
ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಡೇಟ್ ಫಿಕ್ಸ್? ಮದ್ವೆ ನಡೆಯೋದು ಎಲ್ಲಿ?
ರಶ್ಮಿಕಾ-ವಿಜಯ್ ದೇವರಕೊಂಡ 2026ರ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ಸಜ್ಜಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕೇಳಿಬರುತ್ತಿದ್ದ ಮದುವೆಯ ವದಂತಿಗಳಿಗೆ ಈಗ ರೆಕ್ಕೆಪುಕ್ಕ ಬಂದಿದ್ದು, ಈ ಜೋಡಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, 2026ರ ಫೆಬ್ರವರಿ 26 ರಂದು ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಉದಯ್‌ಪುರದ ಅರಮನೆಯಲ್ಲಿ ಮದುವೆ ಸಂಭ್ರಮ
ರಾಜಸ್ಥಾನದ ಉದಯ್‌ಪುರದ ಐತಿಹಾಸಿಕ ಅರಮನೆಯೊಂದರಲ್ಲಿ ಇವರ ವಿವಾಹ ಮಹೋತ್ಸವ ಜರುಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಒಂದು ಪಾರಂಪರಿಕ ಹೋಟೆಲ್ ಅನ್ನು ಮದುವೆಗಾಗಿ ಅಂತಿಮಗೊಳಿಸಲಾಗಿದ್ದು, ಫೆಬ್ರವರಿ ತಿಂಗಳಲ್ಲಿ ಮದುವೆ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇವರ ನಿಶ್ಚಿತಾರ್ಥದಂತೆಯೇ ಮದುವೆಯೂ ಕೂಡ ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ನಡೆಯಲಿದ್ದು, ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ಅದ್ಧೂರಿ ಔತಣಕೂಟ ಏರ್ಪಡಿಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ರಹಸ್ಯವಾಗಿ ನಡೆದ ನಿಶ್ಚಿತಾರ್ಥ
ರಶ್ಮಿಕಾ ಮತ್ತು ವಿಜಯ್ ಕಳೆದ ಅಕ್ಟೋಬರ್ 3 ರಂದು ಅಂದರೆ ದಸರಾ ಹಬ್ಬದ ಮರುದಿನವೇ ಹೈದರಾಬಾದ್‌ನಲ್ಲಿ ರಹಸ್ಯವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಸಮಾರಂಭವನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿದ್ದು, ಯಾವುದೇ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಎರಡೂ ಕುಟುಂಬದ ಕಡೆಯಿಂದಲೂ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಅಭಿಮಾನಿಗಳು ಮಾತ್ರ ಈ ಜೋಡಿಯನ್ನು ಒಟ್ಟಾಗಿ ನೋಡಲು ಕಾತರರಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಮದುವೆಯ ಸುದ್ದಿಯ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಶ್ಮಿಕಾ, "ನಾನು ಮದುವೆಯ ಬಗ್ಗೆ ಈಗಲೇ ಏನನ್ನೂ ದೃಢಪಡಿಸುವುದಿಲ್ಲ ಅಥವಾ ನಿರಾಕರಿಸುವುದೂ ಇಲ್ಲ. ಸಮಯ ಬಂದಾಗ ನಾವೇ ಈ ಬಗ್ಗೆ ಮಾತನಾಡುತ್ತೇವೆ," ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು. ಅಲ್ಲದೆ, ತಮ್ಮ ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ವಿಜಯ್ ಅವರನ್ನು 'ವಿಜು' ಎಂದು ಕರೆಯುತ್ತಾ, "ಪ್ರತಿಯೊಬ್ಬರ ಜೀವನದಲ್ಲೂ ವಿಜಯ್ ದೇವರಕೊಂಡ ಅಂತಹ ವ್ಯಕ್ತಿ ಇರಬೇಕು, ಅದು ಒಂದು ವರ," ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದರು.
ಟಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ತೆರೆ ಹಂಚಿಕೊಂಡಾಗಲೆಲ್ಲಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಸೃಷ್ಟಿಯಾಗಿದೆ. ಈ ಜೋಡಿಯು ಮೊದಲ ಬಾರಿಗೆ 2018ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ 'ಗೀತಾ ಗೋವಿಂದಂ' ಮೂಲಕ ಪ್ರೇಕ್ಷಕರ ಮನ ಗೆದ್ದಿತ್ತು. ಅದಾದ ನಂತರ 2019ರಲ್ಲಿ ಬಂದ ಭಾವನಾತ್ಮಕ ಪ್ರೇಮಕಥೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ಈ ಜೋಡಿಯ ಕೆಮಿಸ್ಟ್ರಿ ಅದ್ದೂರಿಯಾಗಿ ಮೂಡಿಬಂದಿತ್ತು. ಈ ಎರಡು ಚಿತ್ರಗಳು ವಿಜಯ್ ಮತ್ತು ರಶ್ಮಿಕಾ ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟವು.
ಇನ್ನು ವಿಜಯ್ ದೇವರಕೊಂಡ ಅವರು ಇತ್ತೀಚೆಗಷ್ಟೇ ತೆರೆಕಂಡ ಕ್ರೈಂ ಥ್ರಿಲ್ಲರ್ ಚಿತ್ರ 'ಕಿಂಗ್‌ಡಮ್' ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ಅವರೊಂದಿಗೆ ವಿಜಯ್ ನಟಿಸಿದ್ದಾರೆ. ಪ್ರಸ್ತುತ ಅವರು 'ರೌಡಿ ಜನಾರ್ದನ' ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ 2026ರ ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ 'ದ ಗರ್ಲ್ ಫ್ರೆಂಡ್' ಎಂಬ ರೊಮ್ಯಾಂಟಿಕ್ ಡ್ರಾಮಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ದೀಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಅವರಿಗೆ ನಾಯಕನಾಗಿ ಸಾಥ್ ನೀಡಿದ್ದಾರೆ. ಸದ್ಯ ರಶ್ಮಿಕಾ ಅವರು ಆ್ಯಕ್ಷನ್ ಒಳಗೊಂಡಿರುವ 'ಮೈಸ' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಅವರು ಎಂದೂ ನೋಡಿರದಂತಹ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

