
ಪಿಆರ್ ಸಂಸ್ಕೃತಿ ಬಗ್ಗೆ ನಟಿ ಶೋಭಿತಾ ಮಾತನಾಡಿದ್ದಾರೆ.
4 ಗಂಟೆಯೂ ಸುದ್ದಿಯಲ್ಲಿರಲು ಇಷ್ಟವಿಲ್ಲ; ಪಿಆರ್ ಸಂಸ್ಕೃತಿ ಬಗ್ಗೆ ನಟಿ ಶೋಭಿತಾ ಏನಂದ್ರು?
ನನ್ನ ಜೀವನ ಅಥವಾ ವೃತ್ತಿಜೀವನಕ್ಕೆ ಅತಿಯಾದ ಪ್ರಚಾರದ ಅಗತ್ಯವಿಲ್ಲ ಎಂದು ನಾನು ನಿರ್ಧರಿಸಿದ್ದೇನೆ. ಪ್ರತಿಯೊಬ್ಬರಿಗೂ ಅವರದೇ ಆದ ಆದ್ಯತೆಗಳಿರುತ್ತವೆ ಇದೆ ನಟಿ ಶೋಭಿತಾ ತಿಳಿಸಿದ್ದಾರೆ.
ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಾಜೆಕ್ಟ್‌ಗಳಲ್ಲಿ ಗುರುತಿಸಿಕೊಂಡಿರುವ ನಟಿ ಶೋಭಿತಾ ಧೂಳಿಪಾಲ, ಸುದೀರ್ಘ ಬಿಡುವಿನ ನಂತರ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳಿದ್ದಾರೆ. 2018ರಲ್ಲಿ ತೆರೆಕಂಡ 'ಗೂಢಾಚಾರಿ' ನಂತರ ಅವರು ನೇರವಾಗಿ ನಟಿಸಿದ ಪಕ್ಕಾ ತೆಲುಗು ಸಿನಿಮಾ 'ಚೀಕಟಿಲೋ'. ಈ ನಡುವೆ 2022ರಲ್ಲಿ 'ಮೇಜರ್' ಎನ್ನುವ ದ್ವಿಭಾಷಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ, 'ಚೀಕಟಿಲೋ' ಅವರಿಗೆ ಜನಪ್ರಿಯತೆ ತಂದುಕೊಟ್ಟಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಶೋಭಿತಾ ಧೂಳಿಪಾಲ, "ನಾನು ತೆಲುಗು ಸಿನಿಮಾಗಳನ್ನು ಕೇವಲ ಒಬ್ಬ ನಟಿಯಾಗಿ ಮಾತ್ರವಲ್ಲದೆ, ಪ್ರೇಕ್ಷಕಿಯಾಗಿಯೂ ತುಂಬಾ ಇಷ್ಟಪಡುತ್ತೇನೆ. ಈ ಚಿತ್ರದಲ್ಲಿ ನಾನು ಪಾಡ್‌ಕಾಸ್ಟರ್ ಪಾತ್ರ ಮಾಡಿದ್ದೇನೆ. ಇಲ್ಲಿ ಬಳಸಲಾದ ಸಂಭಾಷಣೆಗಳು ಮತ್ತು ಶಬ್ದಕೋಶ ತುಂಬಾ ಹೊಸದಾಗಿತ್ತು. ತೆಲುಗು ನನ್ನ ತಾಯ್ನುಡಿಯಾದ ಕಾರಣ ಆ ಕಠಿಣ ಪದಗಳನ್ನು ಬಳಸಲು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ತುಂಬಾ ಸುಲಭವಾಯಿತು. ನನ್ನ ಮಣ್ಣಿನ ಕಥೆಗೆ ಮರಳಿರುವುದು ನನಗೆ ತುಂಬಾ ಸಂತಸ ತಂದಿದೆ" ಎಂದು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಪಿಆರ್ ಸಂಸ್ಕೃತಿ ಬಗ್ಗೆ ಶೋಭಿತಾ ಮನದಾಳದ ಮಾತು
ಇಂದಿನ ಚಿತ್ರರಂಗದಲ್ಲಿ ಸಿನಿಮಾ ಪ್ರಚಾರಕ್ಕಿಂತ ಹೆಚ್ಚಾಗಿ ಕಲಾವಿದರ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಲು ಪಿಆರ್ ಸಂಸ್ಥೆಗಳ ಬಳಕೆ ಹೆಚ್ಚಾಗಿದೆ. ಅತಿಯಾದ ಪ್ರಚಾರದ ಬಗ್ಗೆ ನಟಿ ಶೋಭಿತಾ ಮಾತನಾಡುತ್ತಾ, "ನಾನು ಯಾವಾಗಲೂ ಪ್ರಚಾರದ ಅಬ್ಬರದಲ್ಲಿ ಇರಲು ಬಯಸುವುದಿಲ್ಲ. ದಿನದ 24 ಗಂಟೆಯೂ ಸುದ್ದಿಯಲ್ಲಿರಬೇಕು ಅಥವಾ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಲೇ ಇರಬೇಕು ಎಂಬ ಆಸೆ ನನಗಿಲ್ಲ. ನನ್ನ ವ್ಯಕ್ತಿತ್ವಕ್ಕೆ ಅತಿಯಾದ ಪಿಆರ್ ಸಂಸ್ಕೃತಿ ಒಗ್ಗುವುದಿಲ್ಲ" ಎಂದು ಅವರು ನೇರವಾಗಿ ಹೇಳಿದ್ದಾರೆ.
"ನನ್ನ ಜೀವನ ಅಥವಾ ವೃತ್ತಿಜೀವನಕ್ಕೆ ಅತಿಯಾದ ಪ್ರಚಾರದ ಅಗತ್ಯವಿಲ್ಲ ಎಂದು ನಾನು ನಿರ್ಧರಿಸಿದ್ದೇನೆ. ಪ್ರತಿಯೊಬ್ಬರಿಗೂ ಅವರದೇ ಆದ ಆದ್ಯತೆಗಳಿರುತ್ತವೆ, ನನಗೆ ನನ್ನ ಆಯ್ಕೆಗಳ ಬಗ್ಗೆ ಸ್ಪಷ್ಟತೆ ಇದೆ" ಎನ್ನುವ ಮೂಲಕ ಅಬ್ಬರದ ಪ್ರಚಾರಕ್ಕಿಂತ ಕಲೆಗೆ ಹೆಚ್ಚು ಒತ್ತು ನೀಡುವುದಾಗಿ ಅವರು ತಿಳಿಸಿದ್ದಾರೆ.
ಶೋಭಿತಾ ಅಭಿನಯದ 'ಚೀಕಟಿಲೋ' ಸಿನಿಮಾ ಈಗಾಗಲೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

