
Interview| ದರ್ಶನ್ ಜತೆ ಅಲ್ಲ, ಪೈರಸಿ ವಿರುದ್ಧ ʼಯುದ್ಧʼ ಎಂದ ಕಿಚ್ಚ ಸುದೀಪ್
ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಸಿನಿಮಾ ಮಾರ್ಕ್ ಬಗ್ಗೆ ಮಾತ್ರವಲ್ಲ ತಮ್ಮ ನಟನೆಯ ಪೌರಾಣಿಕ ಸಿನಿಮಾ ಬಗ್ಗೆಯೂ ಮಾನಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಾಳು ಗಿಲ್ಲಿನಟನ ಬಗ್ಗೆಯೂ ವಿವರಿಸಿದ್ದಾರೆ.
ಕಿಚ್ಚ ಸುದೀಪ ನಟನೆಯ 'ಮಾರ್ಕ್' ಮಾರ್ಕ್ ಮೂಡಿಸಲು ಸಿದ್ಧವಾಗಿದೆ. ರಿಲೀಸ್ ಗೆ ಮುನ್ನವೇ ಪೈರಸಿಗೆ ವಿರುದ್ಧ ಕಿಚ್ಚ ತೊಡೆ ತಟ್ಟಿದ್ದಾರೆ. 'ಯುದ್ಧಕ್ಕೆ ಸಿದ್ಧʼ ಎನ್ನುವ ಹೇಳಿಕೆ ಕೆಲವರ ಅಪಾರ್ಥಕ್ಕೆ ಗುರಿಯಾದಾಗ ಅದಕ್ಕೆ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.
ಅವರ ʼಯುದ್ಧʼದ ಹೇಳಿಕೆ ಸುದೀಪ್ ಮತ್ತು ದರ್ಶನ್ ನಡುವಿನ ಸ್ಟಾರ್ ವಾರ್ ಎಂಬಂತೆ ಚಿತ್ರಣವಾಗಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಸುದೀಪ್, ತಾವು ʼಪೈರಸಿʼ ವಿರುದ್ಧ ತಮ್ಮ ಹೋರಾಟದ ಬಗ್ಗೆ ವಿವರ ನೀಡಿದ್ದಾರೆ.
ಇಂದು (ಗುರುವಾರ) ಮಾರ್ಕ್ ಸಿನಿಮಾ ಬಿಡುಗಡೆಗೆ ಮುನ್ನ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಕಿಚ್ಚ ಸುದೀಪ್, ತಮ್ಮ ಮತ್ತು ದರ್ಶನ್ ಅಭಿಮಾನಿಗಳ ʼಸ್ಟಾರ್ ವಾರ್ʼ ಬಗ್ಗೆಯೂ ಮಾತನಾಡಿದ್ದಾರೆ. ಪೈರಸಿ ಹೋರಾಟ, ಮಾರ್ಕ್ ಸಿನಿಮಾ, ಅಭಿಮಾನಿಗಳ ಕಲಹ ಇತ್ಯಾದಿ ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ತಮ್ಮ ಪುತ್ರಿ ಸಾನ್ವಿ ಹಾಡಿರುವ ಬಗ್ಗೆ, ಪತ್ನಿ ಪ್ರಿಯಾ ಅವರು ಸಿನಿಮಾ ವಿತರಕರಾಗಿರುವ ಬಗ್ಗೆ, ಬಿಗ್‌ಬಾಸ್‌ನ ಸ್ಪರ್ಧಾಳು ಗಿಲ್ಲಿ ನಟ ನಟಿಸಿದ್ದ ದರ್ಶನ್ ಸಿನಿಮಾ ಡೆವಿಲ್ ಬಗ್ಗೆ ವಿವರವಾಗಿ ಸುದೀಪ್ ಅವರು ತಿಳಿಸಿದ್ದಾರೆ. ಜತೆಗೆ, ನಟ ದರ್ಶನ್ ಮತ್ತು ತಮ್ಮ ಸಂಬಂಧದ ಬಗ್ಗೆ, ತಾವು ನಟಿಸಿಲಿರುವ ಪೌರಾಣಿಕ ಸಿನಿಮಾದ ಬಗ್ಗೆ.. ಹೀಗೆ.. ಎಳೆಎಳೆಯಾಗಿ ತಮ್ಮ ಅಭಿಪ್ರಾಯಗಳನ್ನು ʼದ ಫೆಡರಲ್ ಕರ್ನಾಟಕʼದ ಜತೆ ಹೇಳಿದ್ದಾರೆ.
ದ ಫೆಡರಲ್ ಕೇಳಿದ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಅವರ ಉತ್ತರಗಳು ಹೀಗಿವೆ.
