
ಜನವರಿ 23ಕ್ಕೆ'ಮಾರ್ಕ್' ಸಿನಿಮಾ ಒಟಿಟಿಗೆ ಬರಲಿದೆ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ.
'ಮಾರ್ಕ್' ಒಟಿಟಿ ರಿಲೀಸ್ ಡೇಟ್ ಫಿಕ್ಸ್; ಬಿಗ್‌ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹೇಳಿದ್ದೇನು?
ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಅವರು ತಮ್ಮ ಲೇಟೆಸ್ಟ್ ಸಿನಿಮಾ 'ಮಾರ್ಕ್' ಬಗ್ಗೆ ಮಹತ್ವದ ಘೋಷಣೆ ಮಾಡಿದರು. ಜನವರಿ 23ರಂದು ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಅಧಿಕೃತವಾಗಿ ತಿಳಿಸಿದರು.
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಈ ಬಾರಿ ಕೇವಲ ಟ್ರೋಫಿ ವಿಜೇತರ ಘೋಷಣೆ ಮಾತ್ರವಲ್ಲದೆ, ಕಿಚ್ಚ ಸುದೀಪ್ ಅವರ ನಟನೆಯ ಬಹುನಿರೀಕ್ಷಿತ ಚಿತ್ರ 'ಮಾರ್ಕ್' ಬಗ್ಗೆಯೂ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.
ಕಿಚ್ಚ ಸುದೀಪ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮಾರ್ಕ್' ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಗ್ ಬಾಸ್ ವೇದಿಕೆಯ ಮೇಲೆ ಈ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ಸುದೀಪ್, ಸಿನಿಮಾಕ್ಕೆ ಸಿಕ್ಕ ಜನಪ್ರಿಯತೆಯ ಬಗ್ಗೆ ಖುಷಿ ಹಂಚಿಕೊಂಡರು. ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿಯಾಗಿ ಓಡುತ್ತಿರುವಾಗಲೇ ಈ ಚಿತ್ರದ ಒಟಿಟಿ ಹಕ್ಕುಗಳ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಜನವರಿ 23ಕ್ಕೆ ಒಟಿಟಿಯಲ್ಲಿ 'ಮಾರ್ಕ್' ಪ್ರಸಾರ
ಸುದೀಪ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ಮಾರ್ಕ್' ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿದೆ. ಜಿಯೋ ಹಾಟ್ ಸ್ಟಾರ್ ಒಟಿಟಿಯಲ್ಲಿ ಜನವರಿ 23ರಂದು ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಅಥವಾ ಮತ್ತೊಮ್ಮೆ ನೋಡಬಯಸುವವರು ಈ ವಾರಾಂತ್ಯದಲ್ಲೇ ಮನೆಯಲ್ಲೇ ಕುಳಿತು 'ಮಾರ್ಕ್' ನೋಡಬಹುದು.
ಬಿಗ್ ಬಾಸ್ ಸೀಸನ್ 12ರ ವಿನ್ನರ್ ಘೋಷಣೆ
ಬಿಗ್ ಬಾಸ್ ಕನ್ನಡ ಸೀಸನ್ 12ರ ರೋಚಕ ಹಣಾಹಣಿಯಲ್ಲಿ ಗಿಲ್ಲಿ ನಟ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಮೊದಲ ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ವಿಜೇತ ಗಿಲ್ಲಿ ನಟ ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ, ಒಂದು ಐಷಾರಾಮಿ ಕಾರು ದೊರೆತಿದೆ.
ಕಿಚ್ಚನ ಕಡೆಯಿಂದ ಗಿಲ್ಲಿಗೆ ಬಂಪರ್ ಗಿಫ್ಟ್
ಈ ಸೀಸನ್‌ನಲ್ಲಿ ಗಿಲ್ಲಿ ನಟ ಅವರ ಸರಳತೆ ಮತ್ತು ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್ ಅವರು, ತಮ್ಮ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಮೊತ್ತದ ವಿಶೇಷ ಬಹುಮಾನ ಘೋಷಿಸಿದ್ದಾರೆ. ಈ ಮೊತ್ತವನ್ನು ಗಿಲ್ಲಿ ನಟ ಅವರ ಭವಿಷ್ಯಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ನೀಡುವುದಾಗಿ ಸುದೀಪ್ ತಿಳಿಸಿದರು.
ಬಿಗ್ ಬಾಸ್ ಮನೆಗೆ ತಾತ್ಕಾಲಿಕ ವಿದಾಯ
ಸತತ 112 ದಿನಗಳ ಕಾಲ ನಡೆದ ಈ ಬಾರಿಯ ಬಿಗ್ ಬಾಸ್ ಸೀಸನ್ 12ಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಮನೆಯ ಲೈಟ್ ಆಫ್ ಮಾಡುವ ಮೂಲಕ ಈ ಸೀಸನ್ ಮುಕ್ತಾಯಗೊಳಿಸಿದರು. ಈ ಸೀಸನ್ ಮುಗಿಯುತ್ತಿದ್ದಂತೆಯೇ 'ಬಿಗ್ ಬಾಸ್ ಕನ್ನಡ ಸೀಸನ್ 13' ಬಗ್ಗೆ ಚರ್ಚೆಗಳು ಶುರುವಾಗಿದ್ದು, ಸದ್ಯಕ್ಕೆ ಬಿಗ್ ಬಾಸ್ ವಿಶ್ರಾಂತಿ ಪಡೆಯಲಿದ್ದಾನೆ ಎಂದು ಸುದೀಪ್ ಭಾವನಾತ್ಮಕವಾಗಿ ಹೇಳಿ ಕಾರ್ಯಕ್ರಮ ಮುಕ್ತಾಯಗೊಳಿಸಿದ್ದರು.

