
ನಟ ವಿಜಯ್ ಅವರ 'ಜನ ನಾಯಕನ್' ಚಿತ್ರದ ಬಿಡುಗಡೆ ಸಂಕಷ್ಟ
'ಜನ ನಾಯಗನ್'ಗೆ ಸೆನ್ಸಾರ್ ಬಿಸಿ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಚಿತ್ರತಂಡ
ಸೆನ್ಸಾರ್ ಮಂಡಳಿಯು (CBFC) ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ದಳಪತಿ ವಿಜಯ್ ನಟನೆಯ ಕೊನೆ ಚಿತ್ರ 'ಜನ ನಾಯಗನ್' ಬಿಡುಗಡೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಸೆನ್ಸಾರ್ ಮಂಡಳಿಯ ನಡೆಯನ್ನು ಖಂಡಿಸಿ ಚಿತ್ರತಂಡ ಕಾನೂನು ಹೋರಾಟಕ್ಕೆ ಇಳಿದಿದೆ. ಜ.9 ರಂದು ವಿಶ್ವದಾದ್ಯಂತ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಆದರೆ, ಸೆನ್ಸಾರ್ ಮಂಡಳಿಯಿಂದ (CBFC) ಇನ್ನೂ ಪ್ರಮಾಣಪತ್ರ ದೊರೆಯದ ಕಾರಣ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಎಚ್. ವಿನೋದ್ ನಿರ್ದೇಶನದ ಈ ಚಿತ್ರವನ್ನು ಡಿ.18 ರಂದೇ ಸೆನ್ಸಾರ್ ಮಂಡಳಿಗೆ ಸಲ್ಲಿಸಲಾಗಿತ್ತು. ಮಂಡಳಿಯು ಸೂಚಿಸಿದ ಸಣ್ಣಪುಟ್ಟ ಬದಲಾವಣೆಗಳಿಗೆ ಚಿತ್ರತಂಡ ತಕ್ಷಣವೇ ಒಪ್ಪಿಗೆ ಸೂಚಿಸಿ ಕೆಲಸ ಮುಗಿಸಿಕೊಟ್ಟಿದ್ದರೂ, ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಗೊಂದಲದಿಂದಾಗಿ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಆತಂಕ ಮೂಡಿದೆ. ತಮಿಳುನಾಡಿನಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಸ್ಥಗಿತಗೊಂಡಿದೆ. ಕೇವಲ ವಿಜಯ್ ಅವರ ಚಿತ್ರ ಮಾತ್ರವಲ್ಲದೆ, ಜ. 10 ರಂದು ಬಿಡುಗಡೆಯಾಗಬೇಕಿದ್ದ ಶಿವಕಾರ್ತಿಕೇಯನ್ ಅವರ 'ಪರಾಶಕ್ತಿ' ಚಿತ್ರಕ್ಕೂ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ಸಿಗದ ಕಾರಣ ಚಿತ್ರಮಂದಿರದ ಮಾಲೀಕರು ಮತ್ತು ಪ್ರೇಕ್ಷಕರು ಕಂಗೆಟ್ಟಿದ್ದಾರೆ.
ಮತ್ತೊಂದೆಡೆ, ವಿಜಯ್ ಅವರ ರಾಜಕೀಯ ಪಕ್ಷವಾದ 'ತಮಿಳಗ ವೆಟ್ರಿ ಕಳಗಂ' (TVK) ಈ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಸಿ.ಟಿ. ನಿರ್ಮಲ್ ಕುಮಾರ್ ಅವರು ಸೆನ್ಸಾರ್ ಮಂಡಳಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಪ್ರಮಾಣಪತ್ರ ನೀಡದಿದ್ದರೆ ಮುಂದಿನ ಹಂತದ ಹೋರಾಟದ ಬಗ್ಗೆ ವಿಜಯ್ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈಗಾಗಲೇ ಏಕ ಪರದೆ ಚಿತ್ರಮಂದಿರಗಳಿಗೆ ಬುಕಿಂಗ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಏಕ ಪರದೆಗಳಲ್ಲಿ ಮುಂಜಾನೆ ಶೋಗೆ ಸಾವಿರ ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆದರೂ ಸಿನಿಮಾದಲ್ಲಿ ವಿಜಯ್ ಮುಖ್ಯ ಭೂಮಿಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ಕೊನೆ ಸಿನಿಮಾ ಆಗಲಿದೆ. ಪೂಜಾ ಹೆಗ್ಡೆ, ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ.