ಪೈರಸಿಯ ವಿರುದ್ಧ ನಿಮ್ಮ ಹೋರಾಟ ಎಲ್ಲಿಯವರೆಗೆ ಬಂದಿದೆ?
ಸರ್ಕಾರದಿಂದ ಯಾರ ಯಾರ ಬೆಂಬಲ ಪಡೆಯಬೇಕಾಗಿದೆಯೋ ಎಲ್ಲವನ್ನೂ ಪಡೆದು ತಯಾರಾಗಿದ್ದೇನೆ. ಸಂಪೂರ್ಣ ಸಿದ್ಧತೆ ನಡೆದಿದೆ. ಅದನ್ನು ಮಾಧ್ಯಮದಲ್ಲಿ ಹೇಳಿದರೆ ಮತ್ತೆ ಪೈರಸಿಯವರು ಹೆಚ್ಚು ಎಚ್ಚರಿಕೆ ವಹಿಸುವ ಸಾಧ್ಯತೆ ಇದೆ. ಆದರೆ ಖಂಡಿತವಾಗಿ ಈ ಬಾರಿ ಪೈರಸಿ ವಿರುದ್ಧ ಯುದ್ಧ ನಡೆದಿರುವುದಂತೂ ಸತ್ಯ.
ಪೈರಸಿ ವಿರುದ್ಧ ಇಂಡಸ್ಟ್ರಿ ಒಂದು ಸಂಘಟಿತ ಹೋರಾಟ ನಡೆಸುವ ಬದಲು ಒಬ್ಬೊಬ್ಬರೇ ಹೋರಾಡಿದರೆ ಖರ್ಚು ಅಧಿಕ ತಾನೇ?
ಒಗ್ಗಟ್ಟು ಎನ್ನುವುದು ನಮ್ಮ ನಮ್ಮ ಏರಿಯಾದಲ್ಲೇ ಇರುವುದಿಲ್ಲ. ಇನ್ನು ಒಟ್ಟು ಇಂಡಸ್ಟ್ರಿಯಿಂದ ಕಲ್ಪಿಸುವುದು ಕಷ್ಟ. ಅದರಲ್ಲೂ ಈಗ ಬಿಡುಗಡೆಯಾಗುತ್ತಿರುವುದು ನಮ್ಮ ಸಿನಿಮಾ. ಎಲ್ಲರು ಬೆಂಬಲಿಸಬೇಕು ಅಂತ ಏನಿಲ್ಲ. ಅದರ ಬದಲು ನಾವೇ ಒಂದಷ್ಟು ಮೊತ್ತ ಹೆಚ್ಚೇ ಖರ್ಚು ಮಾಡಿ ಪೈರಸಿಗೆ ಔಷಧಿ ಅರೆದರೆ ತಪ್ಪೇನು? ಒಂದೊಳ್ಳೆಯ ಮನೆ ಕಟ್ಟಿದ ಮೇಲೆ ಭದ್ರವಾದ ಬಾಗಿಲಿಗಾಗಿ ದೊಡ್ಡ ಮೊತ್ತ ಖರ್ಚು ಮಾಡಿದರೆ ತಪ್ಪೇನಿಲ್ಲ ತಾನೇ?
ದರ್ಶನ್ vs ಸುದೀಪ್ ಸ್ಟಾರ್‌ವಾರ್ ಮತ್ತು ಫ್ಯಾನ್‌ವಾರ್!
ನೀವು ಮತ್ತು ದರ್ಶನ್ ಯಾವತ್ತೂ ಬೈದಾಡಿರುವ ಉದಾಹರಣೆ ಇಲ್ಲ. ಆದರೆ ನಿಮ್ಮಿಬ್ಬರ ಫ್ಯಾನ್ಸ್ ಮಾತ್ರ ಬದ್ಧವೈರಿಗಳಂತೆ ಇರೋದಕ್ಕೆ ಏನಂತೀರಿ?
ನಮ್ಮಿಬ್ಬರ ಮಧ್ಯೆ ಸಾವಿರ ಇರಬಹುದು. ಅದು ನಮ್ಮಿಬ್ಬರದು ಮಾತ್ರ. ಆದರೆ ಕಲಾವಿದರಾಗಿ ನಾವು ಯಾವತ್ತೂ ಕಿತ್ತಾಡಿಯೇ ಇಲ್ಲ. ನನಗೆ ಅವರ ಬಗ್ಗೆ ತುಂಬಾನೇ ಗೌರವ ಇದೆ.
