
ವಿಜಯ್ 'ಜನನಾಯಕನ್' ಬಿಡುಗಡೆ ಸಂಕಷ್ಟ; ಸೆನ್ಸಾರ್ ಮಂಡಳಿ ಅಡ್ಡಿ
Jana Nayagan|ವಿಜಯ್ ಸಿನಿಮಾಗೆ ಹೈಕೋರ್ಟ್ ಅಡ್ಡಿ; ಸಂಕಷ್ಟದಲ್ಲಿ 'ಜನನಾಯಕನ್'
ಜನವರಿ 9ರಂದು ಬಿಡುಗಡೆಯಾಗಬೇಕಿದ್ದ 'ಜನನಾಯಕನ್' ಸಿನಿಮಾ ಈಗ ಸಂಕಷ್ಟದಲ್ಲಿದೆ. ಚಿತ್ರದ ಮರುಪರಿಶೀಲನೆಗೆ ಹೊಸ ಸಮಿತಿ ನೇಮಕವಾಗಿದ್ದು, ಹೈಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ತಮಿಳು ಚಿತ್ರರಂಗದ ಸ್ಟಾರ್ ನಟ 'ದಳಪತಿ' ವಿಜಯ್ ಅವರ ಬಹುನಿರೀಕ್ಷಿತ ಚಿತ್ರ 'ಜನನಾಯಕನ್' ಬಿಡುಗಡೆಯ ಬಗ್ಗೆ ಈಗ ದೊಡ್ಡ ಮಟ್ಟದ ಗೊಂದಲ ನಿರ್ಮಾಣವಾಗಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಾವೆಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಬಹುದು ಎಂಬ ಚರ್ಚೆಯ ನಡುವೆ, ಇದೀಗ ಸಿನಿಮಾ ನಿಗದಿತ ದಿನಾಂಕಕ್ಕೆ ತೆರೆಗೆ ಬರುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್‌ಸಿ) ಪ್ರಮಾಣಪತ್ರ ಪಡೆಯುವಲ್ಲಿ ಆಗುತ್ತಿರುವ ವಿಪರೀತ ವಿಳಂಬವೇ ಇದಕ್ಕೆ ಕಾರಣ.
ಹೈಕೋರ್ಟ್ ಮೆಟ್ಟಿಲೇರಿದ ಚಿತ್ರತಂಡ
ಜನನಾಯಕನ್ ಚಿತ್ರದ ಬಿಡುಗಡೆಗೆ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಲು ಚಿತ್ರದ ನಿರ್ಮಾಪಕರು ಮಂಗಳವಾರ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದಿಂದ ಅವರಿಗೆ ಯಾವುದೇ ತಕ್ಷಣದ ಪರಿಹಾರ ದೊರೆತಿಲ್ಲ. ಈ ಪ್ರಕರಣದ ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ವಿಚಾರಣೆ ವೇಳೆ ಸಿಬಿಎಫ್‌ಸಿ ಪರ ವಕೀಲರು, ಚಿತ್ರವನ್ನು ಮತ್ತೊಮ್ಮೆ ಪರಿಶೀಲಿಸಲು ಹೊಸ ಸಮಿತಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ನ್ಯಾಯಾಧೀಶರು, "ಚಿತ್ರದ ಬಿಡುಗಡೆಯನ್ನು ಜನವರಿ 10ಕ್ಕೆ ಮುಂದೂಡಿದರೆ ಏನಾಗುತ್ತದೆ? ಅಂತಹ ತುರ್ತು ಏನು?" ಎಂದು ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ. ಇದರಿಂದಾಗಿ ಜನವರಿ 9ರಂದು ನಿಗದಿಯಾಗಿದ್ದ ಸಿನಿಮಾ ಬಿಡುಗಡೆ ಈಗ ಅನಿಶ್ಚಿತವಾಗಿದೆ.
