
98th Oscars| ಆಸ್ಕರ್ ರೇಸ್‌ನಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ-1' ಗೆ ಸ್ಥಾನ
ಅಕ್ಟೋಬರ್ 2, 2025 ರಂದು ಬಿಡುಗಡೆಯಾದ 'ಕಾಂತಾರ: ಚಾಪ್ಟರ್ 1', ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು.
98ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳ ಓಟದಲ್ಲಿ ಭಾರತದ ಎರಡು ಸಿನಿಮಾಗಳು ಸ್ಥಾನ ಪಡೆದುಕೊಂಡಿದ್ದು, ಈ ರೇಸ್‌ನಲ್ಲಿ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1' ಹಾಗೂ ಅನುಪಮ್ ಖೇರ್ ನಿರ್ದೇಶನದ 'ತನ್ವಿ ದಿ ಗ್ರೇಟ್' ಚಿತ್ರಗಳು ಅತ್ಯುತ್ತಮ ಚಿತ್ರ ವಿಭಾಗದ ಅಧಿಕೃತ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಒಟ್ಟು 201 ಫೀಚರ್ ಫಿಲ್ಮ್‌ಗಳ ಪೈಪೋಟಿಯಲ್ಲಿ ಈ ಎರಡು ಚಿತ್ರಗಳು ಕಣದಲ್ಲಿವೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಈ ವರ್ಷದ 'ಅತ್ಯುತ್ತಮ ಚಿತ್ರ' ವಿಭಾಗದ ಸ್ಪರ್ಧೆಗೆ ಚಿತ್ರಗಳನ್ನು ಆಯ್ಕೆ ಮಾಡಲು ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ. ಕೇವಲ ಚಲನಚಿತ್ರ ಬಿಡುಗಡೆಯಾದರೆ ಸಾಲದು, ಅವು ಅಕಾಡೆಮಿಯ 'RAISE' (Representation and Inclusion Standards Entry) ಎಂಬ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಫಾರ್ಮ್ ಅನ್ನು ಸಲ್ಲಿಸಿರಬೇಕು. ಹಾಗಾಗಿ ಅಕಾಡೆಮಿ ನಿಗದಿಪಡಿಸಿದ ನಾಲ್ಕು ಮಾನದಂಡಗಳಲ್ಲಿ ಕನಿಷ್ಠ ಎರಡನ್ನು ಈ ಚಿತ್ರಗಳು ಪೂರೈಸಿವೆ. 2025ರಲ್ಲಿ ಬಿಡುಗಡೆಯಾದ ಮೊದಲ 45 ದಿನಗಳ ಒಳಗೆ ಅಮೆರಿಕದ ಪ್ರಮುಖ 50 ಮಾರುಕಟ್ಟೆಗಳ ಪೈಕಿ ಕನಿಷ್ಠ 10 ನಗರಗಳಲ್ಲಿ ಈ ಚಿತ್ರಗಳು ಪ್ರದರ್ಶನ ಕಂಡಿರಬೇಕು. ಚಿತ್ರಮಂದಿರಗಳಲ್ಲಿ ನಿಗದಿತ ಅವಧಿಯ ಯಶಸ್ವಿ ಪ್ರದರ್ಶನವನ್ನು ಈ ಚಿತ್ರಗಳು ಪೂರ್ಣಗೊಳಿಸಿವೆ ಹಾಗಾಗಿ ಆಸ್ಕರ್ ರೇಸ್‌ನಲ್ಲಿ ಈ ಎರಡು ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ.
'ತನ್ವಿ ದಿ ಗ್ರೇಟ್'
ಈ ವರ್ಷದ ಆಸ್ಕರ್ ಕಣ ಅತ್ಯಂತ ಕಠಿಣವಾಗಿದೆ. ನವೆಂಬರ್ 2025ರಲ್ಲೇ ಅಕಾಡೆಮಿಯು ಅತ್ಯುತ್ತಮ ಸಾಕ್ಷ್ಯಚಿತ್ರ, ಅನಿಮೇಟೆಡ್ ಫೀಚರ್ ಮತ್ತು ಅಂತರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಎಲ್ಲಾ ವಿಭಾಗಗಳನ್ನು ಸೇರಿ ಒಟ್ಟು 317 ಚಿತ್ರಗಳು ಈ ಬಾರಿ ಸ್ಪರ್ಧೆಯಲ್ಲಿದ್ದು, ಭಾರತೀಯ ಚಿತ್ರಗಳು ಈ ಬೃಹತ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿವೆ. 98ನೇ ಅಕಾಡೆಮಿ ಪ್ರಶಸ್ತಿಗಳ ಅಧಿಕೃತ ನಾಮನಿರ್ದೇಶನಗಳ ಪಟ್ಟಿಯು ಜನವರಿ 22ರಂದು ಪ್ರಕಟವಾಗಲಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ನಟ ರಿಷಭ್ ಶೆಟ್ಟಿ ಅವರು ನಿರ್ದೇಶಿಸಿ ನಟಿಸಿದ್ದರು. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದು, ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿತ್ತು. ಈ ಸಿನಿಮಾವನ್ನು ವಿಜಯ್ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್’ನಿರ್ಮಾಣ ಮಾಡಿತ್ತು. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.