ಕೆಲವು ಆಗುಹೋಗುಗಳ ಬಗ್ಗೆ ನೋವಿದೆ. ಈ ಸಂದರ್ಭದಲ್ಲಿ ಫ್ಯಾನ್ಸ್ ಭಾವನೆ ಅರ್ಥ ಮಾಡಿಕೊಳ್ಳಬೇಕು ಅಂತ ನಾನು ವಾಹಿನಿಗಳಲ್ಲೇ ಹೇಳಿದ್ದೇನೆ. ಅವರ ಫ್ಯಾನ್ಸ್ ಕೂಡ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿದ್ದನ್ನು ನೋಡಿದ್ದೇನೆ. ಆದರೆ ನಮ್ಮಿಬ್ಬರ ಫ್ಯಾನ್ಸ್ ಒಂದಾಗೋದನ್ನು ಯಾವುದೋ ಮೂರನೇ ವರ್ಗ ತಡೀತಾ ಇದೆ. ಬಹುಶಃ ಅವರಿಗೆ ಅದು ಇಷ್ಟಾಗ್ತಿಲ್ಲ ಇರಬಹುದು.
ಮ್ಯಾಕ್ಸ್ ಮತ್ತು ಮಾರ್ಕ್
ಮ್ಯಾಕ್ಸ್ ನಿರ್ದೇಶಿಸಿದ ತಮಿಳು ನಿರ್ದೇಶಕರು ಮತ್ತೆ ನಿಮಗೇನೇ ಚಿತ್ರ ಮಾಡಲು ಏನು ಕಾರಣ ಅನಿಸುತ್ತೆ?
ಮೊದಲ ಬಾರಿ ನನ್ನೊಂದಿಗೆ ಸಿನಿಮಾ ಮಾಡುವಾಗ ವಿಜಯ್ ಕಾರ್ತಿಕೇಯನ್ ಅವರಿಗೆ ಕನ್ನಡದಲ್ಲಿ ನನ್ನ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಇರುತ್ತೆ ಅಂತ ತಿಳಿದಿರಲಿಲ್ಲ. ಆದರೆ ರಿಲೀಸ್ ದಿನ 'ನರ್ತಕಿ' ಚಿತ್ರಮಂದಿರದಲ್ಲಿ ನೋಡಿದ ಬಳಿಕ ಮೈಸೂರು, ಚಿತ್ರದುರ್ಗ, ಹಾಸನ, ದಾವಣಗೆರೆ ಎಲ್ಲ ಕಡೆಯೂ ನೋಡಿ ಬಂದರು. ಅಷ್ಟೆಲ್ಲ ನೋಡಿ ತಮಿಳು ನಾಡಲ್ಲಿ ಸಿನಿಮಾ ಮಾಡಲು ಹೋಗಿಲ್ಲ. ವಾಪಾಸು ಇಲ್ಲಿಗೇನೇ ಬಂದರು. ವಾಪಸು ಬಂದ ಬಳಿಕ ಮ್ಯಾಕ್ಸ್ ನಷ್ಟು ಇನ್ ಪುಟ್ ಕೊಡಬೇಕಾಗಿರಲಿಲ್ಲ. ಆದರೆ ಅವರು ಕುಳಿತು ಹೇಳಿದ್ದಾರೆ. ಒಟ್ಟಿನಲ್ಲಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ.
'ಮಾರ್ಕ್'ನಲ್ಲಿ ಮತ್ತೆ ನಿಮ್ಮ ಆರಂಭದ ದಿನಗಳ ಡಾನ್ಸ್ ಮರಳಿದಂತಿದೆ?
ಅದಕ್ಕೂ ಕಾರಣ ನಮ್ಮ ಡೈರೆಕ್ಟರ್. ಅವರು ಥಿಯೇಟರ್ ವಿಸಿಟ್ ಮಾಡಿದಲ್ಲೆಲ್ಲ ಮ್ಯಾಕ್ಸ್ ನ ಎರಡೇ ಎರಡು ಸ್ಟೆಪ್ಸ್ ಗೆ ಭಾರೀ ಚಪ್ಪಾಳೆ ಬಿದ್ದಿರುವುದನ್ನು ನೋಡಿದ್ದಾರೆ. ಹೀಗಾಗಿ 'ಮಾರ್ಕ್' ನಲ್ಲಿ ನನ್ನಿಂದ ಸ್ವಲ್ಪ ಹೆಚ್ಚೇ ಡಾನ್ಸ್ ಬೇಕು ಅಂತ ಬಯಸಿದ್ದಾರೆ. ನಾನು ಇಲ್ಲಿಯವರೆಗೆ ಡಾನ್ಸ್ ಮಾಡದೇನೇ ಬಂದಿದ್ದೇನೆ ಅಂದರೂ ಕೇಳಲೇ ಇಲ್ಲ!
