
ಗುಳಿಗ... ಘೋರ ಗುಳಿಗಾ ಆಕ್ಷನ್ ಮಿಶ್ರಿತ ರ್‍ಯಾಪ್ ಹಾಡು ಬಿಡುಗಡೆ.
ಘೋರ ಗುಳಿಗನ ಆರ್ಭಟಕ್ಕೆ ಜೀ ಮ್ಯೂಸಿಕ್ ಸಾಥ್: 'ಕೊರಗಜ್ಜ' ಚಿತ್ರದ ಹಾಡು ಬಿಡುಗಡೆ!
ಸಂಗೀತದ ಜವಾಬ್ದಾರಿಯನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ಹೊತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ಗಾಯಕ ಜಾವೇದ್ ಆಲಿ ಅವರು ಈ ಹಾಡಿಗೆ ಧ್ವನಿ ನೀಡಿರುವುದು ಮತ್ತೊಂದು ವಿಶೇಷ.
ಕರಾವಳಿಯ ದೈವಾರಾಧನೆಯ ಕಥಾನಕವನ್ನೇ ಮೈಗೂಡಿಸಿಕೊಂಡಿರುವ ಬಹುನಿರೀಕ್ಷಿತ 'ಕೊರಗಜ್ಜ' ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಈ ಕುತೂಹಲಕ್ಕೆ ಮತ್ತಷ್ಟು ಕಿಚ್ಚು ಹೊತ್ತಿಸಲು, ಚಿತ್ರದ ಹೈಲೈಟ್ ಎಂದೇ ಹೇಳಲಾಗುತ್ತಿರುವ ರಕ್ತದಾಹಿ ದೈವ 'ಗುಳಿಗ'ನ ಕುರಿತಾದ ವಿಶೇಷ ಹಾಡು ಇಂದು ಜೀ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಎಲ್ಲೆಡೆ ಭೋರ್ಗರೆಯುತ್ತಿದೆ.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ, ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಸಾಹಿತ್ಯ ಬರೆದು ಧ್ವನಿಯಾಗಿದ್ದಾರೆ. ವಿಶೇಷವೆಂದರೆ, ಬಾಲಿವುಡ್ ನ ಹಿರಿಯ ಗಾಯಕ ಜಾವೇದ್ ಆಲಿ ಅವರು ಈ ಗೀತೆಗೆ ಕಂಠದಾನ ಮಾಡಿದ್ದು, ಇದು ಕೇಳುಗರಿಗೆ ಹೊಸ ಅನುಭವ ನೀಡಲಿದೆ. "ಗುಳಿಗ.. ಗುಳಿಗ.. ಘೋರ ಗುಳಿಗಾ..!" ಎಂದು ಸಾಗುವ ಈ ಹಾಡು ರ್‍ಯಾಪ್ ಮಿಶ್ರಿತ ಶೈಲಿಯಲ್ಲಿದ್ದು, ಕೇಳುಗರ ಎದೆಬಡಿತ ಹೆಚ್ಚಿಸುವುದಂತೂ ಖಚಿತ.
ಪೌರಾಣಿಕ ಹಿನ್ನೆಲೆ ಮತ್ತು ರೋಚಕತೆ
ನೆಲವುಲ್ಲ ಸಂಕೆಯ 24ನೇ ಮಗನಾಗಿ ಜನಿಸಿದ ಗುಳಿಗನ ಕಥೆಯೇ ರೋಚಕ. ಜನಪದ ಕಥೆಗಳ ಪ್ರಕಾರ, ಹುಟ್ಟಿದ ಕೂಡಲೇ ಉಗ್ರ ಹಸಿವಿನಿಂದ ಸಾವಿರ ಕೋಳಿ ಮತ್ತು ಸಾವಿರ ಕುದುರೆಗಳ ರಕ್ತವನ್ನು ಹೀರಿದರೂ ಅವನ ಹಸಿವು ನೀಗಲಿಲ್ಲವಂತೆ! ಕೊನೆಗೆ ಶ್ರೀಮನ್ನಾರಾಯಣನ ಕಿರುಬೆರಳಿನ ರಕ್ತವನ್ನೇ ಹೀರುವ ಮೂಲಕ ಆತ ಶಾಂತನಾದ ಎಂಬ ಪ್ರತೀತಿಯಿದೆ. ಇಂತಹ ರೌದ್ರಾವತಾರವನ್ನು ಈ ಹಾಡಿನ ಮೂಲಕ ಕಣ್ಣಮುಂದೆ ತರುವ ಪ್ರಯತ್ನ ಮಾಡಲಾಗಿದೆ.
