
ಅಭಿಮಾನಿಗಳ ಜೊತೆ 'ಮಾರ್ಕ್' ವೀಕ್ಷಿಸಲಿರುವ ಸುದೀಪ್; ಯಾವಾಗ ಗೊತ್ತಾ?
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ತಮ್ಮ ಇತ್ತೀಚಿನ ಚಿತ್ರ 'ಮಾರ್ಕ್' ಯಶಸ್ಸಿನ ಹಿನ್ನೆಲೆಯಲ್ಲಿ, ಹೊಸ ವರ್ಷದ ಹಿಂದಿನ ದಿನ ಅಂದರೆ ನಾಳೆ ಅಭಿಮಾನಿಗಳೊಂದಿಗೆ ಸಂಭ್ರಮಾಚರಿಸಲು ನಿರ್ಧರಿಸಿದ್ದಾರೆ.
ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಬಾರಿ ತಮ್ಮ ಅಭಿಮಾನಿಗಳೊಂದಿಗೆ ಹೊಸ ವರ್ಷದ ಮುನ್ನಾದಿನವನ್ನು ಅತ್ಯಂತ ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಕಳೆದ ವಾರ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಬಿಡುಗಡೆಯಾಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ತಮ್ಮ ಇತ್ತೀಚಿನ ಆಕ್ಷನ್ ಡ್ರಾಮಾ 'ಮಾರ್ಕ್' ಚಿತ್ರವನ್ನು ಅಭಿಮಾನಿಗಳ ಜೊತೆ ಕುಳಿತು ವೀಕ್ಷಿಸಲು ನಟ ನಿರ್ಧರಿಸಿದ್ದಾರೆ. ಇದಕ್ಕಾಗಿ ಬೆಂಗಳೂರು ಮತ್ತು ಮೈಸೂರಿನ ಆಯ್ದ ಚಿತ್ರಮಂದಿರಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಗಾಂಧಿನಗರದ ಐತಿಹಾಸಿಕ 'ಸಂತೋಷ್' ಚಿತ್ರಮಂದಿರದಲ್ಲಿ ಸುದೀಪ್ ಅವರು ಅಭಿಮಾನಿಗಳ ಗುಂಪಿನೊಂದಿಗೆ ಚಿತ್ರ ವೀಕ್ಷಿಸಲಿದ್ದು, ಮೈಸೂರಿನ 'ಸಂಗಮ್' ಚಿತ್ರಮಂದಿರದಲ್ಲೂ ಇಂತಹದ್ದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುದೀಪ್ ಅವರ ಫ್ಯಾನ್ ಬೇಸ್ ಹಾಗೂ ಸಿನಿಮಾ ಬಗ್ಗೆ ಇರುವ ಕುತೂಹಲದಿಂದಾಗಿ ಈ ಪ್ರದರ್ಶನಗಳಿಗೆ ದಾಖಲೆ ಮಟ್ಟದ ಜನಸಂದಣಿ ಸೇರುವ ನಿರೀಕ್ಷೆಯಿದೆ.
ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಚಿತ್ರದ ನಿರ್ಮಾಣ ತಂಡವು ಪೊಲೀಸ್ ರಕ್ಷಣೆಯನ್ನು ಕೋರಿದೆ. ಅಲ್ಲದೆ, ಸ್ಥಳದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಾಸಗಿ ಬೌನ್ಸರ್‌ಗಳನ್ನು ಸಹ ನಿಯೋಜಿಸಲಾಗುತ್ತಿದೆ ಎಂದು ಚಿತ್ರದ ಮಾರ್ಕೆಟಿಂಗ್ ವಕ್ತಾರರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಪ್ರದರ್ಶನದ ನಿಖರ ಸಮಯ ಇನ್ನೂ ಅಂತಿಮಗೊಂಡಿಲ್ಲವಾದರೂ, ಬೆಳಿಗ್ಗೆ ಅಥವಾ ಮಧ್ಯಾಹ್ನದ ಶೋಗಳಲ್ಲಿ ನಟ ಭಾಗಿಯಾಗುವ ಸಾಧ್ಯತೆ ದಟ್ಟವಾಗಿದೆ.
ಸಿನಿಮಾದ ಕಥೆ ಏನು?