ಪೌರಾಣಿಕ ಸಿನಿಮಾದಲ್ಲಿ ಸುದೀಪ್ ನಟನೆ
ತಮಿಳಿನಿಂದ ಬೇರೆ ನಿರ್ದೇಶಕರು ಕೂಡ ನಿಮ್ಮನ್ನು ಅಪ್ರೋಚ್ ಮಾಡ್ತಿದ್ದಾರ?
ಇಲ್ಲ. ಆದರೆ ತೆಲುಗುನಿಂದ ಸುಕುಮಾರ್ ಟೀಮ್ ನಲ್ಲಿರುವ ಒಬ್ಬರು ಒಂದೊಳ್ಳೆಯ ಕಥೆ ತಂದಿದ್ದಾರೆ. ಅದನ್ನು ನಮ್ಮ ಕನ್ನಡದವರೇ ನಿರ್ಮಿಸಲಿದ್ದಾರೆ. ಆದರೆ ನೆಕ್ಸ್ಟ್ ಪ್ರಾಜೆಕ್ಟ್ ಅದೇ ಅಂತ ಹೇಳೋ ಹಾಗಿಲ್ಲ. ಪ್ರೇಮ್ ಜತೆಗೆ ಒಂದು ಮೈಥಾಲಜಿಕಲ್ ಪ್ರಾಜೆಕ್ಟ್ ಕೂಡ ಸಿದ್ಧವಾಗುತ್ತಿದೆ. ತುಂಬ ಚೆನ್ನಾಗಿದೆ. ಪೌರಾಣಿಕದಲ್ಲಿ ಇದೇ ಮೊದಲ ಬಾರಿ ಮಾಡುತ್ತಿದ್ದೇನೆ.
ಸಿನಿಮಾ ವೇಗವಾಗಿ ಮುಗಿಸಿದಾಗ ಬಜೆಟ್ ಕೂಡ ಉಳಿಕೆಯಾಗಬಹುದಲ್ಲ?
ಬೇಗ ಸಿನಿಮಾ ಚಿತ್ರೀಕರಣ ಮುಗಿಸುವುದರಿಂದ ನಿರ್ಮಾಪಕರು ಬಡ್ಡಿ ಕಟ್ಟಬೇಕಾಗಿರುವುದು ಕಡಿಮೆಯಾಗುತ್ತದೆ. ಇದರಿಂದಾಗಿ ಏಳೆಂಟು ಕೋಟಿ ರೂಪಾಯಿ ಉಳಿಯುತ್ತದೆ.
ಸೇಲೇಬಲ್ ಪ್ರಾಜೆಕ್ಟ್ ಎನ್ನುವ ನಂಬಿಕೆ ಇಂಡಸ್ಟ್ರಿಯಲ್ಲಿದ್ದಾಗ 60ಪರ್ಸೆಂಟ್ ಚಿತ್ರೀಕರಣ ಆಗುತ್ತಿದ್ದಂತೆ ಮಾರುಕಟ್ಟೆಯಿಂದ ದುಡ್ಡು ಬರಲು ಶುರುವಾಗುತ್ತದೆ. ಒಂದುವೇಳೆ 100% ಹೂಡಿಕೆ ನಿಮ್ಮದೇ ಆಗಿದ್ದರೂ ಅತಿ ವೇಗದಲ್ಲಿ ಮರಳುವ ಸಾಧ್ಯತೆ ಇರುತ್ತದೆ. ನಿಮ್ಮ ಹೂಡಿಕೆ ಎಷ್ಟು ಬೇಗ ಮಾರುಕಟ್ಟೆ ಸೇರುವುದೋ ಅಷ್ಟು ಉತ್ತಮ. ನನ್ನ ಪ್ರಕಾರ ಚಿತ್ರೋದ್ಯಮದಲ್ಲಿ 80% ದಷ್ಟು ಚಿತ್ರಗಳನ್ನು ಈ ರೀತಿ ಮಾಡಿ ಮುಗಿಸಬಹುದು. ಬಜೆಟ್ ಕಡಿಮೆ ಮಾಡಲು ಕಲಾವಿದರಿಗೆ, ತಂತ್ರಜ್ಞರಿಗೆ ಕಡಿಮೆ ಸಂಭಾವನೆ ಪಡೆಯಲು ಒತ್ತಡ ಹಾಕಲಾಗದು. ಅದೇ ರೀತಿ ನಿರ್ದೇಶಕರಲ್ಲೂ ಕಡಿಮೆ ದಿನದಲ್ಲಿ ಚಿತ್ರೀಕರಣ ಮುಗಿಸಿ ಎಂದು ಹೇಳಲಾಗದು. ಹಾಗಾಗಿ ನಾವೇ ಚಿತ್ರೀಕರಣವನ್ನು ಬೇಗ ಹೇಗೆ ಮುಗಿಸಬಹುದು ಎನ್ನುವ ಪ್ಲ್ಯಾನ್ ನಲ್ಲಿ ಭಾಗಿಯಾಗಬೇಕಾಗುತ್ತದೆ.