ಬಾಲಿವುಡ್ ಕೊರಿಯೋಗ್ರಾಫರ್ ಸಾಥ್
ಈ ಹಾಡಿನ ದೃಶ್ಯ ವೈಭವವಂತೂ ಅತ್ಯದ್ಭುತವಾಗಿ ಮೂಡಿಬಂದಿದೆ. ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನೃತ್ಯ ಸಂಯೋಜಕ ಸಂದೀಪ್ ಸೋಪರ್ಕರ್, ಗುಳಿಗನ ರಣಭಯಂಕರ ನರ್ತನವನ್ನು ತಾವೇ ಸಂಯೋಜಿಸಿ, ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ. ಚಿತ್ರದಲ್ಲಿ ಗುಳಿಗ ದೈವವು ಮತ್ತೊಂದು ಶಕ್ತಿಶಾಲಿ ದೈವವಾದ ಪಂಜುರ್ಲಿ ಜೊತೆಗೂಡಿ ಕೊರಗಜ್ಜನನ್ನು ಭೇಟಿಯಾಗುವ ಸನ್ನಿವೇಶ ಮೈ ಝುಮ್ಮೆನಿಸುವಂತಿದೆ. ಪಂಜುರ್ಲಿ ಪಾತ್ರದಲ್ಲಿ ಸರ್ದಾರ್ ಸತ್ಯ ಜೀವ ತುಂಬಿದ್ದಾರೆ.
ರೌಡಿಗಳ ಅಟ್ಟಹಾಸ
ಈ ಹಾಡಿನ ಚಿತ್ರೀಕರಣದ ಹಿಂದೆಯೂ ಒಂದು ಸಾಹಸಗಾಥೆಯಿದೆ. ಮಂಗಳೂರಿನ ಸೋಮೇಶ್ವರ ಕಡಲ ಕಿನಾರೆಯಲ್ಲಿ 100 ಅಡಿ ಎತ್ತರದ ಕ್ರೇನ್ ಗಳನ್ನು ಬಳಸಿ ಶೂಟಿಂಗ್ ನಡೆಸುತ್ತಿದ್ದಾಗ, ರೌಡಿಗಳ ಗುಂಪೊಂದು ದಾಳಿ ನಡೆಸಿತ್ತು. ಎರಡು ದಿನಗಳ ಕಾಲ ಚಿತ್ರತಂಡಕ್ಕೆ ಬೆದರಿಕೆ ಹಾಕಿ, ಅಪಾರ ನಷ್ಟ ಉಂಟುಮಾಡಿತ್ತು. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು 25 ಬೌನ್ಸರ್ ಗಳನ್ನು ನೇಮಿಸಿದರೂ, ರೌಡಿಗಳ ಬೆದರಿಕೆಗೆ ಹೆದರಿ ಬೌನ್ಸರ್ ಗಳೇ ಓಡಿಹೋದ ಪ್ರಸಂಗವೂ ನಡೆದಿತ್ತು! ಆದರೆ ಎದೆಗುಂದದ ನಿರ್ಮಾಪಕರು, ಅಂತಿಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೂರನೇ ಬಾರಿ ಅದೇ ಸ್ಥಳದಲ್ಲಿ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ, ಕರಾವಳಿಯ ದೈವ ಭಕ್ತರ ಪಾಲಿಗೆ ದೃಶ್ಯಕಾವ್ಯವಾಗಲಿದೆ ಎಂಬ ನಿರೀಕ್ಷೆಯಿದೆ.

