟೆ ಶಿಫ್ಟ್' ವಿವಾದ: ದೀಪಿಕಾ ಬೆನ್ನಲ್ಲೇ ಧ್ವನಿ ಎತ್ತಿದ ರಶ್ಮಿಕಾ
ಕೆಲವು ಸಮಯದ ಹಿಂದೆ 8 ಗಂಟೆಗಳ ಪೂರ್ಣ ನಿದ್ರೆ ಪಡೆದು ತಿಂಗಳುಗಳೇ ಕಳೆದಿವೆ ಎಂದು ಹೇಳಿದ್ದ ರಶ್ಮಿಕಾ ಮಂದಣ್ಣ, ಸಂದರ್ಶನವೊಂದರಲ್ಲಿ ಕೆಲಸ-ಜೀವನ ಸಮತೋಲನದ ಬಗ್ಗೆ ಮಾತನಾಡಿದ್ದರು. ನಾವು ಅತಿಯಾಗಿ ಕೆಲಸ ಮಾಡುವುದು ಒಳ್ಳೆಯದು ಎಂಬ ಅಂಶವನ್ನು ವೈಭವೀಕರಿಸುತ್ತಿದ್ದೇವೆ.
ಪ್ರಭಾಸ್ ಜೊತೆಗಿನ 'ಸ್ಪಿರಿಟ್' ಚಿತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಅವರು ದಿನಕ್ಕೆ 8 ಗಂಟೆಗಳ ಶಿಫ್ಟ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ 'ಕೆಲಸದ ಸಮಯ'ದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಇದರ ಬೆನ್ನಲ್ಲೇ, 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರು ಸಹ ನಟರ ಕೆಲಸ-ಜೀವನ ಸಮತೋಲನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದು, “ಅತಿಯಾಗಿ ಕೆಲಸ ಮಾಡುವುದು ಸುಸ್ಥಿರವಲ್ಲ, ನಮಗೂ ಕುಟುಂಬವಿದೆ,” ಎಂದು ಹೇಳಿದ್ದಾರೆ.
ಕೆಲಸದ ಸಮಯ'ದ ಬಗ್ಗೆ ರಶ್ಮಿಕಾ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ, "ನಾವು ಅತಿಯಾಗಿ ಕೆಲಸ ಮಾಡುವುದನ್ನು ವೈಭವೀಕರಿಸುತ್ತಿದ್ದೇವೆ, ಆದರೆ ಅದು ಆರೋಗ್ಯಕರವಲ್ಲ. ಆರಾಮದಾಯಕ ಮತ್ತು ಸುಸ್ಥಿರ ಕೆಲಸದ ವಾತಾವರಣ ಮುಖ್ಯ. ದಿನಕ್ಕೆ 8-10 ಗಂಟೆಗಳ ನಿದ್ದೆ ಅತ್ಯಗತ್ಯ. ಅದು ನಿಮ್ಮನ್ನು ನಂತರದ ವಯಸ್ಸಿನಲ್ಲಿ ಕಾಪಾಡುತ್ತದೆ," ಎಂದು ಹೇಳಿದ್ದಾರೆ.
ಇತ್ತೀಚೆಗೆ 'ದಿ ಗರ್ಲ್‌ಫ್ರೆಂಡ್' ಚಿತ್ರದ ನಿರ್ಮಾಪಕರು, “ರಶ್ಮಿಕಾ ಕೆಲಸದ ಸಮಯದ ಬಗ್ಗೆ ಎಂದಿಗೂ ನಿರ್ಬಂಧ ವಿಧಿಸಿಲ್ಲ” ಎಂದು ಶ್ಲಾಘಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, “ಚಿತ್ರತಂಡ ಕಷ್ಟದಲ್ಲಿದ್ದಾಗ, ಸಮಯದ ಅಭಾವವಿದ್ದಾಗ ನಾನು ಹೊಂದಿಕೊಂಡು ಹೋಗುತ್ತೇನೆ. ಅದು ನನ್ನ ತಂಡದ ಮೇಲಿರುವ ಪ್ರೀತಿ ಮತ್ತು ಗೌರವ. ಆದರೆ, ಆಯ್ಕೆಯ ಅವಕಾಶವಿದ್ದರೆ, ನಿಗದಿತ ಕಚೇರಿ ಸಮಯದಂತೆ (9 ರಿಂದ 5) ನಮಗೂ ಕೆಲಸದ ಸಮಯ ನಿಗದಿಪಡಿಸಿ ಎಂದು ಕೇಳಿಕೊಳ್ಳುತ್ತೇನೆ," ಎಂದು ಸ್ಪಷ್ಟಪಡಿಸಿದ್ದಾರೆ.
"ನಮಗೂ ಕುಟುಂಬವಿದೆ, ನಮಗೂ ಆರೋಗ್ಯ ಮುಖ್ಯ"
“ನಟರು ಮಾತ್ರವಲ್ಲ, ನಿರ್ದೇಶಕರು, ಲೈಟ್‌ಮನ್‌ಗಳಿಂದ ಹಿಡಿದು ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತದೆ. ನನಗೂ ಕುಟುಂಬವಿದೆ, ನನಗೂ ವ್ಯಾಯಾಮ ಮಾಡಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು, ನನ್ನ ಭವಿಷ್ಯದ ಬಗ್ಗೆ ನಾನೂ ಯೋಚಿಸಬೇಕು. ಚಿಕ್ಕ ವಯಸ್ಸಿನಿಂದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದಕ್ಕೆ ನಂತರ ವಿಷಾದಿಸಲು ನಾನು ಇಷ್ಟಪಡುವುದಿಲ್ಲ,” ಎಂದು ರಶ್ಮಿಕಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ದೀಪಿಕಾ ಮತ್ತು ರಶ್ಮಿಕಾ ಅವರ ಈ ಹೇಳಿಕೆಗಳು, ಚಿತ್ರರಂಗದಲ್ಲಿನ ಅನಿಯಮಿತ ಕೆಲಸದ ಸಮಯ ಮತ್ತು ಕಲಾವಿದರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