ಮುಂದೆ ಎಲ್ಲ ಸಿನಿಮಾಗಳನ್ನು ಇದೇ ವೇಗದಲ್ಲಿ ಮುಗಿಸುವ ಯೋಜನೆ ಇದೆಯೇ?
ಎಲ್ಲ ಸಿನಿಮಾಗಳನ್ನು ಇದೇ ರೀತಿ ಮುಗಿಸಲು ಸಾಧ್ಯವಿಲ್ಲ. ಉದಾಹರಣೆಗೆ 'ಬಿಲ್ಲ ರಂಗ ಬಾಷ'. ಅದರ ಒಬ್ಬೊಬ್ಬರ ಮೇಕಪ್ ಹಾಕುವುದಕ್ಕೇನೇ ಮೂರು ಮೂರು ಗಂಟೆ ಬೇಕಿತ್ತು. ಆ ಪ್ರಾಜೆಕ್ಟ್, ಅದರ ಸೆಟ್ಸ್ ಎಲ್ಲವೂ ಆ ಮಟ್ಟಕ್ಕಿದೆ.
ಕೆಲವೊಮ್ಮೆ ಪ್ರಾಕೃತಿಕ ಕಾರಣಗಳಿಂದಾಗಿ ಸೆಟ್ಸ್ ಹಾಳಾಗಿ ಚಿತ್ರೀಕರಣ ಮುಂದೂಡಲ್ಪಡುತ್ತದೆ. ಅಂದರೆ ನಾವು ಎಷ್ಟೇ ಪ್ರಯತ್ನ ಪಟ್ಟರೂ ಅಂತಿಮವಾಗಿ ಎಲ್ಲವೂ ನಮ್ಮ ಕೈನಲ್ಲಿ ಇರುವುದಿಲ್ಲ.
ತಮಿಳಿನಲ್ಲೂ ದ್ವನಿ ನೀಡಿದ ಕಿಚ್ಚ
ತಮಿಳಲ್ಲಿ ಕೂಡ ನಿಮ್ಮ ಧ್ವನಿಗೆ ಫ್ಯಾನ್ಸ್ ಇದ್ದಾರೆ. ನೀವೇ ಡಬ್ಬಿಂಗ್ ಮಾಡಿದ್ದೀರ?
ಹೌದು. ಕನ್ನಡದಲ್ಲಿ ವೇಗವಾದ ಡೈಲಾಗ್ ಹೇಳಿರುವ ಸನ್ನಿವೇಶಗಳಿಗೆ ಅದೇ ವೇಗದಲ್ಲೇ ತಮಿಳಲ್ಲೂ ಡಬ್ ಮಾಡಬೇಕಾಗಿತ್ತು. ಕಷ್ಟಪಟ್ಟು ನಾನೇ ಡಬ್ ಮಾಡಿದ್ದೇನೆ. ಮೊದಲು ಕನ್ನಡ ಮತ್ತು ತಮಿಳಲ್ಲಿ ಮೊದಲು ರಿಲೀಸ್ ಆಗಲಿ ಆಮೇಲೆ ತೆಲುಗು, ಹಿಂದಿಯಲ್ಲಿ ತರೋಣ ಅಂತ ಇದ್ದೀನಿ. ಸಿನಿಮಾ ರಿಲೀಸ್ ಆದಮೇಲೆ ತಮಿಳು, ತೆಲುಗು ಮಾಧ್ಯಮಗಳಿಗೆ ಸಂದರ್ಶನ ನೀಡಲಿದ್ದೇನೆ.
ಮಗಳು ಸಾನ್ವಿ ಸುದೀಪ್
'ಮಾರ್ಕ್'ನಲ್ಲಿ ಮಗಳು ಹಾಡಿರುವ ಖುಷಿ ಎಷ್ಟಿದೆ?