'ಜನನಾಯಕನ್' ಸಿನಿಮಾದ ಟ್ರೇಲರ್
ಬಾಕ್ಸ್ ಆಫೀಸ್ ಸಮರ
ಥಿಯೇಟರ್ ಮಾಲೀಕರ ಮೇಲೆ ಅಭಿಮಾನಿಗಳ ಆಕ್ರೋಶ
ವಿಜಯ್ ರಾಜಕೀಯ ಪ್ರವೇಶಕ್ಕೂ ಮುನ್ನ ಬರುತ್ತಿರುವ ಕೊನೆಯ ಸಿನಿಮಾ ಇದಾದ್ದರಿಂದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯಿದೆ. ಆದರೆ 'ಪರಾಶಕ್ತಿ' ಚಿತ್ರವು 'ಜನನಾಯಕನ್' ಜೊತೆ ಸ್ಪರ್ಧೆಗೆ ಇಳಿದಿರುವುದು ವಿಜಯ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕುಂಭಕೋಣಂನ ವಾಸು ಸಿನಿಮಾಸ್ ಮಾಲೀಕರು ತಾವು 'ಜನನಾಯಕನ್' ಬದಲು 'ಪರಾಶಕ್ತಿ' ಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಿಸಿದ ಬೆನ್ನಲ್ಲೇ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ನಿಂದನೆ ಮತ್ತು ಅಸಭ್ಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಥಿಯೇಟರ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದು, ತಾವು ಯಾವಾಗಲೂ ವಿಜಯ್ ಸಿನಿಮಾಗಳಿಗೆ ಬೆಂಬಲ ನೀಡಿದ್ದೇವೆ, ಆದರೆ ಈಗ ನಡೆಯುತ್ತಿರುವ ದಾಳಿ ಮನಸ್ಸಿಗೆ ನೋವು ತಂದಿದೆ ಎಂದು ಬೇಸರ ಹಂಚಿಕೊಂಡಿದ್ದಾರೆ.
ಟ್ರೈಲರ್ ವೀವ್ಸ್‌ನಲ್ಲಿ 'ಪರಾಶಕ್ತಿ' ಮೇಲುಗೈ
ಹೈಪ್ ವಿಚಾರದಲ್ಲಿ 'ಜನನಾಯಕನ್' ಮುಂದಿದ್ದರೂ, ಟ್ರೈಲರ್ ವೀಕ್ಷಣೆ ಮತ್ತು ಜನರ ಆಸಕ್ತಿಯಲ್ಲಿ 'ಪರಾಶಕ್ತಿ' ಸದ್ದು ಮಾಡುತ್ತಿದೆ. ವಿಜಯ್ ಅವರ ಚಿತ್ರದ ಟ್ರೈಲರ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಶಿವಕಾರ್ತಿಕೇಯನ್ ಅವರ ಚಿತ್ರದ ಟ್ರೈಲರ್ ಭಾರಿ ಕುತೂಹಲ ಮೂಡಿಸಿದೆ. ಯೂಟ್ಯೂಬ್ ಅಂಕಿಅಂಶಗಳ ಪ್ರಕಾರ, 'ಜನನಾಯಕನ್' ಟ್ರೈಲರ್ ಮೂರು ದಿನಗಳಲ್ಲಿ 40 ಮಿಲಿಯನ್ ವೀಕ್ಷಣೆ ಪಡೆದಿದ್ದರೆ, 'ಪರಾಶಕ್ತಿ' ಕೇವಲ ಎರಡು ದಿನಗಳಲ್ಲಿ 43 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ವಿಜಯ್ ಸಿನಿಮಾವನ್ನು ಹಿಂದಿಕ್ಕಿದೆ.
ಸದ್ಯಕ್ಕೆ ಎಲ್ಲರ ಕಣ್ಣು ಮದ್ರಾಸ್ ಹೈಕೋರ್ಟ್ ಮೇಲಿದ್ದು, ಇಂದಿನ ತೀರ್ಪಿನ ನಂತರವೇ ಈ ಎರಡು ದೊಡ್ಡ ಚಿತ್ರಗಳ ಭವಿಷ್ಯ ನಿರ್ಧಾರವಾಗಲಿದೆ.

