
ಆಸ್ಕರ್ ರೇಸ್‌ನಲ್ಲಿ ಹೊಂಬಾಳೆ ಫಿಲ್ಮ್ಸ್‌ನ 'ಕಾಂತಾರ-1' ಮತ್ತು 'ನರಸಿಂಹ'
ಆಸ್ಕರ್ ಅಂಗಳದಲ್ಲಿ ಕನ್ನಡದ ಕಹಳೆ: ‘ನ್ನಡದ 'ಹೊಂಬಾಳೆ'ಯ ಎರಡು ಸಿನಿಮಾ ಪ್ರವೇಶ
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಿರ್ಮಾಣದ 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ' ಚಿತ್ರಗಳು 2026ರ ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ಚಿತ್ರ' ವಿಭಾಗದ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಜಾಗತಿಕ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲ್ಪಟ್ಟಿರುವ ಆಸ್ಕರ್ ಪ್ರಶಸ್ತಿಯ 98ನೇ ಆವೃತ್ತಿಯ ರೇಸ್ ಈಗ ಅಧಿಕೃತವಾಗಿ ಶುರುವಾಗಿದೆ. ವಿಶೇಷವೆಂದರೆ, ಈ ಬಾರಿಯ ಆಸ್ಕರ್ ಅಂಗಳದಲ್ಲಿ ಕನ್ನಡದ ಬಾವುಟ ರಾರಾಜಿಸುತ್ತಿದ್ದು, ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಎರಡು ಬಿಗ್ ಬಜೆಟ್ ಚಿತ್ರಗಳು ಆಸ್ಕರ್‌ನ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. 2026ರ ಸಾಲಿನ ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ಚಿತ್ರ' ಸೇರಿದಂತೆ ವಿವಿಧ ಪ್ರಮುಖ ವಿಭಾಗಗಳಲ್ಲಿ ಸ್ಪರ್ಧಿಸಲು 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ' ಚಿತ್ರಗಳು ಆಯ್ಕೆಯಾಗಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಜಾಗತಿಕ ಮಟ್ಟದಲ್ಲಿ ಹೊಂಬಾಳೆ ಫಿಲ್ಮ್ಸ್ ಸಾಧನೆ
ನಿರ್ಮಾಪಕ ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಫಿಲ್ಮ್ಸ್, ಗುಣಮಟ್ಟದ ಸಿನಿಮಾಗಳ ಮೂಲಕ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದೀಗ ಆಸ್ಕರ್ ಮಟ್ಟದಲ್ಲಿಯೂ ತನ್ನ ಛಾಪು ಮೂಡಿಸುವ ಮೂಲಕ ಸಂಸ್ಥೆಯು ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ವರ್ಷ ಆಸ್ಕರ್‌ನ ಸಾಮಾನ್ಯ ಪ್ರವೇಶ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಐದು ಚಿತ್ರಗಳ ಪೈಕಿ ಎರಡು ಚಿತ್ರಗಳು ಹೊಂಬಾಳೆ ಸಂಸ್ಥೆಯದ್ದೇ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಬಾಕ್ಸ್ ಆಫೀಸ್ ಸುಲ್ತಾನ್ 'ಕಾಂತಾರ: ಚಾಪ್ಟರ್ 1'
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ: ಚಾಪ್ಟರ್ 1' ಸಿನಿಮಾ ತನ್ನ ಕಥಾಹಂದರ ಮತ್ತು ತಾಂತ್ರಿಕ ಶ್ರೀಮಂತಿಕೆಯಿಂದ ವಿಶ್ವದ ಗಮನ ಸೆಳೆದಿದೆ. ಕಳೆದ ವರ್ಷ ಅಕ್ಟೋಬರ್ 2ರಂದು ಬಿಡುಗಡೆಯಾದ ಈ ಚಿತ್ರ, ಮೊದಲ ದಿನವೇ ಬರೋಬ್ಬರಿ 90 ಕೋಟಿ ರೂಪಾಯಿ ಗಳಿಸುವ ಮೂಲಕ ಅಬ್ಬರಿಸಿತ್ತು. ಬಿಡುಗಡೆಯಾದ ಕೇವಲ 11 ದಿನಗಳಲ್ಲಿ 650 ಕೋಟಿ ರೂಪಾಯಿಗಳ ಗಡಿ ದಾಟಿದ್ದ ಸಿನಿಮಾ, ಅಂತಿಮವಾಗಿ ಜಾಗತಿಕವಾಗಿ 850 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿತು. ಕೇವಲ ಕರ್ನಾಟಕವೊಂದರಲ್ಲೇ 250 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ, ರಾಜ್ಯದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರ ಎಂಬ ದಾಖಲೆಯನ್ನೂ ಬರೆದಿದೆ. ಇದೀಗ ಆಸ್ಕರ್‌ನ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ ಹಾಗೂ ಛಾಯಾಗ್ರಹಣ ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿದಿದೆ.
ಅನಿಮೇಷನ್ ಲೋಕದ ಅದ್ಭುತ 'ಮಹಾವತಾರ ನರಸಿಂಹ'
ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ ನರಸಿಂಹ' ಚಿತ್ರವು ಭಾರತೀಯ ಅನಿಮೇಷನ್ ವಲಯದಲ್ಲಿ ಕ್ರಾಂತಿಯನ್ನೇ ಮಾಡಿದೆ ಎಂದು ಹೇಳಬಹುದು. ಜುಲೈ 25, 2025ರಂದು ತೆರೆಕಂಡ ಈ ಸಿನಿಮಾ, ಸುಮಾರು 40 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣಗೊಂಡು, ಭಾರತದಲ್ಲೇ ಬರೋಬ್ಬರಿ 250 ಕೋಟಿ ರೂಪಾಯಿಗಳ ನೆಟ್ ಕಲೆಕ್ಷನ್ ಮಾಡಿದೆ. ಜಾಗತಿಕವಾಗಿ ಒಟ್ಟು 326 ಕೋಟಿ ರೂಪಾಯಿ ಗಳಿಸಿರುವ ಈ ಚಿತ್ರ, 100 ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಅನಿಮೇಷನ್ ಸಿನಿಮಾ ಎಂಬ ಇತಿಹಾಸ ನಿರ್ಮಿಸಿದೆ. ವಿಶೇಷವೆಂದರೆ, ಈ ಚಿತ್ರವು 'ಅತ್ಯುತ್ತಮ ಚಿತ್ರ' ವಿಭಾಗದ ಜೊತೆಗೆ 'ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್' ವಿಭಾಗದಲ್ಲೂ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ.
ಜನವರಿ 22ಕ್ಕೆ ಅಂತಿಮ ಪಟ್ಟಿ ಪ್ರಕಟ
ಸದ್ಯ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ಎರಡೂ ಸಿನಿಮಾಗಳು ಅಂತಿಮ ನಾಮಿನೇಷನ್‌ಗಾಗಿ ಎದುರು ನೋಡುತ್ತಿವೆ. ಜನವರಿ 22 ರಂದು ಆಸ್ಕರ್‌ನ ಅಂತಿಮ ನಾಮಿನೇಷನ್ ಪಟ್ಟಿ ಪ್ರಕಟವಾಗಲಿದ್ದು, ಪ್ರಮುಖ ವಿಭಾಗಗಳಲ್ಲಿ ಕನ್ನಡದ ಸಿನಿಮಾಗಳು ನಾಮಿನೇಟ್ ಆಗಲಿವೆ ಎಂಬ ನಿರೀಕ್ಷೆಯಲ್ಲಿ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ.