ಇದರ ಕ್ರೆಡಿಟ್ ಸಂಪೂರ್ಣವಾಗಿ ಸಾನ್ವಿಯ ಪ್ರತಿಭೆಗೆ ಸಲ್ಲುತ್ತದೆ. ಅವಳು ಚೆನ್ನಾಗಿ ಹಾಡುತ್ತಿರುವ ಕಾರಣವೇ ಈ ಅವಕಾಶ ದೊರಕಿದೆ. ನನ್ನ ಸಿನಿಮಾದಲ್ಲೇ ಹಾಡಿಸಬೇಕು ಎನ್ನುವುದು ನನ್ನ ಗುರಿಯಾಗಿದ್ದರೆ ಮೂರು ವರ್ಷದ ಹಿಂದೆಯೇ ಹಾಗೆ ಮಾಡುತ್ತಿದ್ದೆ. ಯಾಕೆಂದರೆ ಅವಳು ಆವಾಗಿನಿಂದಲೂ ಚೆನ್ನಾಗಿಯೇ ಹಾಡುತ್ತಿದ್ದಳು. ಈ ಬಾರಿ ಅಜನೀಶ್ ಅವಳ ಕಂಠವನ್ನು ಸೆಲೆಕ್ಟ್ ಮಾಡಿದ ಮೇಲೆ ಕೂಡ "ನಿಮಗೆ ನಿಜಕ್ಕೂ ಓ.ಕೆ ತಾನೇ?" ಎಂದು ನಾನೇ ಕೇಳಿ ಕನ್ಫರ್ಮ್ ಮಾಡಿಕೊಂಡೆ. ಅವರು " ಹಂಡ್ರೆಡ್ ಪರ್ಸೆಂಟ್ ಓ.ಕೆ" ಅಂದರು. ಅವರು ಕೂಡ ತಮ್ಮ ಕಂಪೋಸಿಂಗ್ ಗೆ ಹೊಂದಿಕೊಳ್ಳದಿರುವ ಗಾಯಕಿಯಿಂದ ಹಾಡಿಸಲಾರರು ಎನ್ನುವ ವಿಶ್ವಾಸ ಇದೆ. ಹಾಡು ಕೇಳಿಸಿಕೊಂಡವರು ಮೆಚ್ಚುತ್ತಿದ್ದಾರೆ. ಹೀಗಾಗಿ ಇದಕ್ಕೆಲ್ಲ ಮಗಳಲ್ಲಿರುವ ಪ್ರತಿಭೆಯೇ ಕಾರಣ ಎಂದು ನಂಬಿದ್ದೇನೆ.
ಪತ್ನಿ ಪ್ರಿಯಾ ಸಿನಿಮಾ ವಿತರಕರಾಗಿ...
ಈ ಚಿತ್ರದ ಮೂಲಕ ಪತ್ನಿ ವಿತರಣಾ ಕ್ಷೇತ್ರಕ್ಕೆ ಬರುವಲ್ಲಿ ನಿಮ್ಮ ಪ್ರೇರಣೆ ಇದೆಯೇ?
ಇಲ್ಲ. ಅದು ಕೂಡ ಪ್ರಿಯಾ ಅವರದ್ದೇ ನಿರ್ಧಾರ. ಮಾತ್ರವಲ್ಲ, ಸಂಪೂರ್ಣವಾಗಿ ಅವರದೇ ದುಡ್ಡು. ಆಕೆಯದೂ ಒಂದು ಉದ್ಯಮ ಇದೆ. ಅದನ್ನು ಬೆಳೆಸುವ ಪ್ರಯತ್ನದಲ್ಲಿದ್ದಾರೆ. ವಿತರಣೆಯಲ್ಲಿ ಖುದ್ದಾಗಿ ಆಸಕ್ತಿ ಇದೆ. ರಾಕ್‌ಲೈನ್ ವೆಂಕಟೇಶ್ ಅವರು ಈ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು. ಬಹುಶಃ ನನಗೆ ಅನಿಸುತ್ತೆ ಪ್ರಿಯಾ ವಿತರಣೆಗೆ ಬರೋದಕ್ಕೆ ರಾಕ್‌ಲೈನ್ ಅವರೇ ಸ್ಫೂರ್ತಿ ಅಂತ. ನನಗೆ ಕೆ.ಆರ್.ಜಿ ಜತೆ, ಜಯಣ್ಣ ಜತೆ ಒಳ್ಳೆಯ ಸಂಬಂಧ ಇದೆ. ಹಾಗೆ ಅವರು ಕೈ ಜೋಡಿಸಿದ್ರು.
ಸುದೀಪ್, ಪತ್ನಿ ಪ್ರಿಯಾ ಹಾಗೂ ಪುತ್ರಿ ಹಾಗೂ ಗಾಯಕಿ ಸಾನ್ವಿ ಸುದೀಪ್
ಪ್ರಿಯಾ ಅವರು ಮುಂದೆ ಬೇರೆಯವರ ಚಿತ್ರಗಳ ವಿತರಣೆ ನಡೆಸುವುದನ್ನು ನಿರೀಕ್ಷಿಸಬಹುದೇ?
