ಆಸ್ಕರ್​​ ಅಂಗಳ ಪ್ರವೇಶಿಸಿದ್ದ ಕಾಂತಾರ, ಮಹಾವತಾರ ನರಸಿಂಹ  ಸಿನಿಮಾಗಳಿಗೆ ಹಿನ್ನಡೆ
x

ಆಸ್ಕರ್​​ ಅಂಗಳ ಪ್ರವೇಶಿಸಿದ್ದ ಕಾಂತಾರ, ಮಹಾವತಾರ ನರಸಿಂಹ ಸಿನಿಮಾಗಳಿಗೆ ಹಿನ್ನಡೆ

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ' ಚಿತ್ರಗಳು ಮೊದಲು ಅಕಾಡೆಮಿ ಬಿಡುಗಡೆ ಮಾಡಿದ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು.


Click the Play button to hear this message in audio format

ವಿಶ್ವ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಎಂದೇ ಗುರುತಿಸಿಕೊಂಡಿರುವ ಆಸ್ಕರ್ ರೇಸ್​​ನಲ್ಲಿ ಭಾರತದ ಐದು ಚಿತ್ರಗಳ ಪೈಕಿ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ' ನಾಮಿನೇಷನ್​ ರೇಸ್​ನಲ್ಲಿದ್ದವು. ಆದರೆ ಫೈನಲ್​​ ನಾಮಿನೇಷನ್ಸ್​ ಪ್ರಕಟಗೊಂಡಿದ್ದು ಈ ಎರಡೂ ಸಿನಿಮಾಗಳು ಹಿನ್ನಡೆ ಕಂಡಿವೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮತ್ತು ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ: ಚಾಪ್ಟರ್ 1' ಸಿನಿಮಾವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಅಪರೂಪದ ಮೈಲಿಗಲ್ಲನ್ನು ಸ್ಥಾಪಿಸಿತ್ತು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾವು 2025ರ ಸಾಲಿನ ಎರಡನೇ ಅತಿದೊಡ್ಡ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತ್ತು. ವಿಶ್ವದಾದ್ಯಂತ ಸರಿಸುಮಾರು 850 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್ ಮಾಡಿತ್ತು. ವಿಜಯ್ ಕಿರಗಂದೂರು ಅವರ ನಿರ್ಮಾಣದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

'ಕಾಂತಾರ: ಚಾಪ್ಟರ್ 1' ಟ್ರೇಲರ್‌

ಇದೇ ಸಂಸ್ಥೆಯ ಮತ್ತೊಂದು ಅನಿಮೇಷನ್ 'ಮಹಾವತಾರ ನರಸಿಂಹ' ಚಿತ್ರವು ಕೂಡ ಆಸ್ಕರ್‌ನ 'ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್' ವಿಭಾಗದಲ್ಲಿ ಪ್ರಬಲ ಸ್ಪರ್ಧೆಯೊಡ್ಡಿತ್ತು. ಆಸ್ಕರ್ ಅಂಗಳದಲ್ಲಿ ಈ ವಿಭಾಗಕ್ಕೆ ಆಯ್ಕೆಯಾದ ಭಾರತದ ಮೊದಲ ಅನಿಮೇಷನ್ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು. ಆದರೆ ದುರದೃಷ್ಟವಶಾತ್, ಈ ಎರಡೂ ಚಿತ್ರಗಳು ಅಂತಿಮ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಸ್ವಲ್ಪದರಲ್ಲಿ ಹಿನ್ನಡೆ ಅನುಭವಿಸಿದವು.

'ಮಹಾವತಾರ ನರಸಿಂಹ' ಟ್ರೇಲರ್‌

ಬೆಂಗಳೂರು ಮೂಲದ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ಅವರು 2012ರಲ್ಲಿ ಆರಂಭಿಸಿದ ಹೊಂಬಾಳೆ ಫಿಲ್ಮ್ಸ್, ಇಂದು ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪುನೀತ್ ರಾಜ್‌ಕುಮಾರ್ ಅವರ 'ನಿನ್ನಿಂದಲೆ' ಚಿತ್ರದ ಮೂಲಕ ಆರಂಭವಾದ ಈ ಸಂಸ್ಥೆಯು ಬಳಿಕ ರಾಜಕುಮಾರ, ಕೆಜಿಎಫ್ ಸರಣಿ, ಕಾಂತಾರ, ಸಲಾರ್, ಮತ್ತು ಬಘೀರ ಅಂತಹ ಹಿಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

ಕಾಂತಾರ' 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಅತ್ಯುತ್ತಮ ಮನರಂಜನಾ ಸಿನಿಮಾ' ಪ್ರಶಸ್ತಿ, ರಿಷಬ್​ ಶೆಟ್ಟಿ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ, ಕೆಜಿಎಫ್​ 2 ಸಿನಿಮಾ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ಅವಾರ್ಡ್ ಗೆದ್ದುಕೊಂಡಿತ್ತು. ರಾಷ್ಟ್ರಪ್ರಶಸ್ತಿ ಬೆನ್ನಲ್ಲೇ ವಿಶ್ವ ಪ್ರತಿಷ್ಠಿತ ಆಸ್ಕರ್​ ಅಂಗಳದಲ್ಲಿ ಸ್ಪರ್ಧಿಸಿ, ಕನ್ನಡದ ಕೀರ್ತಿ ಹೆಚ್ಚಿಸಿದೆ. ಆದರೆ ಫೈನಲ್​ ನಾಮಿನೇಷನ್ಸ್​​ನಲ್ಲಿ ಹಿನ್ನಡೆಯಾಗಿದೆ.

Read More
Next Story