ನ್ಯಾಷನಲ್ ಕ್ರಷ್ ರಶ್ಮಿಕಾ ಈಗ ಮೈಸಾ: ಕಾಡಿನ ಮಗಳ ರಗಡ್ ಅವತಾರಕ್ಕೆ ಫ್ಯಾನ್ಸ್ ಫಿದಾ
x

ರಗಡ್‌ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ 

ನ್ಯಾಷನಲ್ ಕ್ರಷ್ ರಶ್ಮಿಕಾ ಈಗ 'ಮೈಸಾ': ಕಾಡಿನ ಮಗಳ ರಗಡ್ ಅವತಾರಕ್ಕೆ ಫ್ಯಾನ್ಸ್ ಫಿದಾ

'ಮೈಸಾ' ಚಿತ್ರದ ಚಿತ್ರೀಕರಣವು ತೆಲಂಗಾಣ ಹಾಗೂ ಕೇರಳದ ದಟ್ಟ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದೆ. ಕಾಡಿನ ಹಿನ್ನೆಲೆಯಲ್ಲಿ ಬರುವ ದೃಶ್ಯಗಳು ಮತ್ತು ಬುಡಕಟ್ಟು ಜನರ ಹೋರಾಟದ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.


Click the Play button to hear this message in audio format

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಮೈಸಾ' ಚಿತ್ರದ ಟೀಸರ್ ಬುಧವಾರ ಬಿಡುಗಡೆಯಾಗಿದ್ದು, ಈ ಮೂಲಕ ರಶ್ಮಿಕಾ ಅವರು ಹಿಂದೆಂದೂ ಕಾಣದ ಭೀಕರ ಮತ್ತು ಉಗ್ರ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಕಾಡ್ಗಿಚ್ಚಿನ ದೃಶ್ಯಗಳು ಮತ್ತು ಮೈ ನವಿರೇಳಿಸುವ ಹಿನ್ನೆಲೆ ಸಂಗೀತದೊಂದಿಗೆ ಪ್ರಾರಂಭವಾಗುವ ಈ ಟೀಸರ್, ರಶ್ಮಿಕಾ ಅವರನ್ನು 'ಮೈಸಾ' ಎಂಬ ಶಕ್ತಿಯುತ ಪಾತ್ರವಾಗಿ ಪರಿಚಯಿಸುತ್ತದೆ. ಕಾಡಿನ ಬುಡಕಟ್ಟು ಜನಾಂಗದ ಕಥಾಹಂದರ ಹೊಂದಿರುವ ಈ ಚಿತ್ರವು ಎಮೋಷನಲ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ಟೀಸರ್‌ನ ಪ್ರತಿ ದೃಶ್ಯವೂ ನೋಡುಗರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಮೈಸಾ ಚಿತ್ರ ಟೀಸರ್‌ ಇಲ್ಲಿದೆ

ಈಗಾಗಲೇ 'ಪುಷ್ಪ', 'ಅನಿಮಲ್', 'ಚಾವಾ', 'ಕುಬೇರ' ಮತ್ತು 'ಥಮ' ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ, ಈ ಚಿತ್ರದಲ್ಲಿ ಅತ್ಯಂತ ಶಕ್ತಿಶಾಲಿಯಾಗಿ ಕಾಣಿಸಿಕೊಂಡಿದ್ದಾರೆ.

ರವೀಂದ್ರ ಪುಲ್ಲೇ ನಿರ್ದೇಶನದ ಈ ಚಿತ್ರವನ್ನು ಅನ್ ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿದ್ದು, ಬುಡಕಟ್ಟು ಭೂಮಿಯ ಹಿನ್ನೆಲೆಯಲ್ಲಿ ನಡೆಯುವ ಹೋರಾಟದ ಕಥೆಯನ್ನು ಇದು ಒಳಗೊಂಡಿದೆ. ರಶ್ಮಿಕಾ ಅವರ ತೀವ್ರವಾದ ನೋಟ ಮತ್ತು ಆಕ್ರೋಶದ ಅಭಿನಯಕ್ಕೆ ಚಿತ್ರವಿಮರ್ಶಕರು ಹಾಗೂ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ರಶ್ಮಿಕಾ ಮಂದಣ್ಣ, ಇಂದು ಭಾರತದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕನ್ನಡದ ನಂತರ ತೆಲುಗಿನಲ್ಲಿ 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ನಂತಹ ಹಿಟ್ ಚಿತ್ರಗಳ ಮೂಲಕ ಮನೆಮಾತಾದ ಅವರು, ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕೇವಲ ನಟನೆಯಲ್ಲಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿನ ಸಕ್ರಿಯತೆ ಮತ್ತು ಫಿಟ್‌ನೆಸ್ ಕಾಳಜಿಯಿಂದಾಗಿ ಯುವಜನತೆಯ ಐಕಾನ್ ಆಗಿ ಬೆಳೆದಿರುವ ರಶ್ಮಿಕಾ, ಈ 'ಮೈಸಾ' ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆಯಲ್ಲಿದ್ದಾರೆ.

Read More
Next Story