ಖಂಡಿತವಾಗಿ. ನಿಮಗೆ ನೆನಪಿರಬಹುದು, ಜಾಕ್ ಮಂಜು ನನ್ನ ಮ್ಯಾನೇಜರ್ ಆಗಿದ್ದವರು. ಆಗ ಆಗಲೀ, ನಿರ್ಮಾಪಕರಾಗಿದ್ದಾಗ ಆಗಲೀ ಅವರು ನನ್ನ ಚಿತ್ರಗಳನ್ನು ಮಾತ್ರ ವಿತರಿಸಿದವರಲ್ಲ. ಬೇರೆಯವರ ಚಿತ್ರಗಳನ್ನು ಕೂಡ ವಿತರಿಸಿದ್ದಾರೆ. ಯಾವ ಚಿತ್ರಗಳನ್ನು ವಿತರಿಸಬೇಕು ಎನ್ನುವುದು ಅವರದೇ ಆಯ್ಕೆ. ಅದೇ ರೀತಿ ಪ್ರಿಯಾ ಕೂಡ ನನ್ನ ಚಿತ್ರಕ್ಕೆ ಮಾತ್ರ ವಿತರಕರಾಗಿ ಉಳಿಯುವುದಿಲ್ಲ. ಅಂಥ ನಿರ್ಧಾರ ವೃತ್ತಿಪರ ವಿತರಕರಿಗೆ ಹೇಳಿದ್ದಲ್ಲ.
ಮಾರ್ಕ್ ಚಿತ್ರದಲ್ಲಿ ನಿಮಗೆ ಕಾಣಿಸಿದ ಪ್ರಮುಖ ವಿಶೇಷತೆ ಏನು ?
ಕಥೆ ಹೇಳಿರುವ ರೀತಿ ಮತ್ತು ಕೊನೆಯಲ್ಲಿ ಬರುವ ಎಮೋಷನಲ್ ಪ್ಯಾಕೇಜ್ ತುಂಬ ಚೆನ್ನಾಗಿದೆ. ಮಾಸ್ ಕ್ಯಾರೆಕ್ಟರ್ ಕೊನೆಗೂ ಮಾಸ್ ನಲ್ಲೇ ಮುಗಿಯುತ್ತೆ ಅಂದುಕೊಳ್ಳಬೇಡಿ. ಕೊನೆಯಲ್ಲಿ ಮನಸಿಗೆ ತಟ್ಟಬಹುದೆನ್ನುವ ನಂಬಿಕೆ ನನಗಿದೆ. ಮ್ಯಾಕ್ಸ್ ಕ್ಲೈಮ್ಯಾಕ್ಸ್ ಹೇಗೆ ಹೊಸ ತಿರುವು ಕೊಟ್ಟಿತ್ತೋ ಅದೇ ರೀತಿ ಇಲ್ಲಿ ಇನ್ನೊಂದು ರೀತಿಯ ಸರ್ಪ್ರೈಸ್ ಇದೆ. ನಾನು ಕೂಡ ಆರಂಭದಲ್ಲಿ ಕಥೆ ಕೇಳುವಾಗ ಇದೊಂದು ದೊಡ್ದ ಫೈಟಲ್ಲಿ ಮುಗಿಯುತ್ತೆ ಅಂದುಕೊಂಡಿದ್ದೆ. ಆದರೆ ಹಾಗಿಲ್ಲ. ಫೈನಲ್ ಮಿಕ್ಸಿಂಗ್ ಸಂದರ್ಭದಲ್ಲಿ ಅಜನೀಶ್ ಲೋಕನಾಥ್ ಫೋನ್ ಮಾಡಿ "ಗೊತ್ತಿಲ್ಲದೇ ಕಣ್ಣಲ್ಲಿ ನೀರು ಬಂತು" ಅಂದರು.
ಮಹಿಳಾ ಪ್ರೇಕ್ಷಕರಿಗೆ ಕಿಚ್ಚನ ದಾಡಿ, ಮೀಸೆಯೇ ಇಷ್ಟ!
ಈ ಆ್ಯಕ್ಷನ್ ಚಿತ್ರದಲ್ಲಿ ನಿಮ್ಮ ಮಹಿಳಾ ಪ್ರೇಕ್ಷಕರಿಗೆ ಇಷ್ಟವಾಗುವಂಥ ಯಾವ ಅಂಶಗಳಿವೆ?
