
ತಮ್ಮ ಹಳೆಯ ಸಂದರ್ಶನದ ಸಣ್ಣ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ತಮ್ಮ ಮಾತಿನ ಅಸಲಿ ಅರ್ಥವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ನೋರಾ ಹೇಳಿದ್ದಾರೆ.
Nora Fatehi| ಸರ್ಸೆ ಸೆರಗ ಸರ್ಸೆ ಹಾಡಿನ ಬೆನ್ನಲ್ಲೇ ನೋರಾ ಫತೇಹಿ ಮತ್ತೊಂದು ವಿವಾದ! ನಟಿ ಹೇಳಿದ್ದೇನು?
ತಾವು ಸ್ತ್ರೀವಾದದ ವಿರೋಧಿಯಲ್ಲ, ಬದಲಿಗೆ ಯಾವುದೇ ವಿಷಯದಲ್ಲಿ 'ಅತಿರೇಕದ ನಿಲುವು' ಇರುವುದನ್ನು ವಿರೋಧಿಸುವುದಾಗಿ ನೋರಾ ಫತೇಹಿ ಸ್ಪಷ್ಟಪಡಿಸಿದ್ದಾರೆ.
ನೋರಾ ಫತೇಹಿ ಇತ್ತೀಚೆಗೆ ತಮ್ಮ ಸ್ತ್ರೀವಾದದ ಕುರಿತಾದ ಹೇಳಿಕೆಗಳಿಂದ ಭುಗಿಲೆದ್ದಿದ್ದ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಲಿಲಿ ಸಿಂಗ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ತಮ್ಮ ಹಳೆಯ ಹೇಳಿಕೆಗಳನ್ನು ಸಂದರ್ಭಕ್ಕೆ ಹೊರತಾಗಿ ಅರ್ಥೈಸಲಾಗಿದೆ ಮತ್ತು ಅವುಗಳನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಾವು ಯಾವುದೇ ವಿಷಯದಲ್ಲಿ ಅತಿರೇಕದ ನಿಲುವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನೋರಾ, ತಾವು ಒಬ್ಬಂಟಿ ಪೋಷಕರಿಂದ ಬೆಳೆದ ಕಾರಣ ಕುಟುಂಬದ ಪ್ರಾಮುಖ್ಯತೆ ತಮಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ. ಮಗುವಿನ ದೃಷ್ಟಿಕೋನದಿಂದ ನೋಡಿದಾಗ ತಾಯಿ ಮತ್ತು ತಂದೆ ಇಬ್ಬರ ಉಪಸ್ಥಿತಿಯೂ ಅವಶ್ಯಕವಾಗಿದೆ. ಪ್ರೀತಿ, ಭದ್ರತೆ ಮತ್ತು ಶಿಸ್ತು ಇರುವ ಸುಭದ್ರ ಕುಟುಂಬ ವ್ಯವಸ್ಥೆಯನ್ನು ತಾನು ಬೆಂಬಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನೋರಾ ವಿವಾದಾತ್ಮಕ ಹೇಳಿಕೆ ಏನು?
ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕು ಮತ್ತು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂಬುದು ಸರಿಯಾದರೂ, ಪುರುಷರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಮಹಿಳೆಯರು ಬಲಶಾಲಿಗಳಾಗಿದ್ದರೂ ಪರಸ್ಪರ ಅವಲಂಬನೆ ಮತ್ತು ಸಮತೋಲನ ಇರಬೇಕು. ಈ ಹಿಂದೆ ರಣವೀರ್ ಅಲಹಾಬಾದಿಯಾ ಅವರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ತ್ರೀವಾದ ಸಮಾಜವನ್ನು ಹಾಳುಮಾಡಿದೆ ಎಂದು ಹೇಳಿದ್ದ ನೋರಾ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು.
ಮತ್ತೊಂದೆಡೆ ನೋರಾ ಫತೇಹಿ ಅಭಿನಯದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ: ದ ಡೆವಿಲ್' ಚಿತ್ರದ 'ಸರಿಕೆ ಚುನ್ನರಿ' ಹಾಡು ಕೂಡ ವಿವಾದಕ್ಕೆ ಸಿಲುಕಿದೆ. ಸಂಜಯ್ ದತ್ ಮತ್ತು ನೋರಾ ಕಾಣಿಸಿಕೊಂಡಿದ್ದ ಈ ಹಾಡಿನ ಸಾಹಿತ್ಯ ಮತ್ತು ನೃತ್ಯ ಸಂಯೋಜನೆ ಅಸಭ್ಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ನೋರಾ ಅವರಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಈ ಬೆಳವಣಿಗೆಯು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಈ ಹಾಡಿನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಮತ್ತು ನೋರಾ ಫತೇಹಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅಭಿನಯದ ಈ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನವಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಆದರೆ, ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಅತಿರೇಕವಾಗಿವೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಮಹಿಳಾ ಆಯೋಗದ ಮಧ್ಯಪ್ರವೇಶದ ನಂತರ ಸದ್ಯ ಈ ಹಾಡಿನ ಅಧಿಕೃತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲಾಗಿದೆ.

