ಕಿರುತೆರೆ ನಟಿ ಕಾವ್ಯಾಗೌಡ, ನಾದಿನಿ ಪ್ರೇಮಾ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲು
x

ಕಿರುತೆರೆ ನಟಿ ಕಾವ್ಯಾಗೌಡ, ನಾದಿನಿ ಪ್ರೇಮಾ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲು

ಬೆಂಗಳೂರಿನ ಎನ್‌ಆರ್‌ಐ ಲೇಔಟ್‌ನಲ್ಲಿ ವಾಸವಿರುವ ಕಿರುತೆರೆ ನಟಿ ಕಾವ್ಯಾಗೌಡ ಹಾಗೂ ಅವರ ನಾದಿನಿ ಪ್ರೇಮಾ ನಡುವಿನ ಜಗಳ ವಿಕೋಪಕ್ಕೆ ಹೋಗಿದ್ದು, ಇಬ್ಬರೂ ಪರಸ್ಪರ ಹಲ್ಲೆ ಮತ್ತು ಜೀವ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದಾರೆ.


Click the Play button to hear this message in audio format

ಸೀರಿಯಲ್ ನಟಿ ಕಾವ್ಯ ಗೌಡ ಹಾಗೂ ಅವರ ಕುಟುಂಬ ಸದಸ್ಯರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಕಿರುತೆರೆ ನಟಿ ಕಾವ್ಯಾಗೌಡ ಹಾಗೂ ಅವರ ನಾದಿನಿ ಪ್ರೇಮಾ ತಂಡಗಳ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಕಲ್ಕೆರೆ ಬಳಿಯ ಎನ್‌ಆರ್‌ಐ ಲೇಔಟ್‌ನಲ್ಲಿ ಸೋಮಶೇಖರ್ ಹಾಗೂ ನಂದೀಶ್‌ ಕುಮಾರ್ ಎಂಬ ಸಹೋದರರು ತಮ್ಮ ತಂದೆಯೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಸೋಮಶೇಖರ್ ಅವರ ಪತ್ನಿ ನಟಿ ಕಾವ್ಯಾಗೌಡ ಹಾಗೂ ನಂದೀಶ್ ಅವರ ಪತ್ನಿ ಪ್ರೇಮಾ ನಡುವೆ ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ವಿಷಯಕ್ಕೆ ಶುರುವಾದ ಮನಸ್ತಾಪ, ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ದೊಡ್ಡ ಮಟ್ಟದ ಗಲಾಟೆಗೆ ಕಾರಣವಾಗಿದೆ.

ನಟಿ ಕಾವ್ಯಾಗೌಡ ಅವರು ನೀಡಿದ ದೂರಿನಲ್ಲಿ ತಮ್ಮ ಎರಡು ವರ್ಷದ ಮಗುವಿನ ಮೇಲೆ ಹಲ್ಲೆ ನಡೆದಿರುವುದು ಮತ್ತು ಪತಿ ಸೋಮಶೇಖರ್ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಮನೆಯ ಕೆಲಸದಾಕೆಯ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಬಳಿಕ ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದ್ದು, ಪ್ರೇಮಾ ಅವರ ತಂದೆ ರವಿಕುಮಾರ್ ಅವರು ದೊಣ್ಣೆಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ತಮಗೆ ಅವಮಾನ ಮಾಡಿ ಕಾಲಿನಿಂದ ಒದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ಪ್ರೇಮಾ ಅವರು, ಕಾವ್ಯಾಗೌಡ ಹಾಗೂ ಅವರ ಪತಿ ಸೋಮಶೇಖರ್ ಅವರು ವಿನಾಕಾರಣ ಜಗಳ ತೆಗೆದು ಮನೆಯಿಂದ ಹೊರಹೋಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಈ ಗಲಾಟೆಯ ಸಂದರ್ಭದಲ್ಲಿ ಕಾವ್ಯಾ ಅವರ ಸಹೋದರಿ ಭವ್ಯಾಗೌಡ ಅವರು ತಮ್ಮ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಸಿದು ತುಂಡು ಮಾಡಿದ್ದಾರೆ. ತಮ್ಮ ತಂದೆ ಹಾಗೂ ತಂಗಿಯ ಮೇಲೆಯೂ ಹಲ್ಲೆ ನಡೆದಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ರಾಮಮೂರ್ತಿನಗರ ಪೊಲೀಸರು ಸದ್ಯ ಈ ಎರಡು ದೂರುಗಳ ಆಧಾರದ ಮೇಲೆ ಕಾವ್ಯಾಗೌಡ, ಸೋಮಶೇಖರ್, ಭವ್ಯಗೌಡ, ಪ್ರೇಮಾ, ನಂದೀಶ್ ಕುಮಾರ್, ರವಿಕುಮಾರ್ ಹಾಗೂ ಕಸ್ತೂರಿ ಪ್ರಿಯಾ ಎಂಬ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಐವರಿಂದ ಹೇಳಿಕೆಗಳನ್ನು ಸಂಗ್ರಹಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ಸಾಕ್ಷ್ಯವಾಗಿ ಬಳಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರನ್ನೂ ಪ್ರಾಥಮಿಕವಾಗಿ ವಿಚಾರಣೆ ನಡೆಸಿರುವ ಪೊಲೀಸರು, ಸೋಮಶೇಖರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ, ಅವರು ಚೇತರಿಸಿಕೊಂಡ ನಂತರ ಹೆಚ್ಚಿನ ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಪೊಲೀಸರು ಮನೆಗೆ ತೆರಳಿ ಸ್ಥಳ ಮಹಜರು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ, ಮನೆಯೊಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸುವುದರ ಜೊತೆಗೆ, ಮನೆ ಕೆಲಸದವರನ್ನು ಕೂಡ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Read More
Next Story