ನನ್ನ ಮಹಿಳಾ ಪ್ರೇಕ್ಷಕರಿಗೆ ನನ್ನ ಆ್ಯಕ್ಷನೇ ಇಷ್ಟ! ಅವರು ಇಷ್ಟಪಟ್ಟಿರುವುದೇ ನನ್ನ ದಾಡಿ,ಮೀಸೆ, ರಫ್ ನೆಸ್ಸು ಮತ್ತು ಸಿಗರೇಟು! ಮಹಿಳಾ ಪ್ರೇಕ್ಷಕರಿಗೆ ಅಂತ 'ಮುಸ್ಸಂಜೆ ಮಾತು' ಮಾಡಿದಾಗ ತುಂಬ ಸಾಫ್ಟ್ ಆಗಿ ರನ್ ಆಗಿತ್ತು. ನಾವೇ ಸಾಫ್ಟ್. ಹುಡುಗಿಯರಿಗೆ ರಗಡ್ ಬೇಕು.
ಎಲ್ಲರೂ ಸದಾ ನೆನಪಿಸುವಂಥದ್ದೊಂದು ಸಿನಿಮಾ ಮಾಡಬೇಕು ಅಂತ ಅನಿಸಿಲ್ಲವೇ?
ಈ ಕಾಲದಲ್ಲಿ ಜನ ಏನನ್ನೂ ಹೆಚ್ಚು ದಿನ ನೆನಪಲ್ಲಿ ಇಟ್ಕೊಳ್ಳಲ್ಲ. ಅದು ಒಳ್ಳೇದಾಗಲೀ, ಕೆಟ್ಟದ್ದೇ ಆಗಿರಲಿ! ಆದರೆ ಸದಾ ನೆನಪಿಸುವಂಥ ಸಿನಿಮಾ ಅನ್ನೋದೆಲ್ಲ ಪ್ಲ್ಯಾನ್ ಹಾಕಿ ಮಾಡುವಂಥದ್ದಲ್ಲ. 'ಶೋಲೆ' ಆಗಲೀ, 'ಓಂ' ಆಗಲೀ ಕಲ್ಟ್ ಆಗಬೇಕು ಎಂದು ಪ್ಲ್ಯಾನ್ ಮಾಡಿರೋದಲ್ಲ. ಬಂಧನ ಕೂಡ ಅಷ್ಟೇ. ರೀಸೆಂಟಾಗಿ ಬಂದಿರುವುದರಲ್ಲಿ ರಾಜಕುಮಾರ ಚಿತ್ರ ತಗೊಳ್ಳಿ! ಅಷ್ಟು ದೊಡ್ಡ ಹಿಟ್ ಆಗುತ್ತೆ ಅಂತ ಯಾರು ತಾನೇ ನಿರೀಕ್ಷೆ ಮಾಡಿದ್ರು? ಸಂತೋಷ್ ಆನಂದ್ ರಾಮ್, ಪುನೀತ್ ಅವರದ್ದು ಒಂದು ನಾರ್ಮಲ್ ಸಿನಿಮಾ ಅದು. ಆದರೆ ಈಗಲೂ ಎಲ್ಲೇ ಹೋದರೂ ಆ ಹಾಡು ಬರುತ್ತಿರುತ್ತದೆ. ಹಾಗೆ ಅಂಥದ್ದನ್ನೆಲ್ಲ ಪ್ಲ್ಯಾನ್ ಮಾಡೋಕೆ ಆಗಲ್ಲ.
ಬಿಗ್ ಬಾಸ್ ಗಿಲ್ಲಿ ನಟನ ಬಗ್ಗೆ...
'ಬಿಗ್ ಬಾಸ್' ಬಗ್ಗೆ ಕೇಳುವುದಾದರೆ ಗಿಲ್ಲಿ ನಟ ನಟಿಸಿರುವ ಚಿತ್ರಕ್ಕೆ ನೀವು ಆ ವೇದಿಕೆಯಿಂದ ಶುಭವನ್ನೂ ಕೋರಿಲ್ಲ ಯಾಕೆ ಹೇಳಬಹುದೇ?
ಕೆಲವು ವಿಚಾರಗಳಲ್ಲಿ ವಾಹಿನಿಯೇ ನಿರ್ಧಾರ ತೆಗೆದುಕೊಳ್ಳುತ್ತದೆ. ಅದನ್ನು ನೀವು ಅವರಲ್ಲೇ ಕೇಳಬೇಕಾಗುತ್ತದೆ. ಉದಾಹರಣೆಗೆ ನೀವು ಮಾಧ್ಯಮದವರೇ ಒಬ್ಬ ಕಲಾವಿದರ ಬಗ್ಗೆ ಸುದ್ದಿ ಹಾಕುವುದನ್ನೇ ಬಹಿಷ್ಕರಿಸಿದ್ರಲ್ಲ? ಅಂಥ ನಿರ್ಧಾರಗಳನ್ನು ವಾಹಿನಿ ಕೂಡ ತೆಗೆದುಕೊಂಡಿರುವ ಸಾಧ್ಯತೆ ಇರುತ್ತಲ್ವ?

