
ಸರ್ಕಾರವು ಮನರಂಜನಾ ಕ್ಷೇತ್ರ ಅಥವಾ ಲಾಟರಿ ಮೂಲಕ ಸಿಗುವ ಬಹುಮಾನದ ಮೊತ್ತಕ್ಕೆ ಬರೋಬ್ಬರಿ ಶೇ. 30ರಷ್ಟು ಆದಾಯ ತೆರಿಗೆ ವಿಧಿಸುತ್ತದೆ.
ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಟ್ಯಾಕ್ಸ್ ಹೊಡೆತ: ಗೆದ್ದ 50 ಲಕ್ಷದಲ್ಲಿ ಅರ್ಧದಷ್ಟು ಕಡಿತ?
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಯಲ್ಲಿ ಗಿಲ್ಲಿ ನಟ ವಿಜೇತರಾಗಿ ಹೊರಹೊಮ್ಮಿದ್ದು, ಅವರಿಗೆ 50 ಲಕ್ಷ ರೂ. ನಗದು, ಒಂದು ಕಾರು ಹಾಗೂ ಕಿಚ್ಚ ಸುದೀಪ್ ಅವರಿಂದ ವೈಯಕ್ತಿಕವಾಗಿ 10 ಲಕ್ಷ ರೂ. ಬಹುಮಾನ ಲಭಿಸಿದೆ.
ಬಿಗ್ ಬಾಸ್ ಕನ್ನಡದ ಈ ಬಾರಿಯ ಸೀಸನ್ ಅದ್ಧೂರಿಯಾಗಿ ತೆರೆಕಂಡಿದೆ. ತನ್ನ ವಿಶಿಷ್ಟ ಮ್ಯಾನರಿಸಂ ಮತ್ತು ಮನರಂಜನೆಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಗಿಲ್ಲಿ ನಟ ಅಂತಿಮವಾಗಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ಸ್ಪರ್ಧಿಯಾಗಿ ಗುರುತಿಸಿಕೊಂಡ ಗಿಲ್ಲಿಗೆ ಕಪ್ ಜೊತೆಗೆ ಭರ್ಜರಿ ಬಹುಮಾನಗಳೂ ಲಭಿಸಿವೆ. ಆದರೆ ಗೆಲುವಿನ ಈ ಸಂಭ್ರಮದ ನಡುವೆಯೇ ಆದಾಯ ತೆರಿಗೆಯ ಕಟ್ಟುನಿಟ್ಟಾದ ನಿಯಮಗಳು ವಿನ್ನರ್ ಮತ್ತು ರನ್ನರ್ ಅಪ್ ಇಬ್ಬರಿಗೂ ಬಿಸಿ ಮುಟ್ಟಿಸಿವೆ.
ಗಿಲ್ಲಿ ಈ ಬಾರಿ ಬಿಗ್ ಬಾಸ್ ವಿಜೇತರಾಗಿ 50 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ. ಆದರೆ ಭಾರತೀಯ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಯಾವುದೇ ರಿಯಾಲಿಟಿ ಶೋ ಅಥವಾ ಲಾಟರಿ ಮೂಲಕ ಗೆಲ್ಲುವ ಹಣಕ್ಕೆ ಶೇಕಡಾ 30ರಷ್ಟು ತೆರಿಗೆ ಅನ್ವಯವಾಗುತ್ತದೆ. ಇದರ ಪರಿಣಾಮವಾಗಿ ಗಿಲ್ಲಿಗೆ ಘೋಷಣೆಯಾದ 50 ಲಕ್ಷ ರೂಪಾಯಿಯಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ತೆರಿಗೆ ರೂಪದಲ್ಲಿ ಕಡಿತಗೊಳ್ಳಲಿದೆ. ಅಂತಿಮವಾಗಿ ಗಿಲ್ಲಿ ಅವರ ಕೈ ಸೇರುವುದು ಕೇವಲ 35 ಲಕ್ಷ ರೂಪಾಯಿ ಮಾತ್ರ. ಇದರ ಜೊತೆಗೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನ ಮೌಲ್ಯಕ್ಕೂ ತೆರಿಗೆ ಪಾವತಿಸಬೇಕಾದ ಅನಿವಾರ್ಯತೆ ಇರಲಿದೆ ಎನ್ನಲಾಗಿದೆ.
ಸುದೀಪ್ ಅವರ ವಿಶೇಷ ಉಡುಗೊರೆಗೂ ತಪ್ಪದ ಟ್ಯಾಕ್ಸ್
ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಗಿಲ್ಲಿಯ ಆಟಕ್ಕೆ ಮೆಚ್ಚಿ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಈ ಹಣವು ಗಿಲ್ಲಿಯ ಸಂತೋಷವನ್ನು ಇಮ್ಮಡಿಗೊಳಿಸಿದ್ದರೂ, ಇಲ್ಲೂ ಕೂಡ ತೆರಿಗೆ ನಿಯಮಗಳು ಅನ್ವಯ. ಸುದೀಪ್ ಅವರು ನೀಡುವ 10 ಲಕ್ಷ ರೂಪಾಯಿಯಲ್ಲೂ ಸುಮಾರು 3 ಲಕ್ಷ ರೂಪಾಯಿ ತೆರಿಗೆ ಕಡಿತಗೊಂಡು, ಗಿಲ್ಲಿಗೆ ಕೇವಲ 7 ಲಕ್ಷ ರೂಪಾಯಿ ಮಾತ್ರ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣ ತೆರಿಗೆ ರೂಪದಲ್ಲಿ ಸಂದಾಯವಾಗಲಿದೆ.
ರನ್ನರ್ ಅಪ್ ರಕ್ಷಿತಾ ಶೆಟ್ಟಿಗೂ ತಟ್ಟಿದ ತೆರಿಗೆ ಬಿಸಿ
ಕೇವಲ ವಿನ್ನರ್ ಗಿಲ್ಲಿ ಮಾತ್ರವಲ್ಲದೆ, ರನ್ನರ್ ಅಪ್ ಸ್ಥಾನ ಪಡೆದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ಅವರಿಗೂ ಈ ಆರ್ಥಿಕ ಹೊಡೆತ ತಪ್ಪಿಲ್ಲ. ರಕ್ಷಿತಾ ಅವರಿಗೆ ಒಟ್ಟು 25 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದ್ದು, ನಿಯಮದಂತೆ ಇದರಲ್ಲಿ ಶೇಕಡಾ 30ರಷ್ಟು ಹಣ ತೆರಿಗೆಗಾಗಿ ಕಡಿತವಾಗಲಿದೆ. ಅಂದರೆ 25 ಲಕ್ಷ ರೂಪಾಯಿಯಲ್ಲಿ ಸರಿಸುಮಾರು 7.5 ಲಕ್ಷ ರೂಪಾಯಿ ಕಡಿತಗೊಂಡು, ಅಂತಿಮವಾಗಿ ರಕ್ಷಿತಾ ಅವರ ಕೈಗೆ 17 ಲಕ್ಷದ 50 ಸಾವಿರ ರೂಪಾಯಿ ಮಾತ್ರ ಸಿಗಲಿದೆ.