ಕ್ರಿಸ್‌ಮಸ್ ದಿನದಂದು ತೆರೆಕಂಡಿದ್ದ 'ಮಾರ್ಕ್' ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಇದೀಗ ಸ್ವತಃ ಕಿಚ್ಚನೇ ಚಿತ್ರಮಂದಿರಕ್ಕೆ ಬರುತ್ತಿರುವುದು ಅಭಿಮಾನಿಗಳಲ್ಲಿ ಹೊಸ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
‘ಮಾರ್ಕ್’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ಚಿತ್ರವು ‘ಮಾಕ್ಸ್’ನ ಮುಂದುವರೆದ ಭಾಗದಂತಿದೆ ಎಂದು ಹಲವರು ಹೇಳಿದ್ದರು ‘ಮಾರ್ಕ್’, ‘ಮ್ಯಾಕ್ಸ್’ ಚಿತ್ರದ ಮುಂದುವರೆದ ಭಾಗ ಎನ್ನುವುದುಕ್ಕಿಂತ ಅದೇ ಶೈಲಿಯ ಇನ್ನೊಂದು ಸಿನಿಮಾ ಎನ್ನಬಹುದು. ಅಲ್ಲಿ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಎಂಬ ಸಸ್ಪೆಂಡೆಡ್ ಪೊಲೀಸ್ ಅಧಿಕಾರಿಯ ಸಾಸಹಗಳನ್ನು ತೋರಿಸಲಾಗಿತ್ತು. ಇಲ್ಲಿ ಅಜಯ್ ಮಾರ್ಕಂಡೇಯ ಅಲಿಯಾಸ್ ಮಾರ್ಕ್ ಎಂಬ ಇನ್ನೊಬ್ಬ ಸಸ್ಪೆಂಡೆಡ್ ಪೊಲೀಸ್ ಅಧಿಕಾರಿಯ ಕುರಿತ ಚಿತ್ರವಾಗಿದೆ.
ಇಲ್ಲಿ ಒಂದು ಕಥೆ ಎನ್ನುವುದಕ್ಕಿಂತ ಮೂರು ಬೇರೆ ಟ್ರ್ಯಾಕ್‍ಗಳಿವೆ. ಮೊದಲನೆಯದರಲ್ಲಿ ಪೊಲೀಸರು ಎರಡು ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುತ್ತಾರೆ. ಎರಡನೆಯದರಲ್ಲಿ 18 ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿರುತ್ತಾರೆ. ಮೂರನೆಯದರಲ್ಲಿ ಮುಖ್ಯಮಂತ್ರಿಯನ್ನು ಅವರ ಮಗನೇ ಕೊಂದು, ಮುಂದಿನ ಮುಖ್ಯಮಂತ್ರಿಯಾಗುವುದಕ್ಕೆ ಮುಂದಾಗಿರುತ್ತಾನೆ. ಈ ಮೂರೂ ಪ್ರಕರಣಗಳು ಬೇರೆಬೇರೆಯಾದರೂ, ಒಂದಕ್ಕೊಂದು ಬೆಸೆದುಕೊಂಡಿರುತ್ತದೆ. ಮಾರ್ಕ್ ಅಮಾನಿತನಲ್ಲಿರುವುದರಿಂದ ಯಾವುದನ್ನೂ ತನಿಖೆ ಮಾಡುವ ಹಾಗಿಲ್ಲ. 18 ಮಕ್ಕಳ ಪೈಕಿ ಒಂದು ಮಗು, ಮಾರ್ಕ್ಗೆ ಪರೋಕ್ಷವಾಗಿ ಸಂಬಂಧಿಸಿದ್ದರಿಂದ ಆತ ತನ್ನದೇ ರೀತಿಯಲ್ಲಿ ತನಿಖೆ ಶುರು ಮಾಡುತ್ತಾನೆ. ಹಾಗೆ ಹೋದಾಗ, ಒಂದರಹಿಂದೊಂದು ತಿರುವುಗಳು ಸಿಗುತ್ತವೆ. ಮುಂದೇನಾಗುತ್ತದೆ ಎಂಬುದು ಚಿತ್ರದಲ್ಲೇ ನೋಡಬೇಕು.

