
'ಕೊರಗಜ್ಜ
ʼಕೊರಗಜ್ಜʼ ಸಿನಿಮಾದ ಹಾಡುಗಳ ರೀಲ್ಸ್ ಕಾಂಟೆಸ್ಟ್ ಗೆ ಕೋಟಿ ರೂ. ಬಹುಮಾನ
ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಸಿನಿಮಾದ ಹಾಡುಗಳನ್ನು ಬೆಂಗಳೂರಿನ ಹೊಟೆಲ್ ಹಾಲಿಡೇ ಇನ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಕರಾವಳಿಯ ಭೂತಾರಾಧನೆಯ ಹಿನ್ನೆಲೆಯ ಕಥಾಹಂದರ ಹೊಂದಿರುವ ಸುಧೀರ್ ಅತ್ತಾವರ್ ನಿರ್ದೇಶನದ ಬಹುನಿರೀಕ್ಷಿತ 'ಕೊರಗಜ್ಜ' ಸಿನಿಮಾ ಹೊಸ ವರ್ಷದ ಮೊದಲ ದಿನವೇ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ.
ಬೆಂಗಳೂರಿನ ಹೊಟೆಲ್ ಹಾಲಿಡೇ ಇನ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಚಿತ್ರದ ಹಾಡುಗಳನ್ನು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಯಿತು. ಬಿಗ್ ಎಫ್‌ಎಂ 92.7 ಹಾಗೂ ಸುಮಾರು 300ಕ್ಕೂ ಹೆಚ್ಚು ಆಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಏಕಕಾಲಕ್ಕೆ ಹಾಡುಗಳನ್ನು ಹರಿಬಿಡುವ ಮೂಲಕ ಚಿತ್ರತಂಡ 'ಸಾಂಗ್ಸ್ ಪ್ರೀಮಿಯರ್' ಎನ್ನುವ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ.
ವೇದಿಕೆಯಲ್ಲಿ ಮಿಂಚಿದ ತಾರೆಯರು
ಈ ಸಂಭ್ರಮದ ಕ್ಷಣಕ್ಕೆ ದೇಶದ ಮೊದಲ ಪಾಪ್ ತಾರೆ ಶರೋನ್ ಪ್ರಭಾಕರ್, ಹಿರಿಯ ನಟಿ ಭವ್ಯ, ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಚಿತ್ರದ ಅಫಿಷಿಯಲ್ ರೇಡಿಯೋ ಪಾರ್ಟ್‌ನರ್ ಆಗಿರುವ ಬಿಗ್ ಎಫ್‌ಎಂ ತಂಡದ ದಕ್ಷಿಣ ಭಾರತದ ಮುಖ್ಯಸ್ಥ ವಿಶ್ವಾಸ್ ಅವರ ನೇತೃತ್ವದಲ್ಲಿ ಆರ್ ಜೆ ವಿಕ್ಕಿ, ಆರ್ ಜೆ ದುಶ್ಯಂತ್ ಹಾಗೂ ಆರ್ ಜೆ ಪ್ರದೀಪ್ ತಂಡವು ಕೊರಗಜ್ಜ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮದ ಕಳೆಯನ್ನು ಇಮ್ಮಡಿಗೊಳಿಸಿದರು.
ಮಂತ್ರಮುಗ್ಧಗೊಳಿಸಿದ 'ಗಾಳಿ ಗಂಧ':
ಹೊಸ ವರ್ಷದ ಕೌಂಟ್ ಡೌನ್ ಮುಗಿಯುತ್ತಿದ್ದಂತೆಯೇ ಎಲ್ ಇ ಡಿ ಪರದೆಯ ಮೇಲೆ ಮೂಡಿಬಂದ "ಗಾಳಿ ಗಂಧ..." ಹಾಡು ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತು. ಶ್ರೇಯಾ ಘೋಷಾಲ್ ಮತ್ತು ಅರ್ಮಾನ್ ಮಲಿಕ್ ಅವರ ಮಧುರ ಧ್ವನಿಯಲ್ಲಿ ಮೂಡಿಬಂದ ಈ ಹಾಡಿಗೆ ಗೋಪಿ ಸುಂದರ್ ಸಂಗೀತವಿದ್ದು, ಸುಧೀರ್ ಅತ್ತಾವರ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಎಐ (AI) ತಂತ್ರಜ್ಞಾನದ ಸ್ಪರ್ಶದೊಂದಿಗೆ ಮೂಡಿಬಂದಿರುವ ಈ ಹಾಡಿನ ವಿಶುವಲ್ಸ್ ವರ್ಲ್ಡ್ ಕ್ಲಾಸ್ ಮಟ್ಟದಲ್ಲಿದ್ದು, ಶರೋನ್ ಪ್ರಭಾಕರ್ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಯಕ್ಷಗಾನದ ರಂಗೇರಿಸಿದ ಚಿತ್ರನಟಿ ಭವ್ಯ
ಇನ್ನು ಸಮಾರಂಭದಲ್ಲಿ ಹಿರಿಯ ನಟಿ ಭವ್ಯ ಅವರು ಯಕ್ಷಗಾನದ 'ಮಹಿಷಾಸುರ' ಪ್ರಸಂಗದ ಮಹಿಷನ ತಾಯಿ ಮಾಲಿನಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಮಂಗಳೂರಿನ ಜಯದೇವ್ ಮತ್ತು ತಂಡದವರು ನಡೆಸಿಕೊಟ್ಟ ಯಕ್ಷಗಾನದ ತುಣುಕು ಪ್ರೇಕ್ಷಕರಿಗೆ ತುಳುನಾಡಿನ ಸಂಸ್ಕೃತಿಯ ಅನಾವರಣ ಮಾಡಿತು. ಗಾಯಕರಾದ ರಮೇಶ್ಚಂದ್ರ ಮತ್ತು ಪ್ರತಿಮಾ ಭಟ್ ಅವರ ಹಾಡುಗಳು ಸಮಾರಂಭಕ್ಕೆ ಸಂಗೀತದ ಮೆರಗು ನೀಡಿದವು.
ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ವಿನೂತನ ಹಾದಿ ಹಿಡಿದಿದ್ದು, 'ಕೊರಗಜ್ಜ' ಚಿತ್ರದ ಹಾಡುಗಳಿಗೆ ರೀಲ್ಸ್ ಮಾಡುವವರಿಗಾಗಿ ಬರೋಬ್ಬರಿ 1 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಬಹುಮಾನವನ್ನು ಘೋಷಿಸಿದೆ. ಇದು ಸೋಶಿಯಲ್ ಮೀಡಿಯಾ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.
ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಕಾರ್ಯಕ್ರಮವನ್ನು ನಿರ್ದೇಶಕ ಸುಧೀರ್ ಅತ್ತಾವರ್ ಮತ್ತು ಆರ್ ಜೆ ಪ್ರದೀಪ್ ನಡೆಸಿಕೊಟ್ಟರು. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ವಿದ್ಯಾಧರ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ಪತ್ರಕರ್ತರು ಕೂಡ ಸ್ಪಾಟ್ ಬಹುಮಾನಗಳನ್ನು ಗೆದ್ದು ಸಂಭ್ರಮಿಸಿದರು.

